ಭಾರತದಲ್ಲಿ ನಕ್ಸಲರ ರಕ್ತಸಿಕ್ತ ಅಧ್ಯಾಯ ಕೊನೆಗೂಂಡಿರುವುದು ಹರ್ಷದ ಸಂಗತಿ: ಎಂ.ಜಿ.ಮಹೇಶ್‌

KannadaprabhaNewsNetwork |  
Published : Apr 03, 2026, 01:15 AM IST
39 | Kannada Prabha

ಸಾರಾಂಶ

ದೇಶದ ರೆಡ್ ಕಾರಿಡಾರ್ ಎಂದು ಕರೆಯಲ್ಪಡುವ ಭಾಗದಲ್ಲಿ 12 ರಾಜ್ಯಗಳಲ್ಲಿ, ತಿರುಪತಿಯಿಂದ ನೇಪಾಳದ ತನಕ ನಕ್ಸಲ್ ವಾದದ ವಿರುದ್ಧ ಎಲ್ಲಾ ರೀತಿಯ ದೃಢ ಹೋರಾಟವನ್ನು ಸರ್ಕಾರ ಮಾಡಿತು. ಅದರ ಪರಿಣಾಮವಾಗಿ ಸಹಸ್ರಾರು ನಕ್ಸಲರು ಶರಣಾಗತರಾದರು. ಅವರಿಗೆ ಪುನರ್ವಸತಿ ಕಲ್ಪಿಸುವ ಕೆಲಸವನ್ನು ಸರ್ಕಾರ ಮಾಡಿತು.

ಕನ್ನಡಪ್ರಭ ವಾರ್ತೆ ಮೈಸೂರು

ಭಾರತದಲ್ಲಿ ನಕ್ಸಲರ ರಕ್ತಸಿಕ್ತ ಅಧ್ಯಾಯ ಕೊನೆಗೂಂಡಿರುವುದು ಹರ್ಷದ ಸಂಗತಿ. ಇದಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಬಿಜೆಪಿ ವಕ್ತಾರ ಎಂ.ಜಿ. ಮಹೇಶ್‌ ತಿಳಿಸಿದ್ದಾರೆ.

1959ನೇ ಇಸವಿಯಲ್ಲಿ ಬಡವರ ಪರ, ಶೋಷಿತರ ಪರ ಎಂಬ ನೆಲೆಯಲ್ಲಿ ನಕ್ಸಲ್ ಬಾರಿಯಲ್ಲಿ ಹುಟ್ಟಿಕೊಂಡ ಈ ನಕ್ಸಲ್ ಚಳವಳಿ, ಎಡಪಂಥೀಯ ಕಮ್ಯುನಿಸ್ಟ್ ಸಿದ್ಧಾಂತದಿಂದ ಪ್ರೇರಣೆಗೊಂಡ ಈ ಚಳವಳಿ, ಬರಬರುತ್ತಾ ದೇಶದಲ್ಲಿ ರಕ್ತಸಿಕ್ತ ಅಧ್ಯಾಯವಾಗಿ ರೂಪುಗೊಂಡಿರುವುದು ದುರದೃಷ್ಟಕರ. ಬಡವರ ಪರ, ಶೋಷಣೆ ಮಾಡುವ ಜಮೀನ್ದಾರರ ವಿರುದ್ದವಾಗಿ ಹಿಂಸಾತ್ಮಕವಾಗಿ ಬೆಳೆಯಿತು ಎಂದರು.

ಒಟ್ಟು 20 ಸಾವಿರಕ್ಕೂ ಅಧಿಕ ಜನ ಈ ನಕ್ಸಲ್ ಹಿಂಸಾಚಾರಕ್ಕೆ ಬಲಿಯಾದರು. ಅದರಲ್ಲೂ 5,000 ಮಂದಿ ನಮ್ಮ ಸಶಸ್ತ್ರ ಯೋಧರು ಬಲಿಯಾದರು. ಇನ್ನು 15 ಸಾವಿರ ಅಮಾಯಕ ನಾಗರಿಕರ ಹತ್ಯೆಯಾಗಿರುವುದು ಕೂಡ ಇಲ್ಲಿ ಗಮನಿಸಬೇಕಾದ ಅಂಶ ಎಂದು ಅವರು ಹೇಳಿದರು.

57 ವರ್ಷಗಳ ಕಾಲ ನಡೆದು ಬಂದ ಈ ಚಳವಳಿಗೆ ದೇಶದ ಪುರಾತನ ರಾಜಕೀಯ ಪಕ್ಷ ಕಾಂಗ್ರೆಸ್ ಬೆಂಬಲ ಕೊಟ್ಟಿರುವುದನ್ನು ನೋಡಿದ್ದೇವೆ. ಉದಾಹರಣೆಗೆ, ಕಳೆದ ಬಾರಿ ಉಪರಾಷ್ಟ್ರಪತಿ ಚುನಾವಣೆ ನಡೆದಾಗ ಕಾಂಗ್ರೆಸ್ ಪಕ್ಷವು ನಕ್ಸಲ್ ಪರವಾಗಿರುವ ಮಾಜಿ ನ್ಯಾಯಮೂರ್ತಿ ಜಿ. ಸುದರ್ಶನ್ ರೆಡ್ಡಿ ಅವರನ್ನು ಕಣಕ್ಕಿಳಿಸಿತ್ತು.

2014 ರಿಂದ ಮೋದಿಯವರ ನೇತೃತ್ವದ ಸರ್ಕಾರ ಎಲ್ಲಾ ಆಯಾಮಗಳಲ್ಲೂ ನಕ್ಸಲ್ ವಾದವನ್ನು ಹೆಡೆಮುರಿ ಕಟ್ಟುವ ಕೆಲಸವನ್ನು ಮಾಡುತ್ತ ಬಂದಿದೆ. ಹಿಂದುಳಿದ ಪ್ರದೇಶಗಳನ್ನು ಸಮಗ್ರವಾಗಿ ಅಭಿವೃದ್ದಿ ಮಾಡುವ ಮೂಲಕ, ದೊಡ್ಡ ಪ್ರಮಾಣದ ಹಣವನ್ನು ಅಭಿವೃದ್ಧಿಗಾಗಿ ಬಿಡುಗಡೆ ಮಾಡುವ ಮೂಲಕ, ನಕ್ಸಲ್ ವಾದದ ಮೂಲಕ್ಕೇ ಕೊಡಲಿಯೇಟು ಹಾಕಿತು ಎಂದರು.

ದೇಶದ ರೆಡ್ ಕಾರಿಡಾರ್ ಎಂದು ಕರೆಯಲ್ಪಡುವ ಭಾಗದಲ್ಲಿ 12 ರಾಜ್ಯಗಳಲ್ಲಿ, ತಿರುಪತಿಯಿಂದ ನೇಪಾಳದ ತನಕ ನಕ್ಸಲ್ ವಾದದ ವಿರುದ್ಧ ಎಲ್ಲಾ ರೀತಿಯ ದೃಢ ಹೋರಾಟವನ್ನು ಸರ್ಕಾರ ಮಾಡಿತು. ಅದರ ಪರಿಣಾಮವಾಗಿ ಸಹಸ್ರಾರು ನಕ್ಸಲರು ಶರಣಾಗತರಾದರು. ಅವರಿಗೆ ಪುನರ್ವಸತಿ ಕಲ್ಪಿಸುವ ಕೆಲಸವನ್ನು ಸರ್ಕಾರ ಮಾಡಿತು.

ಈ ಪ್ರದೇಶಗಳಲ್ಲಿ ಬ್ಯಾಂಕಿಂಗ್, ಮೂಲ ಸೌಕರ್ಯ, ಮಹಿಳೆಯರ ಸಬಲೀಕರಣ, ಉದ್ಯೋಗ ಸೃಷ್ಟಿ, ಇವೆಲ್ಲವನ್ನೂ ಮಾಡಿದ್ದರ ಫಲವಾಗಿ ಇವತ್ತು ದೃಢ ನಿರ್ಧಾರದ ಸರ್ಕಾರ ಏನೆಲ್ಲ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದರ ಫಲವಾಗಿ, ನಕ್ಸಲ್ ವಾದ ನಿರ್ಮೂಲನೆಗೊಂಡಿದೆ ಎಂದು ಅವರು ಹೇಳಿದರು.

ಇಂತಹ ತಥಾಕಥಿತ ವ್ಯಕ್ತಿಗಳು ಯಾರು ಅನ್ನುವುದು ಸಮಾಜಕ್ಕೆ ತಿಳಿದಿದೆ. ಸಮಾಜವೇ ಜಾಗೃತವಾಗಿದ್ದುಕೊಂಡು, ದಾರಿತಪ್ಪಿಸುವಂತಹ ವ್ಯಕ್ತಿಗಳ ವಿರುದ್ಧ ಸದಾ ಎಚ್ಚರಿಕೆಯಿಂದ ಇದ್ದಾಗ ಭಾರತದಲ್ಲಿ‌ ಮತ್ತೆಂದೂ ನಕ್ಸಲ್ ಚಳವಳಿ ತಲೆ ಎತ್ತುವುದಿಲ್ಲ. ಸರ್ಕಾರ ಅತ್ಯಂತ ಪರಿಶ್ರಮದಿಂದ ಅದರ ಅಂತ್ಯ ಮಾಡಿರುವುದನ್ನು ನಾವು ನಾಗರಿಕರು ಬೆಂಬಲಿಸಬೇಕು. ಇಂತಹ ಹಿಂಸಾತ್ಮಕ ಸಿದ್ಧಾಂತ ತಲೆ ಎತ್ತದಂತೆ ಮಾಡುವುದು, ಪುರಾತನ ಕಾಂಗ್ರೆಸ್ ಪಕ್ಷ ಇದಕ್ಕೆ ಬೆಂಬಲ ನೀಡುವುದನ್ನು ಕೊನೆಗೊಳಿಸುವಂತೆ ಮಾಡುವುದು ನಾಗರಿಕರ ಕೈಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಳ್ಳಕೆರೆ ಅದ್ಧೂರಿ ಲಕ್ಷ್ಮೀರಂಗನಾಥ ಸ್ವಾಮಿ ರಥೋತ್ಸವ
ವಚನಕಾರ ಕ್ಷಿತಿಜದ ಉಜ್ವಲ ನಕ್ಷತ್ರ ಅಕ್ಕ: ಪ್ರಾಧ್ಯಾಪಕಿ ಡಾ.ಗಾಯತ್ರಿ