ಹವಾಮಾನ ಬದಲಾವಣೆಯಿಂದ ಜಾಗತಿಕ ಆತಂಕ: ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್

KannadaprabhaNewsNetwork |  
Published : Jun 06, 2026, 01:30 AM IST
ಪೋಟೋ: 05ಎಸ್ಎಂಜಿಕೆಪಿ02ಶಿವಮೊಗ್ಗದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಇಎಂಪಿಆರ್‌ಐ), ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‌ಸಿಎಸ್‌ಟಿ) ಸಹಯೋಗದೊಂದಿಗೆ ಹವಾಮಾನ ಬದಲಾವಣೆಯ ಕುರಿತು ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ಮಾತನಾಡಿದರು. | Kannada Prabha

ಸಾರಾಂಶ

ಹವಾಮಾನ ಬದಲಾವಣೆಯು ಪ್ರಸ್ತುತ ಇಡೀ ಜಗತ್ತನ್ನು ಕಾಡುತ್ತಿರುವ ಅತ್ಯಂತ ಗಂಭೀರವಾದ ಪರಿಸರ ಸಮಸ್ಯೆಯಾಗಿದ್ದು, ಈ ಹವಾಮಾನ ಬದಲಾವಣೆಯು ನಮ್ಮ ಪರಿಸರ, ಆರೋಗ್ಯ, ಕೃಷಿ ಮತ್ತು ಆರ್ಥಿಕತೆಯ ಮೇಲೆ ಬೀರುತ್ತಿರುವ ಪ್ರಮುಖ ಪರಿಣಾಮಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ ಸುಸ್ಥಿರ ಜೀವನ ಶೈಲಿ ಮತ್ತು ವೈಜ್ಞಾನಿಕ ಕ್ರಿಯಾ ಯೋಜನೆಗಳನ್ನು ರೂಪಿಸಿಕೊಳ್ಳಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹವಾಮಾನ ಬದಲಾವಣೆಯು ಪ್ರಸ್ತುತ ಇಡೀ ಜಗತ್ತನ್ನು ಕಾಡುತ್ತಿರುವ ಅತ್ಯಂತ ಗಂಭೀರವಾದ ಪರಿಸರ ಸಮಸ್ಯೆಯಾಗಿದ್ದು, ಈ ಹವಾಮಾನ ಬದಲಾವಣೆಯು ನಮ್ಮ ಪರಿಸರ, ಆರೋಗ್ಯ, ಕೃಷಿ ಮತ್ತು ಆರ್ಥಿಕತೆಯ ಮೇಲೆ ಬೀರುತ್ತಿರುವ ಪ್ರಮುಖ ಪರಿಣಾಮಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ ಸುಸ್ಥಿರ ಜೀವನ ಶೈಲಿ ಮತ್ತು ವೈಜ್ಞಾನಿಕ ಕ್ರಿಯಾ ಯೋಜನೆಗಳನ್ನು ರೂಪಿಸಿಕೊಳ್ಳಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ತಿಳಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಇಎಂಪಿಆರ್‌ಐ), ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‌ಸಿಎಸ್‌ಟಿ) ಸಹಯೋಗದೊಂದಿಗೆ ಹವಾಮಾನ ಬದಲಾವಣೆಯ ಕುರಿತು ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ, ಹವಾಮಾನ ಸಮತೋಲನ ತಪ್ಪುತ್ತಿದೆ. ಇದರಿಂದ ಅನಿಶ್ಚಿತ ಮಳೆ, ಇಳುವರಿಯಲ್ಲಿ ಕುಸಿತ, ಪ್ರವಾಹ, ಭೂ ಕುಸಿತ, ಬಿಸಿಗಾಳಿ, ಆರೋಗ್ಯದಲ್ಲಿ ವೈಪರೀತ್ಯಗಳನ್ನು ಎದುರಿಸುತ್ತಿದ್ದೇವೆ. ಜಾಗತಿಕ ತಾಪಮಾನದ ಪರಿಣಾಮವಾಗಿ ಧ್ರುವ ಪ್ರದೇಶಗಳಲ್ಲಿನ ಹಿಮನದಿಗಳು ಹಾಗೂ ಹಿಮಾಲಯದ ಮಂಜುಗಡ್ಡೆಗಳು ವೇಗವಾಗಿ ಕರಗುತ್ತಿವೆ ಎಂದರು.

ಇದರಿಂದಾಗಿ ಸಮುದ್ರದ ನೀರಿನ ಮಟ್ಟ ವರ್ಷದಿಂದ ವರ್ಷಕ್ಕೆ ಏರುತ್ತಿದ್ದು, ಕರಾವಳಿ ತೀರದ ನಗರಗಳು ಮತ್ತು ದ್ವೀಪಗಳು ಮುಳುಗಡೆಯಾಗುವ ಭೀತಿ ಎದುರಿಸುತ್ತಿವೆ. ಮಂಗಳೂರು, ಮುಂಬೈನಂತಹ ನಗರಗಳು ಸಹ ಮುಳುಗುತ್ತಿರುವುದನ್ನು ಕಾಣುತ್ತಿದ್ದೇವೆ ಹಾಗೂ ಹವಾಮಾನ ಬದಲಾವಣೆಯಿಂದ ಮಲೆನಾಡು ಬಯಲುಸೀಮೆಯಾಗಿ, ಮರಳುಗಾಡು ಮಳೆ ಪಡೆಯುವ ನಾಡಾಗುತ್ತಿರುವುದನ್ನು ಕಾಣುತ್ತಿದ್ದೇವೆ ಎಂದರು.

ಜಿಪಂ ಮುಖ್ಯ ಯೋಜನಾಧಿಕಾರಿ ಹನುಮಾನಾಯ್ಕ ಮಾತನಾಡಿ, ಹವಾಮಾನ ವೈಪರೀತ್ಯಗಳನ್ನು ನಿರ್ವಹಿಸಲು ವೈಜ್ಞಾನಿಕವಾದ ಯೋಜನೆಗಳನ್ನು ರೂಪಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ(ಎಂಪ್ರಿ) ಹವಾಮಾನ ಬದಲಾವಣೆ ಕುರಿತು ರಾಜ್ಯ ಕ್ರಿಯಾ ಯೋಜನೆ ರೂಪಿಸಿದ್ದು, ಇದನ್ನು ವಿವಿಧ ಇಲಾಖೆಗಳ ಅಧಿಕಾರಿಗಳು ತಿಳಿದುಕೊಂಡು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಈ ಕಾರ್ಯಾಗಾರವನ್ನು ಗ್ರಾಮ ಪಂಚಾಯಿತಿ ಹಂತದಲ್ಲೂ ಮಾಡಿದರೆ ಇನ್ನೂ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಬೆಂಗಳೂರಿನ ಎಸಿಡಬ್ಲ್ಯೂಆರ್‌ಎಂ ಜಲ ಸಂಪನ್ಮೂಲ ತಜ್ಞರಾದ ಡಾ. ಉಷಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿವಮೊಗ್ಗದ ಎನ್ ಆರ್‌ಡಿಎಂಎಸ್‌ ಅಧಿಕಾರಿ ಪಿ.ಶಂಕರ್ ಹಾಗೂ ಎಂಪ್ರಿ ಸಂಸ್ಥೆಯ ಕಾರ್ಯಕ್ರಮ ಸಂಯೋಜಕರಾದ ರುಚಿತಾಶ್ರೀ ಮತ್ತು ರಾಘವೇಂದ್ರ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಕೃತಿ ಉಳಿಸುವುದು ನಮ್ಮೆಲ್ಲರ ಹೊಣೆ
ಪರಿಸರ ದಿನಾಚರಣೆ ಪ್ರಯುಕ್ತ ಸ್ವಚ್ಛತಾ ಕಾರ್ಯ