ವಿಶ್ವಮಟ್ಟದಲ್ಲಿ ಭಾರತೀಯ ವೈದ್ಯರಿಗೆ ಬಹುಬೇಡಿಕೆ: ಗೃಹ ಸಚಿವ ಜಿ.ಪರಮೇಶ್ವರ್

KannadaprabhaNewsNetwork | Published : Nov 10, 2024 1:37 AM

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಕ್ಯಾಂಪಸ್‌ಗಳಲ್ಲಿ ರ‍್ಯಾಗಿಂಗ್ ನಡೆಯುವುದು ಕಡಿಮೆಯಾಗಿದೆ. ಹಾಗಂತ ಕಾನೂನು ವ್ಯಾಪ್ತಿ ಮೀರಿ ರ‍್ಯಾಗಿಂಗ್ ನಂತಹ ಚಟುವಟಿಗಳನ್ನು ನಡೆಸಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಖಿಲ ಭಾರತ ವೈದ್ಯಕೀಯ ಪರಿಷತ್ತು ನಿಬಂಧನೆಗಳನ್ನು ವಿಧಿಸಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ವಿಶ್ವಮಟ್ಟದಲ್ಲಿ ಭಾರತದ ವೈದ್ಯರಿಗೆ ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ತಂತ್ರಜ್ಞಾನ ಅಳವಡಿಕೆ, ಪರಸ್ಪರ ಶೈಕ್ಷಣಿಕ ಅಧ್ಯಯನ ಹಾಗೂ ಸಾಂಸ್ಕೃತಿಕ ವಿನಿಮಯಕ್ಕೆ ಸಂಬಂಧಪಟ್ಟಂತೆ ಒಪ್ಪಂದಗಳನ್ನು ಮಾಡಿಕೊಳ್ಳುವುದರ ಮೂಲಕ ಜಾಗತಿಕ ಪೈಪೋಟಿಯನ್ನು ಎದುರಿಸಲು ಸನ್ನದ್ಧರಾಗುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಾಹೇ ವಿವಿ ಕೂಡ ಅಂತಾರಾಷ್ಟ್ರೀಯ ವಿವಿಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ಸಾಹೇ ವಿವಿಯ ಕುಲಾಧಿಪತಿಗಳು ಹಾಗೂ ರಾಜ್ಯ ಗೃಹಮಂತ್ರಿ ಡಾ. ಜಿ ಪರಮೇಶ್ವರ್ ಅವರು ತಿಳಿಸಿದರು.

ನಗರದ ಹೊರವಲಯದ ಅಗಳಕೋಟೆಯ ಡಾ.ಎಚ್.ಎಂ. ಗಂಗಾದರಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಶನಿವಾರದಂದು ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ವಿಶ್ವವಿದ್ಯಾಯಲದ ವ್ಯಾಪ್ತಿಯ ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಡೆಂಟಲ್ ಕಾಲೇಜು ಹಾಗೂ ನೆಲಮಂಗಲದ ಶ್ರೀ ಸಿದ್ಧಾರ್ಥ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರಿಸರ್ಚ್ ಸೆಂಟರ್‌ನ 2024- 25 ನೇ ಶೈಕ್ಷಣಿಕ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ‘ವೈಟ್ ಕೋಟ್ ಧಾರಣೆ ಮತ್ತು ಪ್ರಮಾಣ ವಚನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಈ ಹಿಂದೆ ಇದ್ದ ಕಲಿಕಾ ಪದ್ಧತಿ ಹಾಗೂ ಇಂದಿನ ಕಲಿಕಾ ಪದ್ಧತಿಯಲ್ಲಿ ಅಜಗಜಾಂತರ ವ್ಯತ್ಯಾಸವಿದ್ದು, ಆಧುನಿಕ ತಂತ್ರಜ್ಞಾನದೊಂದಿಗೆ ಕಲಿಕೆ ಸರಳವಾಗಿದೆ. ಅದೇ ರೀತಿ ಪೈಪೋಟಿ ಎದುರಾಗಿದೆ. ವಿಶ್ವ ಮಟ್ಟದಲ್ಲಿ ಫ್ಲೋರಿಡಾ ವಿವಿ, ಆವಲಾನ್ ವಿವಿಗಳೊಂದಿಗೆ ವಿದ್ಯಾರ್ಥಿ, ಪ್ರಾಧ್ಯಾಪಕರ, ತಂತ್ರಜ್ಞಾನ ಹಾಗೂ ಸಾಂಸ್ಕೃತಿಕ ವಿನಿಮಯಕ್ಕೆ ಸಂಬಂಧಪಟ್ಟಂತೆ ಅಂತಾರಾಷ್ಟ್ರೀಯ ವಿವಿಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದ್ದು, ಇಂದು ಸಿದ್ಧಾರ್ಥ ಸಂಸ್ಥೆಯು ತನ್ನ ವಿದ್ಯಾರ್ಥಿಗಳು ವಿಶ್ವಮಟ್ಟದಲ್ಲಿ ಶಿಕ್ಷಣವನ್ನು ಪಡೆಯಲು ಅವಕಾಶವನ್ನು ಸಾಧ್ಯವಾಗಿಸಿದೆ. ಇದು ವಿಶ್ವ ಮಟ್ಟದಲ್ಲಿ ತನ್ನ ಉಪಸ್ಥಿತಿಯನ್ನು ಸಾರಿ ಹೇಳಿದೆ ಎಂದು ಡಾ. ಜಿ ಪರಮೇಶ್ವರ್ ನುಡಿದರು.

ವಿದ್ಯಾರ್ಥಿಗಳು ಕೂಡ ಆತ್ಮವಿಶ್ವಾಸದೊಂದಿಗೆ ತಮ್ಮ ಶೈಕ್ಷಣಿಕ ಬೆಳವಣಿಗೆ ಜೊತೆಗೆ ತಮ್ಮಲ್ಲಿ ಅಡಗಿರುವ ಪ್ರತಿಭೆಗನುಗುಣವಾಗಿ ಗಂಭೀರವಾಗಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಸಾಹಿತ್ಯ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಉನ್ನತ ಮಟ್ಟದಲ್ಲಿ ಭಾಗವಹಿಸಿ ಬೆಳೆಯಬೇಕು. ತಾವು ಕೂಡ ಶೈಕ್ಷಣಿಕ ಆಧ್ಯಯನಕ್ಕೆ ತೊಂದರೆ ಮಾಡಿಕೊಳ್ಳದ ಹಾಗೆ ರಾಷ್ಟ್ರಮಟ್ಟದ ಅಂತರ್ ವಿವಿ ಕ್ರೀಡೆಗಳಲ್ಲಿ ಭಾಗವಹಿಸಿ ಸಾಧನೆಗಳನ್ನು ಮಾಡಿರುವುದನ್ನು ಈ ಸಂದರ್ಭದಲ್ಲಿ ಡಾ. ಪರಮೇಶ್ವರ್ ಸ್ಮರಿಸಿದರು.

ಗ್ರಾಮಾಂತರ ಪ್ರದೇಶದವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ತಲುಪಿಸುವುದು ಸಂಸ್ಥೆಯ ಗುರಿಯಾಗಿದೆ. ಇದರಲ್ಲಿ ಸಂಸ್ಥೆ ಗರಿಷ್ಠ ಮಟ್ಟದ ಸಾಧನೆ ಮಾಡಿರುವುದು ಸಂತೋಷದ ವಿಷಯವಾಗಿದೆ. ವೈದ್ಯಕೀಯ ಮಹಾವಿದ್ಯಾಲಯದಿಂದ 40 ಸಾವಿರ ವೈದ್ಯರು ಹಾಗೂ 30 ಸಾವಿರ ಇಂಜಿನಿಯರ್‌ಗಳನ್ನು ಸಮಾಜಕ್ಕೆ ಸಿದ್ಧಾರ್ಥ ಸಂಸ್ಥೆ ನೀಡಿದೆ ಎಂದು ಡಾ. ಜಿ ಪರಮೇಶ್ವರ್ ಅವರು, ಪ್ರಾಧ್ಯಾಪಕ ವೃಂದದವರು ಅಂತಾರಾಷ್ಟ್ರೀಯ ವಿವಿ ಒಪ್ಪಂದಗಳ ಷರತ್ತಿಗೆ ಒಳಪಟ್ಟು ಹೊರದೇಶಕ್ಕೆ ಹೋಗಿ ಅಧ್ಯಯನ ಮಾಡಿ, ಮರಳಿ ಬಂದು ಸಂಸ್ಥೆಯ ವಿದ್ಯಾರ್ಥಿಗಳಿಗೆ ಕಲಿಸುವ ಗುಣಧರ್ಮ ಬೆಳೆಸಿಕೊಳ್ಳಿ ಎಂದು ಹೇಳಿದರು.

ರಾಜ್ಯ ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ.ಬಿ.ಎಲ್.ಸುಜಾತ ರಾಥೋಡ್ ಅವರು ಮಾತನಾಡಿ, ಸಮಾಜದಲ್ಲಿ ವೈದ್ಯಕೀಯ ವೃತ್ತಿಗೆ ಜವಾಬ್ದಾರಿಯುತ ಸ್ಥಾನವಿದೆ. ಅದರ ಸ್ಥಾನ- ಮಾನಗಳನ್ನು ಅರಿತು ಕಾರ್ಯನಿರ್ವಹಣೆಗೆ ನಿಮ್ಮ ಮನೋಸ್ಥಿತಿಗಳನ್ನು ಸಜ್ಜುಗೊಳಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಗುಣಮಟ್ಟದ ಶಿಕ್ಷಣ ಪಡೆಯಲು ನಿರಂತರ ಅಧ್ಯಯನ ನಡೆಸಿ:

ಮುಖ್ಯ ಅತಿಥಿಗಳಾಗಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಇತ್ತೀಚಿನ ದಿನಗಳಲ್ಲಿ ಕ್ಯಾಂಪಸ್‌ಗಳಲ್ಲಿ ರ‍್ಯಾಗಿಂಗ್ ನಡೆಯುವುದು ಕಡಿಮೆಯಾಗಿದೆ. ಹಾಗಂತ ಕಾನೂನು ವ್ಯಾಪ್ತಿ ಮೀರಿ ರ‍್ಯಾಗಿಂಗ್ ನಂತಹ ಚಟುವಟಿಗಳನ್ನು ನಡೆಸಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಖಿಲ ಭಾರತ ವೈದ್ಯಕೀಯ ಪರಿಷತ್ತು ನಿಬಂಧನೆಗಳನ್ನು ವಿಧಿಸಿದೆ. ಅವುಗಳನ್ನು ಕಡ್ಡಾಯವಾಗಿ ಪಾಲಿಸಿ ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಸಿದರು.ಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕಾದರೆ ನಿರಂತರ ಅಧ್ಯಯನ ನಡೆಸಿ. ಕಾಲೇಜು ದಿನಗಳನ್ನು ಆಸ್ವಾಧಿಸಿ. ಆದರೆ ಸುಮ್ಮನೆ ಸುತ್ತಾಡಿ ಕಾಲಹರಣ ಮಾಡಬೇಡಿ. ಕ್ರಿಯಾತ್ಮಕವಾಗಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳವುದರ ಮೂಲಕ ಕಾಲ ಕಳೆಯಿರಿ. ಬಿಳಿ ಸಮವಸ್ತ್ರ ಧರಿಸಿದ ನಂತರ ನಿಮ್ಮಲ್ಲಿ ಸಾಮಾಜಿಕ ಜವಾಬ್ದಾರಿ ಹೆಚ್ಚಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಅವರು ಸಲಹೆ ನೀಡಿದರು.

ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಟ್ರಸ್ಟಿಗಳಾದ ಕನ್ನಿಕಾ ಪರಮೇಶ್ವರಿ, ಸಾಹೇ ವಿವಿಯ ಉಪ ಕುಲಪತಿಗಳಾದ ಡಾ.ಕೆ.ಬಿ. ಲಿಂಗೇಗೌಡ, ರಿಜಿಸ್ಟರ್ ಡಾ.ಎಂ.ಝೆಡ್. ಕುರಿಯನ್, ಪರಿಕ್ಷಾಂಗ ನಿಯಂತ್ರಕ ಡಾ.ಜಿ.ಗುರುಶಂಕರ್, ಪ್ರಾಂಶುಪಾಲರಾದ ಡಾ. ಸಾಣಿಕೊಪ್ಪ, ಡಾ.ದಿವಾಕರ್, ಡಾ. ಪ್ರವೀಣ್ ಕುಡುವಾ, ಉಪ ಪ್ರಾಂಶುಪಾಲರಾದ ಡಾ,ಪ್ರಭಾಕರ್ ಸೇರಿದಂತೆ ಸಮೂಹ ಸಂಸ್ಥೆಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ಸಾಹೇ ಕುಲಾಧಿಪತಿಗಳು ವೈದ್ಯಕೀಯ ಸಮವಸ್ತ್ರ ‘ವೈಟ್ ಕೋಟ್’ ಗಳನ್ನು ವಿತರಿಸಿದರು. ಕಾಲೇಜಿನ ಪ್ರಾಂಶುಪಾಲರು ನೂತನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

Share this article