ಉಡುಪಿ: ಉಡುಪಿ ಜಿಲ್ಲೆಯ ಸಾಸ್ತಾನ ಮತ್ತು ಶಿರೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್ ವ್ಯಾಪ್ತಿಯ ಜನರಿಗೆ ನೀಡಿರುವ ರಿಯಾಯಿತಿಯನ್ನು ಹೆಜಮಾಡಿ ಟೋಲ್ ವ್ಯಾಪ್ತಿಯ ಸ್ಥಳೀಯರಿಗೆ ನೀಡುವಂತೆ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಗೆ ಶಿಫಾರಸು ಪತ್ರ ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು. ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ಟೋಲ್ ಸುಂಕ ವಸೂಲಾತಿ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ರಾಹೆ 66ರ ಕೆಲವು ವ್ಯಾಪ್ತಿಯಲ್ಲಿ ಸರ್ವಿಸ್ ರಸ್ತೆಗಳ ನಿರ್ಮಾಣಕ್ಕೆ ಅನುಮತಿ ದೊರಕಿದ್ದು, ಈ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಅಪಘಾತ ತಡೆಯಲು ಹೆದ್ದಾರಿಗಳಲ್ಲಿ ಸರಿಯಾದ ಸೂಚನಾ ಫಲಕ ಅಳವಡಿಸುವ ಮತ್ತಿತರ ಸುರಕ್ಷತಾ ಕ್ರಮಗಳಿಗೆ ಒತ್ತು ನೀಡಬೇಕು ಎಂದು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು. ಸಭೆಯಲ್ಲಿ ಎಸ್ಪಿ ಹರಿರಾಮ್ ಶಂಕರ್, ಎಡಿಸಿ ಅಬೀದ್ ಗದ್ಯಾಳ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕಿರಣ್ ಎಸ್., ರಾಹೆ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್, ಟೋಲ್ ವ್ಯಾಪ್ತಿಯ ನಾಯಕರು ಮತ್ತಿತರರು ಉಪಸ್ಥಿತರಿದ್ದರು.