ಮರಕೃಷಿಯಿಂದ ಜಾಗತಿಕ ತಾಪಮಾನ ತಗ್ಗಿಸಲು ಸಾಧ್ಯ: ರಮೇಶ ಬಳೂಟಗಿ

KannadaprabhaNewsNetwork | Published : Jun 6, 2024 12:32 AM

ಸಾರಾಂಶ

ಕೇವಲ ವಾಣಿಜ್ಯ ಬೆಳೆ ಬೆಳೆಯುವ ಬದಲು ಲಾಭದಾಯಕ ಮರಕೃಷಿ (ಕೃಷಿ ಅರಣ್ಯ ಪದ್ಧತಿಯ) ಮೂಲಕ ಜಾಗತಿಕ ತಾಪಮಾನವನ್ನು ತಡೆಗಟ್ಟಬಹುದು.

ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಪರಿಸರವಾದಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕೇವಲ ವಾಣಿಜ್ಯ ಬೆಳೆ ಬೆಳೆಯುವ ಬದಲು ಲಾಭದಾಯಕ ಮರಕೃಷಿ (ಕೃಷಿ ಅರಣ್ಯ ಪದ್ಧತಿಯ) ಮೂಲಕ ಜಾಗತಿಕ ತಾಪಮಾನವನ್ನು ತಡೆಗಟ್ಟಬಹುದು ಎಂದು ಪರಿಸರವಾದಿ ರಮೇಶ ಬಳೂಟಗಿ ಹೇಳಿದ್ದಾರೆ.

ನಗರದ ಎಸ್ಎಫ್ಎಸ್ ಐಸಿಎಸ್ ಇ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಕುಟುಂಬಗಳು ಕೇವಲ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯದೆ, ಅದರ ಜೊತೆಗೆ ಸ್ವಲ್ಪ ಕೃಷಿ ಅರಣ್ಯ ಪದ್ಧತಿಯನ್ನು ಅಳವಡಿಸಿಕೊಂಡರೆ ಜಾಗತಿಕ ತಾಪಮಾನ ತಡೆಗಟ್ಟಬಹುದು. ಈ ಭಾಗ ಬಿಸಿಲನಾಡು, ಬರದ ನಾಡು ಎಂದು ಕರೆಯಿಸಿಕೊಳ್ಳುತ್ತಿದೆ. ಉತ್ತಮವಾದ ಗಿಡಮರಗಳನ್ನು ಬೆಳೆಸುವ ಮೂಲಕ ಅದ್ಭುತ ಸುಂದರ ನಾಡನ್ನು ಕಟ್ಟಬಹುದು ಎಂದರು.ಬೆಲೆಬಾಳುವಂತಹ ಶ್ರೀಗಂಧದ ಮರ, ರಕ್ತಚಂದನ, ಮಹಾಗನಿ, ರೋಸ್ ವುಡ್ ಮುಂತಾದ ಮರಗಳನ್ನು ಬೆಳೆಸುವ ಮೂಲಕ ನಮ್ಮ ಆರ್ಥಿಕ, ಬದುಕಿನ ಜೊತೆಗೆ ಆರೋಗ್ಯದ ಬದುಕು, ಆದರ್ಶದ ಬದುಕು ಮತ್ತು ಆಧ್ಯಾತ್ಮಿಕ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಜಾಗತಿಕ ತಾಪಮಾನದಿಂದಾಗಿ ಜೀವ ಸಂಕುಲಗಳ ಮೇಲೆ ಅಪಾರವಾದ ಪರಿಣಾಮ ಬೀರುತ್ತಿದೆ. ಆದ್ದರಿಂದ ವಿಶ್ವ ಪರಿಸರ ದಿನಾಚರಣೆಯನ್ನು ಎಲ್ಲೆಡೆ ಪ್ರತಿದಿನ ಆಚರಿಸುವಂತಾಗಬೇಕು ಎಂದರು.

ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾವಿರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ರಸ್ತೆ ಜಾಥಾ‌ ಮೂಲಕ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಿದರು. ಪರಿಸರ ಕಾಪಾಡೋಣ, ಸ್ವಚ್ಛ ಪರಿಸರ ಸುಂದರ ಪರಿಸರ ನಿರ್ಮಿಸೋಣ ಎಂದು ಘೋಷಣೆಗಳನ್ನು ಕೂಗುತ್ತ ಜನರಲ್ಲಿ ಜಾಗೃತಿ ಮೂಡಿಸಿದರು.

ಪರಿಸರ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಡು, ನೃತ್ಯ, ನಾಟಕಗಳನ್ನು ಪ್ರದರ್ಶಿಸಿದರು. ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಸಸಿ ನೆಟ್ಟರು. ಕಾರ್ಯಕ್ರಮದಲ್ಲಿ ಶಾಲೆ ಪ್ರಾಂಶುಪಾಲ ಫಾ. ಜಬಮಲೈ, ಎಸ್ ಎಫ್ ಎಸ್ ಹೈಸ್ಕೂಲ್ ಪ್ರಾಂಶುಪಾಲ ಫಾ. ಜೋಜೋ ಸಂಸ್ಥೆ ವ್ಯವಸ್ಥಾಪಕ ಫಾ. ಮ್ಯಾಥ್ಯೂ ಉಪಸ್ಥಿತರಿದ್ದರು.

Share this article