ಜಾಗತಿಕ ಮಟ್ಟದ್ದಲ್ಲಿ ತಾಪಮಾನ ಏರಿಕೆ; ಇಂಧನ ಉಳಿತಾಯ ಅಗತ್ಯ

KannadaprabhaNewsNetwork | Published : May 15, 2024 1:38 AM

ಸಾರಾಂಶ

ಪ್ರಸ್ತುತ ಬೀದರ ಜಿಲ್ಲೆಯಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳಿಂದ 480 ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ಬೀದರ ಜಿಲ್ಲೆಯು ನಂ.1ಸ್ಥಾನದಲ್ಲಿದೆ

ಕನ್ನಡಪ್ರಭ ವಾರ್ತೆ ಬೀದರ್

ಪ್ರಸ್ತುತ ದಿನಗಳಲ್ಲಿ ತಾಪಮಾನವು ಜಾಗತಿಕ ಮಟ್ಟದ್ದಲ್ಲಿ ಏರಿದ್ದು, ಇಂಧನ ಉಳಿತಾಯ ಇಂದಿನ ತುರ್ತು ಅವಶ್ಯಕತೆಯಾಗಿದೆ ಎಂದು ಜೆಸ್ಕಾಂನ ಕಾರ್ಯಪಾಲಕ ಅಭಿಯಂತರ ರಮೇಶ ಪಾಟೀಲ ಹೇಳಿದರು.

ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪಂಪ್/ಉಪಕರಣಗಳ ತಂತ್ರಜ್ಞರು ಮತ್ತು ವಿದ್ಯಾರ್ಥಿಗಳಿಗಾಗಿ ಬ್ಯುರೋ ಆಫ್ ಎನರ್ಜಿ ಎಫಿಷಿಯೆನ್ಸಿ ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಇವರ ಸಹಯೋಗದಲ್ಲಿ ಏರ್ಪಡಿಸಲಾದ ಇಂಧನ ದಕ್ಷತಾ ಕ್ರಮಗಳ ತಾಂತ್ರಿಕ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಬೀದರ ಜಿಲ್ಲೆಯಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳಿಂದ 480 ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ಬೀದರ ಜಿಲ್ಲೆಯು ನಂ.1ಸ್ಥಾನದಲ್ಲಿದೆ ಎಂದರು.

ಕಮಲ್ ಸೋಲಾರನ ಮುಖ್ಯಸ್ಥರಾದ ಮಲ್ಲಿಕಾರ್ಜುನ ಜೀವಣಗಿ ಮಾತನಾಡಿ, ಸೋಲಾರ್ ಬಳಕೆಯಿಂದ ವಿದ್ಯುತ್ ಉಳಿತಾಯವಾಗುತ್ತದೆ ಎಂದರು.

ಇನ್ನೋರ್ವ ಮುಖ್ಯ ಅತಿಥಿ ಸರ್ಕಾರಿ ಪಾಲಿಟೆಕ್ನಿಕ್ ಕಲಬುರಗಿ ಮಚ್ಛೇಂದ್ರ ಎಸ್.ಮಾತನಾಡಿ, ಆಧುನಿಕ ಜೀವನ ಪದ್ಧತಿಯು ಸಂಪೂರ್ಣವಾಗಿ ವಿದ್ಯುತ್ ಮೇಲೆ ಅವಲಂಬಿತವಾಗಿದೆ. ಪ್ರಸ್ತುತ ಜಗತ್ತಿನ ವಿದ್ಯುಚ್ಛಕ್ತಿ ಬೇಡಿಕೆ ಶೇ.61.5ರಷ್ಟನ್ನು ಪಳೆಯುಳಿಕೆ ಇಂಧನಗಳು ಪೂರೈಸುತ್ತಿವೆ, ಉಳಿದ ವಿದ್ಯುತ್ ಅನ್ನು ಜಲ, ಪವನ, ಸೌರ, ಪರಮಾಣು ಮೂಲಗಳಿಂದ ಪಡೆಯಲಾಗುತ್ತಿದೆ.

ಜಲವಿದ್ಯುತ್ ಕೇಂದ್ರಗಳಿಂದ ವಿದ್ಯುತ್ ಪಡೆಯಲು ಅಪಾರ ಪ್ರಮಾಣದ ಅರಣ್ಯನಾಶ ಹಾಗೂ ಭೂಮಿ ಮುಳುಗಡೆಯ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ, ಹಾಗಾಗಿ ನವೀಕರಿಸಬಹುದಾದ ವಿದ್ಯುತ್ ಮೂಲಗಳೇ ಇಂದಿನ ಅವಶ್ಯಕತೆಗಳಾಗಿವೆ ಎಂದರು.

ಕಾರ್ಯಾಗಾರದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಬೀದರನ ಜಾಕೀರ್ ಹುಸೇನ್, ಗುರುನಾನಕ ದೇವ ಇಂಜಿನಿಯರಿಂಗ್ ಕಾಲೇಜಿನ ಡಾ.ನೀಲಶೆಟ್ಟಿ ಕೆ, ಮತ್ತು ಭವಾನಿ ಇಂಡಸ್ಟ್ರೀಜ್ ರಾಜು ಬೆಮಲಖೇಡಕರ್ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಿಕೊಟ್ಟರು. ಬಕ್ಕಪ್ಪ ನಿರ್ಣಾಕರ ಸ್ವಾಗತಿಸಿ, ಅರುಣ ಮೊಕಾಶಿ ನಿರೂಪಿಸಿ, ಸದಾಶಿವಪ್ಪ ಬಿರಾದಾರ ವಂದಿಸಿದರು. ಅಮಿತ್ ಜನವಾಡಕರ್ ಅವರು ಗೀತಗಾಯನ ನಡೆಸಿಕೊಟ್ಟರು.

ತರಬೇತಿ ಕಾರ್ಯಕ್ರಮದ ಸಮಾರೋಪದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ಪ್ರತಿಯೊಬ್ಬರೂ ಸೋಲಾರ ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್ ಉಳಿತಾಯ ಮಾಡಬೇಕೆಂದರು.

ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ದೇವೇಂದ್ರಪ್ಪ ಹಂಚೆ ಮಾತನಾಡಿ, ತರಬೇತಿಗಳಲ್ಲಿ ವಿದ್ಯಾರ್ಥಿಗಳು ಕೇವಲ ಪ್ರಮಾಣ ಪತ್ರ ಪಡೆಯಲು ಮಾತ್ರ ಭಾಗವಹಿಸಿದೇ ಜ್ಞಾನಾರ್ಜನೆಗಾಗಿ ಭಾಗವಹಿಸಿಬೇಕೆಂದರು.

ಸರ್ಕಾರಿ ಪಾಲಿಟೆಕ್ನಿಕ್‌ನ ಕುಲಸಚಿವರಾದ ಶೇಖ್ ಸಿರಾಜುದ್ದೀನ್ ಮತ್ತು ವಿಜಯಕುಮಾರ ಜಾಧವ ಮಾತನಾಡಿದರು. ವಕೀಲ್ ಎಂ.ಪಟೇಲ್ ನಿರೂಪಿಸಿದರು, ಶಿವಕುಮಾರ ಕಟ್ಟೆ ಸ್ವಾಗತಿಸಿದರೆ, ಗೀತಾ ಪಾಟೀಲ ವಂದಿಸಿದರು. 100 ಜನ ತರಬೇತಿಯಲ್ಲಿ ಭಾಗವಹಿಸಿದ್ದರು. ತರಬೇತಿಯಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

Share this article