ಕನ್ನಡಪ್ರಭ ವಾರ್ತೆ ತುಮಕೂರು
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಅಂಗವಾಗಿಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಗಿನಿಂದಲೇ ಭಕ್ತರು ಸಾಲುಗಟ್ಟಿ ನಿಂತು ಪೂಜೆ ಸಲ್ಲಿಸಿದರು. ಇದರ ಅಂಗವಾಗಿ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯ ವೈಭವದ ರಥೋತ್ಸವ ಜರುಗಿತು. ಮಂಗಳ ವಾದ್ಯಗಳೊಂದಿಗೆ ನೆರವೇರಿದ ಸ್ವಾಮಿಯ ರಥೋತ್ಸವದಲ್ಲಿ ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು. ದಿನವಿಡೀ ಭಕ್ತರಿಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು. ಇದರ ಪ್ರಯುಕ್ತ ಸೋಮವಾರ ದೇವಸ್ಥಾನದ ಯುವ ಸಮಿತಿಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ಆಂಜನೇಯ ಸ್ವಾಮಿಯ ಮೆರವಣಿಗೆ ಏರ್ಪಡಿಸಲಾಗಿದೆ.
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಸಿ.ವಿ. ಮಹದೇವಯ್ಯ, ಉಪಾಧ್ಯಕ್ಷ ವಿಜಯಕುಮಾರ್, ಕಾರ್ಯದರ್ಶಿ ಶಿವಶಂಕರ್, ಖಜಾಂಚಿ ಪಾರ್ಶ್ವನಾಥ್, ಅಜಿತ್‌ಕುಮಾರ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಬಯಲಾಂಜನೇಯ ಸ್ವಾಮಿ ದೇವಸ್ಥಾನನಗರದ ಬಿ.ಎ.ಗುಡಿ ಪಾಳ್ಯದ ಬಯಲಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಅಂಗವಾಗಿ ದೇವರಿಗೆ ಅರಿಷಿಣ-ಕುಂಕುಮ ಅಲಂಕಾರ ಮಾಡಲಾಗಿತ್ತು. ಬೆಳಗಿನಿಂದ ವಿವಿಧ ಹೋಮ, ಹವನ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ನೀಲಕಂಠಶ್ವರ ಭಜನಾ ಮಂಡಲಿಯಿಂದ ಅಯ್ಯಪ್ಪ ಸ್ವಾಮಿಯ ಭಜನೆ ಏರ್ಪಡಿಸಲಾಗಿತ್ತು. ನಗರದ ಹಲವು ಗಣ್ಯರು, ಸಂಘಟನೆಗಳ ಮುಖಂಡರು ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಪೂಜಾಕೈಂಕರ್ಯಗಳಲ್ಲಿ ಪಾಲ್ಗೊಂಡಿದ್ದರು. ದೇವಸ್ಥಾನ ಸಮಿತಿಯಿಂದ ಪ್ರಸಾದ ವಿತರಣೆಯ ವ್ಯವಸ್ಥೆ ಮಾಡಲಾಗಿತ್ತು.
ನಗರದ ಬೆಂಗಳೂರು ಗೇಟ್‌ನ ಆರ್‌ಟಿಒ ಕಚೇರಿ ಆವರಣದ ವರಪ್ರದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೧೪ನೇ ವರ್ಷದ ಹನುಮ ಜಯಂತಿ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಆಂಜನೇಯ ಸ್ವಾಮಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಇದರ ಪ್ರಯುಕ್ತ ವರಪ್ರದ ವೀರಾಂಜನೇಯಸ್ವಾಮಿಗೆ ಹೂವು, ವೀಳ್ಯೆಯದೆಲೆ ಅಲಂಕಾರ ಮಾಡಲಾಗಿತ್ತು.ಬೆಳಗಿನಿಂದ ಸಂಜೆವರೆಗೂ ಭಕ್ತರಿಗೆ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು.