ಕನ್ನಡಪ್ರಭ ವಾರ್ತೆ ಮಂಗಳೂರು
ಕುದ್ರೋಳಿ ಕ್ಷೇತ್ರದಲ್ಲಿ ನವದಿನಗಳ ಪರ್ಯಂತ ಪೂಜಿಸಲ್ಪಟ್ಟ ನಾರಾಯಣ ಗುರು, ಗಣಪತಿ, ಆದಿಶಕ್ತಿ, ನವದುರ್ಗೆಯರು, ಶಾರದಾ ಮಾತೆಯ ವಿಗ್ರಹಗಳ ವಿಸರ್ಜನಾ ಮೆರವಣಿಗೆ ಇದಾಗಿದ್ದು, ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಗಳ ಕಲಾತಂಡಗಳಿಂದ ಮೆರವಣಿಗೆ ನಡೆಯಲಿದೆ. ಜತೆಗೆ ವೈವಿಧ್ಯಮಯ ಟ್ಯಾಬ್ಲೋಗಳ ಪ್ರದರ್ಶನವೂ ಇರಲಿದೆ.
ಭಾನುವಾರ ರಜಾ ದಿನವೂ ಆಗಿರುವುದರಿಂದ ಭಾರೀ ಭಕ್ತ ಜನಸ್ತೋಮವನ್ನು ನಿರೀಕ್ಷಿಸಲಾಗಿದೆ. ವೈಭವದ ಮೆರವಣಿಗೆ ಸಾಗುವ ಬೀದಿಯುದ್ದಕ್ಕೂ ಮಹಾನಗರ ಪಾಲಿಕೆ ವತಿಯಿಂದ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ. ರಸ್ತೆ ಇಕ್ಕೆಲಗಳ ಕಟ್ಟಡಗಳು ಕೂಡ ಅಲಂಕಾರಗೊಂಡು ಶೋಭಾಯಾತ್ರೆಯನ್ನು ಬರಮಾಡಿಕೊಳ್ಳಲಿವೆ.ಅ.13ರಂದು ಸಂಜೆ 4 ಗಂಟೆಗೆ ಶೋಭಾಯಾತ್ರೆ ಆರಂಭವಾಗಲಿದೆ. ಶಾರದೆಯ ಮಂಟಪದ ಬಳಿಕ ಶೋಭಾಯಾತ್ರೆಯ ಮೊದಲು ಮಂಜಲ್‌ಬೈಲ್ ತಂಡದ ಹುಲಿವೇಷ, ಬಳಿಕ ಕಾಳಿಚರಣ್ ತಂಡದ ಹುಲಿವೇಷ ಸಹಿತ ಸ್ತಬ್ದಚಿತ್ರ, ಮೂರನೇ ತಂಡವಾಗಿ ಬರ್ಕೆ ಫ್ರೆಂಡ್ಸ್ ತಂಡದ ಹುಲಿವೇಷ ಹಾಗೂ ಸ್ತಬ್ದಚಿತ್ರ ಸಾಗಲಿದೆ. ಬಳಿಕ ವಿವಿಧ ಸಂಘ ಸಂಸ್ಥೆಗಳ ಹುಲಿವೇಷ, ಟ್ಯಾಬ್ಲೋ, ಸ್ತಬ್ದಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.