ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣಹನುಮ ಜಯಂತಿ ನಿಮಿತ್ತ ಪಟ್ಟಣದಲ್ಲಿ ಸಾವಿರಾರು ಭಕ್ತರು ಹನುಮಮಾಲೆ ಧರಿಸಿ ಹನುಮ ಸಂಕೀರ್ತನಾ ಶೋಭಾಯಾತ್ರೆಯನ್ನು ಭಾನುವಾರ ಸಡಗರ ಸಂಭ್ರಮದಿಂದ ನಡೆಸಿದರು.
ಪಟ್ಟಣದ ಹೊರ ವಲಯದ ಗಂಜಾಂನ ನಿಮಿಷಾಂಭ ದೇವಾಲಯದ ಬಳಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಡಾ.ಭಾನುಪ್ರಕಾಶ್ ಶರ್ಮಾ ವಿಶೇಷ ಪೂಜೆ ಸಲ್ಲಿಸಿ ಆಂಜನೇಯಸ್ವಾಮಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಯ ಸಂಕೀರ್ತನಾ ಯಾತ್ರೆಗೆ ಚಾಲನೆ ನೀಡಿದರು.ಮಂಡ್ಯ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಹನುಮಾ ಮಾಲಾಧಾರಿಗಳು ಗಂಜಾಂನಿಂದ ಪಟ್ಟಣದ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯದ ಮಾರ್ಗದ ಮೂಲಕ ಶ್ರೀ ರಂಗನಾಥಸ್ವಾಮಿ ದೇವಾಲಯದ ಅವರಣದ ವರೆಗೆ ಸುಮಾರು 6 ಕಿ.ಮೀ ಯಾತ್ರೆ ಕೈಗೊಂಡರು.
ಗಂಜಾಂನ ಬೇಸಿಗೆ ಅರಮನೆ, ಬೆಂಗಳೂರು- ಮೈಸೂರು ಹೆದ್ದಾರಿ ಹಾಗೂ ಪುರಾತನ ಕೋಟೆ ದ್ವಾರದಲ್ಲಿ ಯಾತ್ರೆ ಸಂಚರಿಸಿ ಪುರಸಭೆ ವೃತ್ತದಲ್ಲಿ ಸುಮಾರು 1 ಗಂಟೆಗೂ ಅಧಿಕ ಸಮಯ ಶ್ರೀರಾಮ ಹಾಗೂ ಹನುಮಾ ಘೋಷಣೆಯೊಂದಿಗೆ ಶ್ರೀರಾಮನ ಪಾದದ ಮೇಲಾಣೆ, ಹನುಮನ ಪಾದದ ಮೇಲಾಣೆ ಮಂದಿರವನ್ನು ಇಲ್ಲೆ ಕಟ್ಟುವೆವು ಎಂಬ ಪ್ರಮಾಣದೊಂದಿಗೆ ಜಾಮಿಯಾ ಮಸೀದಿ ಜಾಗದಲ್ಲಿ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯ ನಿರ್ಮಿಸುವುದಾಗಿ ಮಾಲಾಧಾರಿಗಳು ಪ್ರಮಾಣ ಮಾಡಿದರು.ಮೆರವಣಿಗೆಯ ಉದ್ದಕ್ಕೂ ಹಿಂದೂ ಹಾಗೂ ಮನುಮಾ ಮಾಲಾಧಾರಿಗಳು ಕೆಸರಿ ದ್ವಜ ಹಿಡಿದು, ಭಗವಧ್ವಜಗಳನ್ನು ಬೀಸಿ, ಜೈ ಶ್ರೀರಾಮ್, ಶ್ರೀರಾಮ್, ಭಜರಂಗಿ ಭಜರಂಗಿ ಎಂಬ ಘೋಷಣೆಗಳು ಮೊಳಗಿಸಿ ಹನುಮ ಚಾಲಿಷ್ ಪಠಿಸಿ ಸಂಭ್ರಮಿಸಿದರು. ಪುಟ್ಟಮಕ್ಕಳು ಹಾಗೂ ಕೆಲವರು ಶ್ರೀರಾಮ, ಲಕ್ಷ್ಮಣ, ಹನುಮಂತ ವೇಷ ತೊಟ್ಟು ಗಮನ ಸೆಳೆದರು. ಮೆರವಣಿಗೆಯಲ್ಲಿ ಡೊಳ್ಳುಕುಣಿತ, ನಗಾರಿ, ಗೊಂಬೆಕುಣಿತ, ತಮಟೆ ಹಾಗೂ ಡಿಜೆ ವಾದ್ಯಗಳೊಂದಿಗೆ ಹನುಮ ಭಕ್ತರು ದಾರಿಯುದ್ದಕ್ಕೂ ಭಜನೆ, ಕೀರ್ತನೆಗಳನ್ನು ಮಾಡಿದರು. ಧಾರ್ಮಿಕ ವಿಧಿ ವಿಧಾನಗಳಂತೆ ಮಾಲಾಧಾರಿಗಳು ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಾಲಯದಲ್ಲಿತಮ್ಮ ಮಾಲೆಗಳನ್ನು ವಿಸರ್ಜಿಸಿದರು.
ಯಾತ್ರೆಗೆ ಜನರ ಸ್ವಾಗತ:ಗಂಜಾಂ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗುತ್ತಿದ್ದ ಸಂಕೀರ್ತನಾ ಯಾತ್ರೆಗೆ ಗ್ರಾಮಸ್ಥರು ಹಾಗೂ ಜನತೆ ತಮ್ಮ ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ ಯಾತ್ರೆಗೆ ಸ್ವಾಗತ ಕೋರಿದರು. ಅಲ್ಲದೇ, ಹನುಮ ಮಾಲಾಧಾರಿಗಳಿಗೆ ಮಜ್ಜಿಗೆ, ಪಾಲಕ, ಹಣ್ಣು ನೀಡಿ ಸತ್ಕರಿಸಿದರು. ಹನುಮನ ಉತ್ಸವ ಮೂರ್ತಿಗೆ ಹಣ್ಣು, ಕಾಯಿ ಹೊಡೆದು ಪೂಜೆ ಸಲ್ಲಿಸಿದರು.
ಜಾಮಿಯಾ ಮಸೀದಿಗೆ ನುಗ್ಗಲು ಯತ್ನ:ಜಾಮಿಯಾ ಮಸೀದಿ ಬಳಿ ಸಂಕೀರ್ತನಾ ಯಾತ್ರೆ ಆಗಮಿಸುತ್ತಿದ್ದಂತೆ ಮಲಾಧಾರಿಗಳು ಪೊಲೀಸರು ನಿರ್ಮಿಸಿದ್ದ ಬ್ಯಾರಿಕೇಟ್ ತಳ್ಳಿ ಜಾಮಿಯಾ ಮಸೀದಿ ಬಳಿ ತೆರಳಲು ಯತ್ನಿಸಿದ ವೇಳೆ ಸ್ಥಳದಲ್ಲಿದ್ದ ಪೊಲೀಸರು ಅವರನ್ನು ತಡೆದು ಹಿಂದಕ್ಕೆ ತಳ್ಳಿದ ಪ್ರಸಂಗ ನಡೆಯಿತು. ಈ ವೇಳೆ ಕೆಲ ಕಾಲ ಮಾತಿನ ಚಕಮಖಿ ನಡೆಸಿದ ಮಾಲಾಧಾರಿಗಳು ಜೈ ಶ್ರೀರಾಮ್, ಜೈ ಹನುಮಾನ್ ಎಂಬ ಘೋಷಣೆ ಕೂಗಿ ಮುಂದೆ ಸಾಗಿದರು.
ಜಿಲ್ಲಾ ನಾನಾ ಭಾಗಗಳಿಂದ ಹನುಮ ಮಾಲಾಧಾರಿಗಳು ಪಟ್ಟಣಕ್ಕೆ ಆಗಮಿಸಿ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಜಿಲ್ಲಾ ಎಸ್ಪಿ ಎನ್. ಯತೀಶ್ ನೇತತ್ವದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು.