ಕಾಂಗ್ರೆಸ್ ಸರಕಾರದ ಜತೆ ಬರಗಾಲ ತಂದಿದೆ

KannadaprabhaNewsNetwork | Published : Dec 25, 2023 1:31 AM

ಸಾರಾಂಶ

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಜೀವಂತ ಇದೆಯೋ, ಸತ್ತಿದೆಯೋ ಗೊತ್ತಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಜೊತೆಗೆ ರಾಜ್ಯಕ್ಕೆ ಭೀಕರ ಬರ ತಂದಿದೆ: ನೂತನವಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ

ಕನ್ನಡಪ್ರಭ ವಾರ್ತೆ ಬಾಗಲಕೋಟೆರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಜೀವಂತ ಇದೆಯೋ, ಸತ್ತಿದೆಯೋ ಗೊತ್ತಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಜೊತೆಗೆ ರಾಜ್ಯಕ್ಕೆ ಭೀಕರ ಬರ ತಂದಿದೆ ಎಂದು ನೂತನವಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕವಾಗಿರುವ ಮುರುಗೇಶ ನಿರಾಣಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ನಮ್ಮ ಸರಕಾರ ಪ್ರಾರಂಭಿಸಿದ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಕಾಂಗ್ರೆಸ್ ಸರಕಾರ ಅರ್ಧಕ್ಕೆ ನಿಲ್ಲಿಸಿದೆ. ಜೊತೆಗೆ ನೂತನ ಯೋಜನೆಗಳನ್ನು ಜಾರಿಗೆ ತರುತಿಲ್ಲ ಎಂದು ಆರೋಪಿಸಿದರು.

ಅಭಿವೃದ್ಧಿ ಮಾಡುತ್ತಿರುವ ಮೋದಿ:

ದೇಶ ಸ್ವಾತಂತ್ರಗೊಂಡು 75 ವರ್ಷ ಯಾರೂ ಮಾಡದ ಅಭಿವೃದ್ಧಿ ಕೆಲಸಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ಆರ್ಥಿಕವಾಗಿ ಜಪಾನ್ ಹಾಗೂ ಜರ್ಮನವನ್ನು ಹಿಂದಿಕ್ಕುವ ಮೂಲಕ ದೇಶ ಮೂರನೇ ಸ್ಥಾನದಲ್ಲಿದೆ. ಇಂತಹ ಮಹಾನ್ ನಾಯಕನನ್ನು ಬೇರೆ ಯಾರಿಗೂ ಹೊಲಿಕೆ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಕಾರ್ಯಕರ್ತರನ್ನು ಕೇಳಿದರೂ ಅವರೂ ಮೋದಿ ಮತ್ತೊಮ್ಮೆ ನಮ್ಮ ಪ್ರಧಾನಿಯಾಗಬೇಕು ಎಂಬ ಅಪೇಕ್ಷೆ ಹೊಂದಿದ್ದಾರೆ ಎಂದು ತಿಳಿಸಿದರು.

ಹಿಜಾಬ್ ಬಗ್ಗೆ ಸಿಎಂ ವಿವಿಧ ಹೇಳಿಕೆ:ಹಿಜಾಬ್ ವಿಷಯ ಸುಪ್ರೀಂ ಕೋರ್ಟ್‌ನಲ್ಲಿರುವ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಹಿಜಾಬ್ ಬಗ್ಗೆ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆಯೊಂದು ಹೇಳಿಕೆ ನೀಡಿದ್ದಾರೆ. ಮುಸ್ಲಿಮರಿಗೆ ₹10 ಸಾವಿರ ಕೋಟಿ ಮೀಸಲಿಡುತ್ತೇವೆ ಎಂದು ಹೇಳುತ್ತಾರೆ. ಆದರೆ, ಹಿಂದೂಗಳಿಗೆ ಏನು ಇಲ್ಲ. ಇಂತಹ ಸರಕಾರವನ್ನು ಕಿತ್ತೊಗೆಯಲು ಜನ ಕಾಯುತ್ತಿದ್ದಾರೆ ಎಂದರು.

ಮೋದಿ ಮೂರನೇ ಬಾರಿ ಪ್ರಧಾನಿ: ಶಾಸಕ ಬಿ.ವೈ.ವಿಜಯೇಂದ್ರ ಅವರಿಗೆ ಇಲ್ಲಿಯವರೆಗೆ ನೀಡಿರುವ ಎಲ್ಲ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿರುವುದನ್ನು ಗಮನಿಸಿ, ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷನಾಗಿ ಪಕ್ಷ ಹಾಗೂ ಬಿಜೆಪಿ ಸರಕಾರದಲ್ಲಿ ವಿವಿಧ ಜವಾಬ್ದಾರಿಗಳನ್ನು ನಾನು ಯಶಸ್ವಿಯಾಗಿ ನಿಭಾಯಿಸಿದ್ದನ್ನು ಗಮನಿಸಿ, ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ನನಗೆ ಈ ಜವಾಬ್ದಾರಿ ನೀಡಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧ್ಯಕ್ಷ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರುಗಳನ್ನು 15 ದಿನದಲ್ಲಿ ನೇಮಕ ಮಾಡಿ, ಪಕ್ಷವನ್ನು ಸಂಘಟನೆಗೊಳಿಸುತ್ತ ಪ್ರಧಾನಿ ಮೋದಿ ಅವರನ್ನು ಮೂರನೇ ಬಾರಿ ಗೆಲ್ಲಿಸುತ್ತೇವೆ. ಜೊತೆಗೆ ಸ್ಥಳೀಯ ಚುನಾವಣೆಗಳಲ್ಲೂ ಪಕ್ಷ ಗೆಲ್ಲಿಸುವತ್ತ ಪಕ್ಷದ ಮುಖಂಡರಲ್ಲಿರುವ ಮುನಿಸನ್ನು ಶಮನಗೊಳಿಸುತ್ತೇವೆ ಎಂದರು.

ಬೆಂಗಳೂರಿನಲ್ಲಿ ಸಭೆ ನಾಳೆ:

ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯಮಟ್ಟದ ನೂತನ ಪದಾಧಿಕಾರಗಳೊಂದಿಗೆ ಬೆಂಗಳೂರಿನಲ್ಲಿ ಡಿ.26ರಂದು ಸಭೆ ಹಮ್ಮಿಕೊಳ್ಳಲಾಗಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ವಾರದಲ್ಲಿ ಜಿಲ್ಲೆಗೆ ಕರೆಸಲಾಗುತ್ತದೆ ಎಂದು ತಿಳಿಸಿದರು.ಎಲ್ಲರನ್ನು ಒಗ್ಗೂಡಿಸುವೆ:

ಜಿಲ್ಲೆಯ ಬಿಜೆಪಿ ಮುಖಂಡರಲ್ಲಿರುವ ಅಸಮಾಧಾನವನ್ನು ಬಗೆಹರಿಸಿ ಎಲ್ಲರನ್ನೂ ಒಟ್ಟುಗೂಡಿಸುತ್ತೇನೆ. ನಾನೇ ಒಂದು ಹೆಜ್ಜೆ ಮುಂದೆ ಹೋಗಿ ಜಿಲ್ಲೆಯ ಬಿಜೆಪಿ ಮುಖಂಡರಲ್ಲಿರುವ ಅಸಮಾಧಾನವನ್ನು ಬಗೆಹರಿಸಿ ಎಲ್ಲರನ್ನೂ ಒಟ್ಟುಗೂಡಿಸಿ, ಲೋಕಸಭೆ ಚುನಾವಣೆಗೆ ಪೂರ್ವದಲ್ಲಿ ಪಕ್ಷವನ್ನು ಹೆಚ್ಚಿಗೆ ಬಲಪಡಿಸುತ್ತೇವೆ. ಜಿಲ್ಲೆಯ ಹಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಯಲ್ಲಿ ಹಗಲಿರುಳು ಶ್ರಮಿಸಲಾಗುತ್ತದೆ ಎಂದು ತಿಳಿಸಿದರು.ನಮ್ಮ ಮುಂದೆ ಕೇವಲ ಲೋಕಸಭೆ ಚುನಾವಣೆಯಿಲ್ಲ. ಮುಂಬರುವ ಜಿಪಂ, ತಾಪಂ ಹಾಗೂ ಗ್ರಾಪಂ ಸೇರಿದಂತೆ ಎಲ್ಲ ಸ್ಥಳೀಯ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಮುಂದಾಲೋಚನೆಯಿಂದ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತೇವೆ. ಮನಸ್ತಾಪದಿಂದ ಪಕ್ಷದಿಂದ ಹೊರಹೊದವರನ್ನು ಪಕ್ಷಕ್ಕೆ ಕರೆತರುವ ಜೊತೆಗೆ ಬಿಜೆಪಿ ತತ್ವ ಸಿದ್ಧಾಂತಗಳನ್ನು ಮೆಚ್ಚಿ, ಪಕ್ಷಕ್ಕೆ ಬರುವವರನ್ನು ಸ್ವಾಗತವಿದೆ ಎಂದರು.

ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ:

ಬೀಳಗಿ ಶಾಸಕರು ಪ್ರಾಮಾಣಿಕರೆಂದು ಬಿಂಬಿಸಿಕೊಳುತ್ತಾರೆ. ಆದರೆ, ಅವರು ವೈಯಕ್ತಿಯವಾಗಿ ಗುತ್ತಿಗೆದಾರರನ್ನು ಏಕೆ ಭೇಟಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ ಕಡಿಮೆ ಶಾಸಕರಿರಬಹುದು. ಆದರೆ, ದೇಶದಲ್ಲಿ ಬಿಜೆಪಿಯ ಹೆಚ್ಚಿನ ಸಂಸದರಿದ್ದೇವೆ. ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ಜನರಿಗೆ ನೀಡಿರುವ ಆಶ್ವಾಸನೆಗಳನ್ನು ಪೂರ್ಣಗೊಳಿಸಿ ಎಂದು ಸಲಹೆ ನೀಡಿದರು.

ನಾನು ಲೋಕಸಭೆ ಟಿಕೆಟ್ ಕೇಳಿಲ್ಲ. ಇಲ್ಲಿಯವರೆಗೆ ನಾನು ಯಾವುದೇ ಜವಾಬ್ದಾರಿಗಳನ್ನು ಕೇಳಿಲ್ಲ. ನನಗೆ ಬಂದಿರುವ ಎಲ್ಲ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂದರು.

ಕೋಮಾದಲ್ಲಿ ಪೈಪ್ ಹಚ್ಚಿಕೊಂಡವರನ್ನು ನಾವಾಗಿ ಪೈಪ್ ಕಿತ್ತಿ ಸಾಯಿಸಲ್ಲ. ಮುಂದಿನ ಐದಾರು ತಿಂಗಳಲ್ಲಿ ಕಾಂಗ್ರೆಸ್ ಡಮಾರ್ ಆಗುತ್ತದೆ ಎಂದರು. ವಿಪ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಮುಖಂಡರಾದ ಅಶೋಕ ಲಿಂಬಾವಳಿ ಹಾಗೂ ಹೂವಪ್ಪ ರಾಠೋಡ ಇದ್ದರು.

--

ಬಾಕ್ಸ್ದೀಪ ಆರುವಾಗ ಹೆಚ್ಚಿಗೆ ಉರಿಯುತ್ತದೆಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಗ್ಗೆ ಕೆಜೆಪಿ-1, 2 ಎಂದು ಆರೋಪ ಮಾಡುವವರು ಯಡಿಯೂರಪ್ಪನವರ ಶಕ್ತಿಯಿಂದ ಬಿಜೆಪಿ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿತ್ತು. ಅವರು 4 ಬಾರಿ ಸಿಎಂ ಆದವರು, ಅವರ ಮಗ ಬಿ.ವೈ.ವಿಜಯೇಂದ್ರ ಪಕ್ಷದ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರಿಂದ ರಾಷ್ಟ್ರೀಯ ನಾಯಕರು ಅವರಿಗೆ ರಾಜ್ಯಾಧ್ಯಕ್ಷ ಮಾಡಿದ್ದಾರೆ. ಹಾದಿ ಬೀದಿಯಲ್ಲಿ ಮಾತನಾಡುವವರ ಬಗ್ಗೆ ಉತ್ತರ ನೀಡುವುದಿಲ್ಲ.ದೀಪ ಆರುವಾಗ ಹೆಚ್ಚಿಗೆ ಉರಿಯುತ್ತದೆ. ವಿಜಯಪುರದವರ ಮಾತಿಗೆ ನಾವ್ಯಾರು ಪ್ರತಿಕ್ರಿಯಿಸಲ್ಲ ಎಂದು ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ ಯತ್ನಾಳಗೆ ಟಾಂಗ್‌ ನೀಡಿದರು.

---

ಕೋಟ್::

2019ರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸರಕಾರ ನಡೆಸುತ್ತಿದ್ದಾಗ ರಾಜ್ಯದಲ್ಲಿ ಬಿಜೆಪಿ 25 ಲೋಕಸಭೆ ಕ್ಷೇತ್ರಗಳನ್ನು ಗೆದ್ದಿತ್ತು. ರಾಜ್ಯದಲ್ಲಿ ಕೋಮಾದಲ್ಲಿರುವ ಕಾಂಗ್ರೆಸ್ ಸರಕಾರದಲ್ಲಿ ಮತ್ತೆ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ದೇಶದಲ್ಲಿ ಒಟ್ಟು 345 ಸಂಸದರನ್ನು ಗೆಲ್ಲಿಸಿ ಮತ್ತೆ ಬಿಜೆಪಿ ದೇಶದಲ್ಲಿ ಅಧಿಕಾರಕ್ಕೆ ಬರಲಿದೆ.

-ಮುರುಗೇಶ ನಿರಾಣಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ

Share this article