ಆಸ್ಟ್ರೇಲಿಯಾದಿಂದ ಧಾರವಾಡಕ್ಕೆ ನುಸುಳಿದ್ದ ಕೋವಿಡ್‌ ಸೋಂಕು!

KannadaprabhaNewsNetwork | Published : Dec 25, 2023 1:31 AM

ಸಾರಾಂಶ

ಕೋವಿಡ್‌ -19 ಧಾರವಾಡ ಜಿಲ್ಲೆಯನ್ನು ಮೊದಲ ಹಂತದಲ್ಲಿಯೇ ತೀವ್ರತರವಾಗಿ ಬಾಧಿಸಿತು. ಮೂಲತಃ ಧಾರವಾಡದ ಹೊಸಯಲ್ಲಾಪೂರದ ನಿವಾಸಿ ಆಸ್ಟ್ರೇಲಿಯಾದಲ್ಲಿ ಸಾಫ್ಟವೇರ್‌ ಎಂಜಿನಿಯರ್‌ ಆಗಿದ್ದ ಯುವಕ ಆಸ್ಟ್ರೇಲಿಯಾದಿಂದ ಧಾರವಾಡಕ್ಕೆ ಮರಳುವ ಸಂದರ್ಭದಲ್ಲಿ ತನಗೆ ಗೊತ್ತಿಲ್ಲದಂತೆ ಕೋವಿಡ್‌ ಹೊತ್ತು ತಂದಿದ್ದನು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಮಾರ್ಚ್‌ 23ರಿಂದ ಮೂರು ಕಿ.ಮೀ. ಕಂಟೇನಮೆಂಟ್‌ ಝೋನ್‌ ಘೋಷಣೆ ಮಾಡಿದ್ದು ಇನ್ನೂ ಬಹಳ ಜನರಿಗೆ ನೆನಪಿದೆ.

- 2020 ಮಾರ್ಚ್‌ 23ರಂದು ಧಾರವಾಡ ಜಿಲ್ಲೆಯಲ್ಲಿ ಮೊದಲ ಕೋವಿಡ್‌ ಸೋಂಕಿತ ಪತ್ತೆ

- ಮೂರು ಅಲೆಗಳಲ್ಲಿ 86 ಸಾವಿರ ಸೋಂಕಿತರು ಗುಣಮುಖ, 1415 ಸೋಂಕಿತರು ಮೃತಕಾಡಿದೆ ಕೋವಿಡ್ ವಿಶೇಷ ಸರಣಿಕೊರೋನಾ ವೈರಸ್‌, ಕೋವಿಡ್‌, ಕ್ವಾರಂಟೈನ್‌, ಕಂಟೋನ್ಮೆಂಟ್‌ ಝೋನ್‌, ಐಸೋಲೇಶನ್‌, ಕೋವಿಶೀಲ್ಡ್‌, ಕೋವ್ಯಾಕ್ಸಿನ್‌, ಓಮಿಕ್ರಾನ್‌.... ಈ ಶಬ್ದಗಳನ್ನು ಕೇಳಿದಾಗ ಈಗಲೂ ಭಯ ಬರುತ್ತದೆ. ಈ ಶತಮಾನದ ಅತ್ಯಂತ ಭೀಕರ ಸಾಂಕ್ರಾಮಿಕ ರೋಗವಾಗಿ ಕಾಡಿರುವ ಕೋವಿಡ್‌ ಸೋಂಕಿನ ರೂಪಾಂತರಿ ವೈರಾಣು ಈಗ ಮತ್ತೆ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಮತ್ತೆ ಕಾಡುವ ಕೋವಿಡ್‌ ಧಾರವಾಡ ಜಿಲ್ಲೆಯ ಜನತೆಯನ್ನು ಆರಂಭದಲ್ಲಿ ಯಾವ ರೀತಿ ಬಾಧಿಸಿತು, ಸೋಂಕಿನಿಂದಾದ ಸಾವು-ನೋವು ನಂತರದಲ್ಲಿ ಯಶಸ್ವಿ ಚುಚ್ಚುಮದ್ದು ಮೂಲಕ ನಿರ್ವಹಣೆ ಹಾಗೂ ಸದ್ಯ ಸೋಂಕಿನಿಂದ ದೂರವಿರಲು ಎಚ್ಚರಿಕೆ ಕ್ರಮಗಳ ಕುರಿತಾಗಿ ಕನ್ನಡಪ್ರಭ ಸರಣಿ ಲೇಖನ ಪ್ರಕಟಿಸುತ್ತಿದೆ.

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಧಾರವಾಡ

2020ರ ಮಾರ್ಚ್ 23 ಧಾರವಾಡದ ಪಾಲಿಗೆ ಕರಾಳ ದಿನ. ಚೀನಾದಿಂದ ಪ್ರಾರಂಭವಾಗಿ ಹತ್ತಾರು ದೇಶಗಳನ್ನು ಬಾಧಿಸಿ ಕರ್ನಾಟಕಕ್ಕೂ ಕಾಲಿಟ್ಟ ಕೋವಿಡ್‌-19 ಸೋಂಕು, ಅಂದು ಆಸ್ಟ್ರೇಲಿಯಾದ ಮೂಲಕ ಧಾರವಾಡಕ್ಕೆ ನುಸುಳಿತು. ಅವತ್ತಿನಿಂದ ಹಿಡಿದು ಇವತ್ತಿನವರೆಗೂ ಕೋವಿಡ್‌ ಸೃಷ್ಟಿಸಿದ ಅವಾಂತರಗಳ ಬಗ್ಗೆ ನಿರಂತರ ಚರ್ಚೆಗಳು ನಡೆದೇ ಇವೆ. ಮತ್ತೆ ಮತ್ತೆ ಕೋವಿಡ್‌ ಕಾಡುತ್ತಲೇ ಇದೆ.

ಕೋವಿಡ್‌ -19 ಧಾರವಾಡ ಜಿಲ್ಲೆಯನ್ನು ಮೊದಲ ಹಂತದಲ್ಲಿಯೇ ತೀವ್ರತರವಾಗಿ ಬಾಧಿಸಿತು. ಮೂಲತಃ ಧಾರವಾಡದ ಹೊಸಯಲ್ಲಾಪುರದ ನಿವಾಸಿ ಆಸ್ಟ್ರೇಲಿಯಾದಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ಯುವಕ ಆಸ್ಟ್ರೇಲಿಯಾದಿಂದ ಧಾರವಾಡಕ್ಕೆ ಮರಳುವ ಸಂದರ್ಭದಲ್ಲಿ ತನಗೆ ಗೊತ್ತಿಲ್ಲದಂತೆ ಕೋವಿಡ್‌ ಹೊತ್ತು ತಂದಿದ್ದನು. ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋದಾಗ ಆತನಿಗೆ ರಕ್ತತಪಾಸಣೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ಸೋಂಕು ದೃಢಪಟ್ಟಿತ್ತು. ಆಗ ಟಿವಿಯಲ್ಲಿ ಕೋವಿಡ್‌ ಬಗ್ಗೆ ಕೇಳಿರುತ್ತಿದ್ದ ಧಾರವಾಡ ಜನತೆ ಬೆಚ್ಚಿಬಿದ್ದು ಮನೆ ಸೇರಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಮಾರ್ಚ್‌ 23ರಿಂದ ಮೂರು ಕಿ.ಮೀ. ಕಂಟೇನಮೆಂಟ್‌ ಝೋನ್‌ ಘೋಷಣೆ ಮಾಡಿದ್ದು ಇನ್ನೂ ಬಹಳ ಜನರಿಗೆ ನೆನಪಿದೆ.

ಲಾಕ್‌ಡೌನ್‌

ಯಾವುದೇ ಕಾರಣಕ್ಕೂ ಸೋಂಕು ಹರಡಬಾರೆಂದು ಅವರ ಸಂಬಂಧಿಕರು ಹಾಗೂ ಆತನ ಸಂಪರ್ಕಕ್ಕೆ ಬಂದವರನ್ನೆಲ್ಲಾ ಪರೀಕ್ಷೆಗೆ ಒಳಪಡಿಸಿ ಅವರನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಜತೆಗೆ ಎಲ್ಲ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಹು-ಧಾ ಮಧ್ಯೆ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಈ ಸಾಂಕ್ರಾಮಿಕ ರೋಗದಿಂದ ಮಾ. 27ರಂದು ಲಾಕ್‌ಡೌನ್‌ ಘೋಷಣೆಯಾಯಿತು.

ಏರಿದ ಸೋಂಕಿತರ ಸಂಖ್ಯೆ

ಮೊದಲ ಬಾರಿಗೆ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಿ ಈ ಯುವಕನಿಗೆ ಏ. 10ರ ವರೆಗೆ ಚಿಕಿತ್ಸೆ ನೀಡಲಾಯಿತು. ಮೊದಲ ಸೋಂಕಿತ ಗುಣಮುಖನಾದನು. ನಂತರದಲ್ಲಿ ಕೋವಿಡ್‌ ಸೋಂಕು ತನ್ನ ಕರಾಳ ಛಾಯೆಯನ್ನು ಜಿಲ್ಲಾದ್ಯಂತ ವಿಸ್ತರಿಸಿತು. ಇದರ ಪರಿಣಾಮ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಏರತೊಡಗಿತು. ಹೀಗಾಗಿ, ಬರೀ ಸರ್ಕಾರಿ ಆಸ್ಪತ್ರೆ ಮಾತ್ರವಲ್ಲದೇ ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಕೋವಿಡ್‌ ವಾರ್ಡ್‌ಗಳನ್ನು ನಿರ್ಮಿಸಿತು. ಈ ಸಮಯದಲ್ಲಿ ಕೋವಿಡ್‌ ಬಗ್ಗೆ ಯಾವುದೇ ಮಾರ್ಗದರ್ಶನ, ಮಾಹಿತಿ ಗೊತ್ತಿಲ್ಲದೇ ವೈದ್ಯರು, ನರ್ಸಗಳು ತೀವ್ರ ಒತ್ತಡದಲ್ಲಿ ಕೆಲಸ ಮಾಡಿದ್ದನ್ನು ಸ್ಮರಿಸಲೇಬೇಕು.

ಜನರು ಲಾಕ್‌ಡೌನ್‌ ಸಮಯದಲ್ಲಿ ಮನೆಯಿಂದ ಹೊರ ಬೀಳದಂತೆ ನಿರ್ಬಂಧ ಸಹ ಹೇರಲಾಗಿತ್ತು. ಹೊರ ಬಂದು ಲಾಠಿ ಏಟು ತಿಂದವರು ಇನ್ನೂ ನೆನಪಿಟ್ಟಿದ್ದಾರೆ. ನಗರದಿಂದ ಗ್ರಾಮೀಣಕ್ಕೆ ಹಬ್ಬಬಾರದೆಂದು ಗ್ರಾಮೀಣ ಜನರು ಊರಿನ ಗಡಿ ಬಂದ್‌ ಮಾಡಿ ನಮ್ಮೂರಿಗೆ ಬೇರೆ ಊರಿನವರ ಪ್ರವೇಶವಿಲ್ಲ ಎಂಬ ಫಲಕ ಸಹ ಹಾಕಿದ್ದುಂಟು. ಆಸ್ಪತ್ರೆ ಹಿಡಿಸದೇ ಸೋಂಕು ಹಬ್ಬುತ್ತಿದ್ದಂತೆ ಸೋಂಕಿತರಿಗೆ ಕ್ವಾರಂಟೈನ್‌ ಮಾಡುವ ಮೂಲಕ 15 ದಿನಗಳ ಕಾಲ ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಯಿತು. ಈ ಸಮಯದಲ್ಲಿ ಗಂಡ-ಹೆಂಡತಿ, ಮಕ್ಕಳು, ಮನೆಯ ಮಂದಿಯೇ ಪ್ರತ್ಯೇಕವಾಗಿ ಜೀವಿಸುವ ಸ್ಥಿತಿ ಉಂಟಾಗಿತ್ತು. ಇಷ್ಟಾಗಿಯೂ ಸಾಂಕ್ರಾಮಿಕ ಕಾಡ್ಗಿಚ್ಚಿನಂತೆ ಜಿಲ್ಲೆಯನ್ನು ಆವರಿಸಿಕೊಂಡಿತು.

ಕೋವಿಡ್‌ ಸೋಂಕು ಇಡೀ ಸಮುದಾಯಕ್ಕೆ ಹಬ್ಬಿದ್ದರಿಂದ ಬರೀ ಆಸ್ಪತ್ರೆಗಳು ಮಾತ್ರವಲ್ಲದೇ ಸಮುದಾಯ ಭವನ, ವಿದ್ಯಾರ್ಥಿ ನಿಲಯಗಳನ್ನು, ಕಲ್ಯಾಣ ಮಂಟಪಗಳನ್ನು ಕೂಡಾ ಕೋವಿಡ್‌ ವಾರ್ಡಗಳಾಗಿ ಪರಿವರ್ತಿಸಲಾಯಿತು. ಅಷ್ಟರಲ್ಲಿ ಜಿಲ್ಲೆಯಲ್ಲಿ 400ರ ವರೆಗೂ ಜನರು ಕೋವಿಡ್‌ ಹೊಡೆತಕ್ಕೆ ಅಸುನೀಗಿದ್ದರು. ಒಂದನೆ ಅಲೆ ಮುಗಿಸಿ 2ನೇ ಅಲೆ ಶುರುವಾಗಲಿದೆ ಎನ್ನುವಷ್ಟರಲ್ಲಿ ಕೋವಿಡ್‌ ಸೋಂಕಿಗೆ ಮಾರಕವಾಗಿ ಕೋವ್ಯಾಕ್ಸಿನ್‌ ಹಾಗೂ ಕೋವಿಶೀಲ್ಡ್‌ ವ್ಯಾಕ್ಸಿನ್‌ ಬಂತು.

ವ್ಯಾಕ್ಸಿನ್‌ ತಂದ ಸಮಾಧಾನ

2021ರ ಮೇ 10ರಂದು ಜಿಲ್ಲೆಯಲ್ಲಿ ಚುಚ್ಚುಮದ್ದು ನೀಡುವ 58 ಕೇಂದ್ರಗಳನ್ನು ತೆರೆಯುವ ಮೂಲಕ ಕೋರೋನಾ ವಾರಿಯರ್ಸ್‌ ಹಾಗೂ ಹಿರಿಯ ನಾಗರಿಕರಿಗೆ ಮೊದಲ ಹಂತದಲ್ಲಿ ಚುಚ್ಚುಮದ್ದು ನೀಡಲಾಯಿತು. ಇದರಿಂದ ಸೋಂಕಿನಿಂದ ಉಂಟಾಗುತ್ತಿದ್ದ ಸಾವನ್ನು ತಡೆಯಲಾಯಿತು. ಇಷ್ಟಾಗಿಯೂ ಒಂದನೆಯ ಅಲೆಗಿಂತ ಸೋಂಕಿನ ತೀವ್ರತೆ ಎರಡನೇ ಅಲೆಯಲ್ಲಿ ಭೀಕರವಾಗಿದ್ದು, ಜನರಿಗೆ ವೆಂಟಿಲೇಟರ್‌ ಕೊರತೆ ತೀವ್ರವಾಗಿ ಬಾಧಿಸಿತು. ವೆಂಟಿಲೇಟರ್‌ ಸೌಲಭ್ಯವಿಲ್ಲದೇ ಹೆಚ್ಚಿನ ಸೋಂಕಿತರು ಸಾವನ್ನಪ್ಪಿದರು. 3ನೇ ಅಲೆಯು ತನ್ನ ತೀವ್ರತೆಯನ್ನು ಕಳೆದುಕೊಂಡಿತು. ಸಾಮಾನ್ಯ ಸಾಂಕ್ರಾಮಿಕವಾಗಿ ಪರಿವರ್ತನೆಯಾಯಿತು. ಜಿಲ್ಲಾಡಳಿತ ಶೇ. 100ರಷ್ಟು ಕೋವ್ಯಾಕ್ಸಿನ್‌, ಕೋವಿಶೀಲ್ಡ್‌ ಪರಿಣಾಮಕಾರಿಯಾಗಿ ಚಚ್ಚುಮದ್ದು ನೀಡಿದ್ದಲ್ಲ 3ನೇ ಅಲೆಯ ಪರಿಣಾಮ ಜನರ ಮೇಲಾಗಲಿಲ್ಲ.

86 ಸಾವಿರ ಸೋಂಕಿತರು

ಕೋವಿಡ್‌-19 ಮೂರು ಅಲೆಗಳಲ್ಲಿ ಜಿಲ್ಲೆಯಲ್ಲಿ 86,538 ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 1415 ಸೋಂಕಿತರು ಮೃತಪಟ್ಟಿದ್ದಾರೆ. ಹುಬ್ಬಳ್ಳಿಯ ಕಿಮ್ಸ್‌, ಜಿಲ್ಲಾಸ್ಪತ್ರೆ ಸೇರಿ ಸರ್ಕಾರಿ ಆಸ್ಪತ್ರೆಗಳಲ್ಲದೇ 31 ಖಾಸಗಿ ಆಸ್ಪತ್ರೆಗಳನ್ನು ಸಹ ಕೋವಿಡ್‌ ಚಿಕಿತ್ಸೆಗೆ ಬಳಸಲಾಗಿತ್ತು. ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸಾದ ಸೋಂಕಿತರ ವೆಚ್ಚವನ್ನು ಸರ್ಕಾರವೇ ನೋಡಿಕೊಂಡಿದ್ದು, ಬಹುತೇಕ ಎಲ್ಲ ಆಸ್ಪತ್ರೆಗಳ ಈ ವೆಚ್ಚವನ್ನು ಸರ್ಕಾರ ಭರಿಸಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

Share this article