ಕನ್ನಡಪ್ರಭ ವಾರ್ತೆ ಮಂಗಳೂರು
ಹಿಜಾಬ್ ನಿಷೇಧ ಆದೇಶ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹೇಳಿದ್ದಾರೆ. ಒಂದು ವೇಳೆ ಮಾಡಿದ್ದರೆ ಪರಿಶೀಲನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದರ ಸಾಧಕ ಬಾಧಕ ನೋಡಿಕೊಂಡು ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ. ಏನೇ ಮಾಡಿದರೂ ಸಂವಿಧಾನದ ಚೌಕಟ್ಟಿನಲ್ಲಿ ಮಾತ್ರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಗೊಂದಲ ಮಾಡುವ ಅವಶ್ಯಕತೆಯಿಲ್ಲ. ಮುಸ್ಲಿಂ ಸಮುದಾಯವದವರು ಹಿಂದಿನಿಂದಲೂ ಸಹ ಹಿಜಾಬ್ ಹಾಕಿಕೊಂಡು ಬರುತ್ತಿದ್ದಾರೆ. ಬಿಜೆಪಿ ಸರ್ಕಾರ ಬಂದಾಗಲಷ್ಟೇ ಅದರ ಬಗ್ಗೆ ಬೇರೆ ಬೇರೆ ವ್ಯಾಖ್ಯಾನ ಆಗಿದೆ. ಇದೀಗ ನಾವು ಸಂವಿಧಾನವನ್ನು ಬಿಟ್ಟು ನಾವು ಯಾವುದೇ ಕೆಲಸ ಮಾಡುವುದಿಲ್ಲ ಎಂದರು.
ಸಂವಿಧಾನದ ಚೌಕಟ್ಟಿನಲ್ಲಿ ಯಾವ ತೀರ್ಮಾನ ಮಾಡಿದರೂ ಕೆಲವರಿಗೆ ನೋವಾಗಬಹುದು, ಕೆಲವರಿಗೆ ಸಂತೋಷವಾಗಬಹುದು. ಆದರೆ ಏನೇ ತೀರ್ಮಾನ ಇದ್ದರೂ ಸಂವಿಧಾನದ ಚೌಕಟ್ಟಿನಲ್ಲಿ ಮಾತ್ರ ತೆಗೆದುಕೊಳ್ಳಲಿದ್ದೇವೆ ಎಂದು ಹೇಳಿದರು.ನೈತಿಕ ಪೊಲೀಸ್‌ಗಿರಿ ಇಳಿಕೆ: ಮಂಗಳೂರಿನಲ್ಲಿ ನೈತಿಕ ಪೊಲೀಸ್‌ಗಿರಿ ಮುಂದುವರಿದಿರುವ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಇತ್ತೀಚಿನ ದಿನಗಳಲ್ಲಿ ನೈತಿಕ ಪೊಲೀಸ್‌ಗಿರಿ ಬಹಳಷ್ಟು ಕಡಿಮೆಯಾಗಿದೆ ಎಂಬ ಮಾಹಿತಿ ದೊರೆತಿದೆ. ಪ್ರಕರಣಗಳು ಕಡಿಮೆ ಆಗಿರುವುದು ನಿಜ. ಈ ಬಗ್ಗೆ ಬಹಳ ಎಚ್ಚರಿಕೆ ವಹಿಸಲು ಹಾಗೂ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಪೊಲೀಸ್ ಕಮಿಷನರ್, ಎಸ್‌ಪಿ, ಐಜಿ ಅವರಿಗೆ ಸೂಚನೆ ನೀಡಿದ್ದೇನೆ. ನೈತಿಕ ಪೊಲೀಸ್‌ಗಿರಿ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ್ದೇನೆ. ಯಾರು ಈ ರೀತಿ ಮಾಡಲ್ಲವೋ ಅವರು ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.ಆ್ಯಂಟಿ ಕಮ್ಯೂನಲ್ ವಿಂಗ್‌ಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಈ ವಿಂಗ್‌ಗೆ ಇನ್ನೂ ಹೆಚ್ಚಿನ ಸಿಬ್ಬಂದಿ ಕೊಡಬೇಕಾಗಿದೆ, ಆ ಕೆಲಸ ನಡೆಯುತ್ತಿದೆ ಎಂದರು.ಮಂಗಳೂರಿನಲ್ಲಿ ನಡೆದ ಆದಿದ್ರಾವಿಡ ಸಮಾವೇಶದಲ್ಲಿ ‘ರಾಜಕೀಯದಲ್ಲಿ ಯಾವುದೇ ಸ್ಥಾನ ಪಡೆದರೂ ಅವನು ದಲಿತ ಎಂದೇ ಕರೆಯುತ್ತಾರೆ’ ಎಂಬ ತಮ್ಮದೇ ಹೇಳಿಕೆ ಕುರಿತು ಸಮಾವೇಶದ ಬಳಿಕ ಪ್ರತಿಕ್ರಿಯಿಸಿದ ಪರಮೇಶ್ವರ್, ಸಾಮಾನ್ಯವಾಗಿ ಈ ರೀತಿ ಹೇಳುತ್ತಾರೆ, ಅದನ್ನೇ ಭಾಷಣದಲ್ಲಿ ಹೇಳಿದ್ದೇನೆ. ಅದರಲ್ಲಿ ಸುಳ್ಳೇನು ಇಲ್ಲ. ಆದರೆ ಮುಖ್ಯಮಂತ್ರಿ ಸ್ಥಾನ ತಪ್ಪಿದಕ್ಕೂ ಅದಕ್ಕೂ ಸಂಬಂಧವಿಲ್ಲ. ಕಾಂಗ್ರೆಸ್‌ನಲ್ಲಿ ಜಾತಿ ಆಧಾರದಲ್ಲಿ ಮುಖ್ಯಮಂತ್ರಿ ಮಾಡಲ್ಲ. ಸಾಮರ್ಥ್ಯ, ಪಕ್ಷಕ್ಕಾಗಿ ಏನು ಕೆಲಸ ಮಾಡಿದ್ದಾರೆ, ಹಿರಿತನ ನೋಡಿ ಮಾಡುತ್ತಾರೆ ಎಂದು ಹೇಳಿದರು.