- ಪ್ರಥಮ ಘಟಿಕೋತ್ಸವದಲ್ಲಿ ಇಸ್ರೋ ಉಪಗ್ರಹ ಕೇಂದ್ರ ಮಾಜಿ ನಿರ್ದೇಶಕ ಡಾ.ಮೈಲ್‌ಸ್ವಾಮಿ ಅಣ್ಣಾದೊರೈ ಅಭಿಮತ
ಕನ್ನಡಪ್ರಭ ವಾರ್ತೆ ದಾವಣಗೆರೆ
ಪದವೀಧರರು ತಮ್ಮ ಶೈಕ್ಷಣಿಕ ಪಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಹೆಮ್ಮೆಯ ಕ್ಷಣವಾಗಿರುತ್ತದೆ. ಇದು ಅವರ ಜೀವನದ ಹೊಸ ಅಧ್ಯಾಯದ ಆರಂಭವೂ ಆಗಿದೆ. ಜಿ.ಎಂ. ವಿಶ್ವವಿದ್ಯಾಲಯದ ಪದವಿಯು ವೃತ್ತಿಜೀವನದ ಅವಕಾಶಗಳನ್ನು ತೆರೆಯುವುದರ ಜೊತೆಗೆ ಕನಸುಗಳನ್ನು ನನಸಾಗಿಸಲು ಮತ್ತು ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡಲು ಸಹಾಯಕವಾಗುತ್ತದೆ ಎಂದು ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಹಾಗೂ ಇಸ್ರೋ ಉಪಗ್ರಹ ಕೇಂದ್ರದ ಮಾಜಿ ನಿರ್ದೇಶಕ ಡಾ. ಮೈಲ್‌ಸ್ವಾಮಿ ಅಣ್ಣಾದೊರೈ ಹೇಳಿದರು.ನಗರದ ಜಿಎಂ ವಿಶ್ವವಿದ್ಯಾಲಯವು ಜಿಎಂಯು ಕ್ಯಾಂಪಸ್‌ನಲ್ಲಿರುವ ಜಿಎಂ ಹಾಲಮ್ಮ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಪ್ರಥಮ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಘಟಿಕೋತ್ಸವ ಭಾಷಣ ಮಾಡಿದರು. ಶ್ರೀಶೈಲ ಎಜುಕೇಷನಲ್ ಟ್ರಸ್ಟ್ ಸ್ಥಾಪಿಸಿ, ಹಣಕಾಸು ಒದಗಿಸಿ ಹಾಗೂ ನಿರ್ವಹಿಸುತ್ತಿರುವ ಜಿಎಂ ವಿವಿ ಬೋಧನೆ, ತರಬೇತಿ ಮತ್ತು ಸಂಶೋಧನೆಯಲ್ಲಿ ಉನ್ನತ ಗುಣಮಟ್ಟದ ಶೈಕ್ಷಣಿಕ ಪರಂಪರೆಯನ್ನು ರೂಪಿಸುತ್ತಿದೆ ಎಂದರು.
“ಅಸಾಧ್ಯ”ವೆಂದು ಭಾಸವಾಗುವುದೇ ಸಾಧ್ಯವಾಗುತ್ತದೆ ಎಂಬುದಕ್ಕೆ ಇಸ್ರೋನ ಚಂದ್ರಯಾನ–3 ಮತ್ತು ಮಂಗಳಯಾನಗಳಂತಹ ಸಾಧನೆ ಉದಾಹರಣೆಗಳಾಗಿವೆ. ನವೀನತೆ ಮತ್ತು ನಿರ್ದೋಷ ಪ್ರಶ್ನಿಸುವ ಮನೋಭಾವ ಕೈಕೈ ಹಿಡಿದು ಸಾಗಬೇಕು. ರಾಷ್ಟ್ರದ ಶಕ್ತಿ ಅದರ ಮಾನವ ಸಂಪನ್ಮೂಲದಲ್ಲಿದೆ. ಯುವ ಪದವೀಧರರು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಬಲ್ಲರು. ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿ, ಆತ್ಮವಿಶ್ವಾಸ, ಪ್ರಾಮಾಣಿಕತೆ ಮತ್ತು ವೃತ್ತಿಪರ ನೈತಿಕತೆಯೊಂದಿಗೆ ರಾಷ್ಟ್ರಸೇವೆಯಲ್ಲಿ ತೊಡಗಬೇಕು ಎಂದು ತಿಳಿಸಿದರು.
ಚಿನ್ನದ ಪದಕ ಪ್ರದಾನ:
ಇದೇ ವೇಳೆ ಎಂಬಿಎ ವಿಭಾಗದ 263 ವಿದ್ಯಾರ್ಥಿಗಳು, ಎಂಸಿಎ ವಿಭಾಗದ 44 ವಿದ್ಯಾರ್ಥಿಗಳು ಹಾಗೂ ಎಂಕಾಂ ವಿಭಾಗದ 11 ವಿದ್ಯಾರ್ಥಿಗಳು ಒಟ್ಟು 318 ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರು ಡಿಆರ್‌ಡಿಒ ಆಡಳಿತ ಮಂಡಳಿ ಮಾಜಿ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಕೆ. ದಿವ್ಯಾನಂದ್, ಗಾಯತ್ರಿ ಸಿದ್ದೇಶ್ವರ್, ಜಿಎಂ ವಿಶ್ವವಿದ್ಯಾಲಯದ ಜಿಎಂಬಿಎಸ್ ಡೀನ್ ಡಾ.ಡಿ.ರವಿನಾಥ್, ಜಿಎಂಎಸ್‌ಎಲ್ ಡೀನ್ ಡಾ.ಬಿ.ಎಸ್.ರೆಡ್ಡಿ, ಎಫ್‌ಸಿಐಟಿ ಡೀನ್ ಡಾ.ಶ್ವೇತಾ ಮರಿಗೌಡರ್, ಎಫ್‌ಬಿಎಎಸ್ ಡೀನ್ ಡಾ.ಬಿ.ಎಂ.ಸಂತೋಷ್, ಎಸ್‌ಸಿಎಸ್‌ಟಿ ನಿರ್ದೇಶಕ ಡಾ.ಎಂ.ಬಿ. ಸಂಜಯ್ ಪಾಂಡೆ, ಎಫ್‌ಇಟಿ ನಿರ್ದೇಶಕ ಡಾ.ಜೆ.ಪ್ರವೀಣ್, ಸ್ಕೂಲ್ ಆಫ್ ಕಾಮರ್ಸ್ ನಿರ್ದೇಶಕರಾದ ಡಾ. ಎಚ್.ಎಸ್. ಶ್ವೇತಾ, ಉಪ ಕುಲಸಚಿವರಾದ (ಮೌಲ್ಯಮಾಪನ) ಡಾ.ಬಿ.ಎನ್. ವೀರಭದ್ರಸ್ವಾಮಿ, ಡಾ. ಎಂ.ಬಿ. ನಸ್ರೀನ್ ತಾಜ್ ಹಾಗೂ ವಿವಿಧ ವಿಭಾಗಗಳ ನಿರ್ದೇಶಕರು, ಡೀನ್‌ಗಳು, ಮುಖ್ಯಸ್ಥರು, ಅಧ್ಯಾಪಕರು, ಅಧ್ಯಾಪಕೇತರ ವೃಂದ ಮತ್ತು ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.
(ಬಾಕ್ಸ್) * ಗಂಟೆಗೆ 1,00,000 ಕಿ.ಮೀ.ಗಿಂತ ಹೆಚ್ಚು ವೇಗದ ಪ್ರಯಾಣನಮ್ಮ ತಾಯಿ ಭೂಮಿ ಸುಮಾರು 12,700 ಕಿಲೋಮೀಟರ್ ವ್ಯಾಸ ಹೊಂದಿದೆ. ಅದು ಸೂರ್ಯನ ಸುತ್ತ ಸರಾಸರಿ ಗಂಟೆಗೆ ಸುಮಾರು 30 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಅಂದರೆ, ಈ ಕ್ಷಣ ನಾವು ಎಲ್ಲರೂ ಬಾಹ್ಯಾಕಾಶದಲ್ಲಿ ಗಂಟೆಗೆ 1,00,000 ಕಿಲೋಮೀಟರ್‌ಗಿಂತ ಹೆಚ್ಚು ವೇಗದಲ್ಲಿ ಪ್ರಯಾಣಿಸುತ್ತಿದ್ದೇವೆ ಎಂದು ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಡಾ. ಮೈಲ್‌ಸ್ವಾಮಿ ಅಣ್ಣಾದೊರೈ ವಿಶ್ಲೇಷಿಸಿದರು. ರೈಟ್ ಸಹೋದರರು ಮನುಷ್ಯರು ಗಾಳಿಯಲ್ಲಿ ಹಾರುವುದು ಅಸಾಧ್ಯವೆಂದು ತಿಳಿಯದೇ ವಿಮಾನವನ್ನು ಕಂಡುಹಿಡಿದರು. ಇದೇ ರೀತಿಯಲ್ಲಿ, ಇಸ್ರೋ ತಂಡವು ಚಂದ್ರಯಾನ, ಮಂಗಳಯಾನ ಮತ್ತು ಆದಿತ್ಯ-ಎಲ್1 ಮಿಷನ್‌ಗಳಲ್ಲಿ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿತು. ಕಡಿಮೆ ಬಜೆಟ್, ಸೀಮಿತ ಸಮಯ ಮತ್ತು ಸೀಮಿತ ಸಂಪನ್ಮೂಲಗಳ ನಡುವೆಯೂ ಚಂದ್ರ, ಮಂಗಳ ಹಾಗೂ ಸೂರ್ಯನತ್ತ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧ್ಯವಿಲ್ಲವೆಂದು ತಿಳಿಯದೇ ಅವರು ಸಾಧನೆ ಮಾಡಿದರು ಎಂದರು.
- - -
-11ಕೆಡಿವಿಜಿ32,33: ದಾವಣಗೆರೆಯ ಜಿಎಂ ವಿ.ವಿ.ಯ ಪ್ರಥಮ ಘಟಿಕೋತ್ಸವದಲ್ಲಿ ಮಾಜಿ ಕೇಂದ್ರ ಸಚಿವ ಡಾ. ಜಿ.ಎಂ. ಸಿದ್ದೇಶ್ವರ್ ಅವರು ಎಸ್.ಆರ್. ಸ್ವಾತಿಮುತ್ತು ಮತ್ತು ಎಸ್.ಸಂಕೇತ್ ಅವರಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು.-11ಕೆಡಿವಿಜಿ34: ದಾವಣಗೆರೆಯ ಜಿಎಂ ವಿವಿಯಲ್ಲಿ ನಡೆದ ಪ್ರಥಮ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಡಾ. ಜಿ.ಎಂ. ಸಿದ್ದೇಶ್ವರ್ ಮಾತನಾಡಿದರು.