ಕನ್ನಡಪ್ರಭ ವಾರ್ತೆ ಹೊಸಕೋಟೆ
ತಾಲೂಕಿನ ನಂದಗುಡಿ ಹೋಬಳಿಯ ಕೊರಟಿ ಗ್ರಾಮದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ನಡೆದ ಐದನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಚುಟುಕು ಸಾಹಿತ್ಯವನ್ನು ಪ್ರೋತ್ಸಾಹಿಸಲು ಹಾಗೂ ವಿಕಸನಗೊಳಿಸಲು ಪ್ರತ್ಯೇಕವಾಗಿ ಹುಟ್ಟಿಕೊಂಡ ಸಂಸ್ಥೆ ಚುಟುಕು ಸಾಹಿತ್ಯ ಪರಿಷತ್ ಸಂಸ್ಥೆ. ಈ ಸಂಸ್ಥೆಯು ವ್ಯಂಗ್ಯ, ಹಾಸ್ಯ, ಗಾದೆ, ನಾಣ್ಣುಡಿಗಳಂತೆ ಸಂದೇಶ ನೀಡುವ ನಾಲ್ಕು ಸಾಲಿನ ಚಿಕ್ಕ ಸಾಹಿತ್ಯ ಪ್ರಕಾರಕ್ಕೆ ಹೊಸ ಆಯಾಮ ನೀಡಿ ಪತ್ರಿಕೆಗಳಲ್ಲಿ ವಿಶೇಷ ಸ್ಥಾನ ನೀಡುವ ಮೂಲಕ ಜನಪ್ರಿಯಗೊಳಿಸಿದೆ. ದಿನಕರ ದೇಸಾಯಿರಂಥವರ ಕೊಡುಗೆಯೊಂದಿಗೆ ಚುಟುಕು ಸಾಹಿತ್ಯ ಬೆಳೆದು ಬಂದಿದೆ. ಗುಲ್ಬರ್ಗ, ರಾಯಚೂರು, ಕೊಪ್ಪಳ, ಯಾದಗಿರಿ, ಬಿಜಾಪುರ, ಬೆಂಗಳೂರು, ಕೋಲಾರ ಹಾಗೂ ಗಡಿಭಾಗವಾದ ಕಾಸರಗೋಡು ಜಿಲ್ಲೆಗಳಿಂದ ಸಾಹಿತಿಗಳು ಹಾಗೂ ವಿವಿಧ ಕಲಾತಂಡಗಳು ಬಂದು ಕಾರ್ಯಕ್ರಮಕ್ಕೆ ಮೆರುಗು ನೀಡಿದ್ದಾರೆ. ನನ್ನನ್ನು ಈ ಕಾರ್ಯಕ್ರಮದ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆ ಮಾಡಿ ವಿಶೇಷ ಗೌರವ ನೀಡಿದ್ದಕ್ಕೆ ಸದಾ ಚಿರಋಣಿಯಾಗಿರುವೆ ಎಂದರು.ವಿಜಯಪುರದ ಬಸವಕಲ್ಯಾಣ ಮಠದ ಶ್ರೀ ಡಾ.ಮಹದೇವ ಸ್ವಾಮೀಜಿ ಮಾತನಾಡಿ, ಗ್ರಾಮದಲ್ಲಿ ಕನ್ನಡ ಜಾತ್ರೆಯೇ ನಡೆಯುತ್ತಿದೆ. ಚುಟುಕು ಸಾಹಿತ್ಯ ಪರಿಷತ್ ಎಂಬುದು ಕನ್ನಡ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ. ಚುಟುಕು ಸಾಹಿತ್ಯವನ್ನು ಬೆಳೆಸಿ ಪ್ರಚಾರ ಮಾಡಲು ಸ್ಥಾಪಿತವಾದ ಒಂದು ಸಾಹಿತ್ಯಿಕ ಸಂಸ್ಥೆಯಾಗಿದೆ ಎಂದರು.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ವಿ. ಶ್ರೀಕಾಂತ್ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ನಾಲ್ಕು ಜಿಲ್ಲಾ ಸಮ್ಮೇಳನಗಳಾಗಿ ೫ನೇ ಜಿಲ್ಲಾ ಸಮ್ಮೇಳನವು ನನ್ನ ಸ್ವಗ್ರಾಮದಲ್ಲೇ ನಡೆಯಬೇಕೆಂಬುದು ನನ್ನ ಕನಸಾಗಿತ್ತು. ಸರ್ಕಾರದಿಂದ ಯಾವುದೇ ಅನುದಾನ ದೊರೆಯದಿದ್ದರೂ, ಇಂದಿಗೂ ಜಿಲ್ಲೆ, ರಾಜ್ಯ, ಅಂತರ್ ರಾಜ್ಯ ಮಟ್ಟದಲ್ಲಿ ಸಮ್ಮೇಳನಗಳು ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಿವೆ ಎಂದರು.ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ತೆರೆದ ಪಲ್ಲಕ್ಕಿಯಲ್ಲಿ ವಿದ್ಯಾರ್ಥಿನಿಯರು ಪೂರ್ಣ ಕುಂಭ ಕಳಶ, ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಭವ್ಯ ಸ್ವಾಗತದೊಂದಿಗೆ ಸಮ್ಮೇಳನ ಅಧ್ಯಕ್ಷರು ಹಾಗೂ ಗಣ್ಯರನ್ನು ವೇದಿಕೆಗೆ ಕರೆ ತಂದರು. ಗಡಿನಾಡು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಕಾಸರಗೋಡು ತಂಡದ ವತಿಯಿಂದ ಭರತನಾಟ್ಯ, ಯಕ್ಷಗಾನ ಹಾಗೂ ಗಡಿನಾಡಿನ ಜನಪದ ನೃತ್ಯಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಚಿಂತಕ ಡಾ. ಶ್ರೀರಾಮಚಂದ್ರ ಗುರೂಜಿ, ಚುಟುಕು ಸಾಹಿತ್ಯ ಪರಿಷತ್‌ನ ರಾಜ್ಯ ಸಂಚಾಲಕ ಕೃಷ್ಣಮೂರ್ತಿ, ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಉಪಾಧ್ಯಕ್ಷ ಕೆ.ಎಂ. ರಾಜಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಂಜನ್‌ಕುಮಾರ್, ಮುನಿನಾರಾಯಣಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್, ತಾಲೂಕು ಅಧ್ಯಕ್ಷರಾದ ರಾಮಮೂರ್ತಿ, ಗಂಗಯ್ಯ ಕುಲಕರ್ಣಿ, ರಮೇಶ್, ಅಂತಾರಾಷ್ಟ್ರೀಯ ನೃತ್ಯಪಟು ಬಾಗೇಪಲ್ಲಿ ಕೃಷ್ಣಮೂರ್ತಿ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.