ಕನ್ನಡಪ್ರಭ ವಾರ್ತೆ ಯಾದಗಿರಿ
ಗ್ರಾಮೀಣ ಪ್ರದೇಶದ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಹಿಂದೇಟು ಹಾಕುತ್ತಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.ತಾಲೂಕಿನ ಹೆಡಗಿಮದ್ರಾ ಗ್ರಾಮದಲ್ಲಿ ನಡೆದ ಶಾಂತಶಿವಯೋಗೀಶ್ವರ ಮಠದ ಎಸ್‌ಎಸ್ ವಿದ್ಯಾಪೀಠದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಆರಂಭವಾದ ಶಿಕ್ಷಣ ಸಂಸ್ಥೆಯೊಂದು ವಾರ್ಷಿಕೋತ್ಸವ ಆಚರಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳಿದರು.
ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳು ಹುಟ್ಟುವುದೇ ಅಪರೂಪ. ಅಂತಹದ್ದರಲ್ಲಿ ಹೆಡಗಿಮದ್ರಾ ಶ್ರೀಮಠ ಗುಣಮಟ್ಟದ ಶಿಕ್ಷಣದ ಜೊತೆಗೆ ನಾಡು ಮತ್ತು ದೇಶ ಸೇವೆ ಮಾಡುತ್ತಿದೆ ಎಂದರು.ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಮಾತನಾಡಿ, ಶಿಕ್ಷಕರು ದೇಶದ ಭವಿಷ್ಯ ರೂಪಿಸುವ ಮಹಾನ್ ಶಿಲ್ಪಿಗಳಾಗಿದ್ದಾರೆ. 21ನೇ ಶತಮಾನ ಜ್ಞಾನದ ಶತಮಾನವಾಗಿದ್ದು, ಇಂದು ಜಗತ್ತನ್ನಾಳುವವರು ಜ್ಞಾನವಂತರೇ ಆಗಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಮತ್ತು ಅವರು ಹಾಕಿಕೊಟ್ಟ ತತ್ವಸಿದ್ಧಾಂತಗಳನ್ನು ಸಂಕಲ್ಪದೊಂದಿಗೆ ಕಾರ್ಯರೂಪಕ್ಕೆ ತರಬೇಕೆಂದು ವಿದ್ಯೆ ಜೊತೆಗೆ ವಿನಯ ಮತ್ತು ಶಿಕ್ಷಣದಲ್ಲಿ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡಬೇಕೆಂದು ಹೇಳಿದರು.
ಹೆಡಗಿಮದ್ರಾ ಶಾಂತಶಿವಯೋಗಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ಹೆಡಗಿಮದ್ರಾ ಶ್ರೀಮಠವು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಮಕ್ಕಳ ಉಜ್ವಲ ಭವಿಷ್ಯದ ನಿರ್ಮಾಣಕ್ಕೆ ನಿರಂತರ ಶ್ರಮಿಸಲಿದೆ ಎಂದರು.ಬಿಜೆಪಿ ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲೆ ವಿದ್ಯಾರ್ಥಿಗಳಿಂದ ನೃತ್ಯ, ಭಗವತ್ ಗೀತೆ ಪಠಣ ಹೀಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ರಾಚನಗೌಡ ಮುದ್ನಾಳ, ಡಾ.ಸಿ.ಎಂ.ಪಾಟೀಲ್, ಆರ್.ಪಿ ಕುಪ್ಪಿ, ಬಸ್ಸುಗೌಡ ಬಿಳಾರ, ಮಹಾಂತಯ್ಯಸ್ವಾಮಿ ಹಿರೇಮಠ, ಅಜೆಯರೆಡ್ಡಿ ಎಲ್ಹೇರಿ, ಗಿರೀಶ ಮಾಲೀಪಾಟೀಲ್, ಮಲ್ಲಣ್ಣಗೌಡ ಕೌಳೂರ, ಅನೀಲ ಹೆಡಗಿಮದ್ರಾ, ಪಿಡಿಒ ನೀಲಕಂಠ ಎಲ್ಹೇರಿ, ಸಿಆರ್‌ಪಿ ಶ್ರೀನಿವಾಸ, ಮುಖ್ಯಗುರು ಗಂಗಮ್ಮ ಇತರರಿದ್ದರು.