ಬೆಂಗಳೂರು : ವಿಧಾನಮಂಡಲದ ಜಂಟಿ ಅಧಿವೇಶನದ ರಾಜ್ಯಪಾಲರ ಭಾಷಣವನ್ನು ಪರಿಪೂರ್ಣವಾಗಿ ಓದದೇ ಚುಟುಕಾಗಿ ಮುಗಿಸಿದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ನಡವಳಿಕೆ ಕಾನೂನು ಹಾಗೂ ಸಂವಿಧಾನ ಬದ್ಧವೇ ಎಂದು ತಜ್ಞರ ಅಭಿಪ್ರಾಯ ಪಡೆಯುವುದು, ಒಂದು ವೇಳೆ ಲೋಪವಿದೆ ಎಂಬ ಅಭಿಪ್ರಾಯ ಬಂದರೆ ‘ಗೋಬ್ಯಾಕ್ ಗವರ್ನರ್’ ಅಭಿಯಾನಕ್ಕೆ ಮುಂದಾಗಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಸದನದ ನಂತರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆದಿದ್ದು, ಈ ಬಗ್ಗೆ ಶುಕ್ರವಾರ ತಮ್ಮ ನೇತೃತ್ವದಲ್ಲಿ ಕಾನೂನು ತಜ್ಞರ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡುವ ನಿರ್ಧಾರವನ್ನು ಕೈಗೊಳ್ಳಲಾಯಿತು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದಲ್ಲಿ ಕಾನೂನು ತಜ್ಞರು, ಸಲಹೆಗಾರರು ಹಾಗೂ ವಿವಿಧ ಇಲಾಖಾ ಸಚಿವರುಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದು, ಸಭೆಯಲ್ಲಿ ರಾಜ್ಯಪಾಲರ ನಡೆ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ. ಈ ವಿಚಾರದಲ್ಲಿ ಸರ್ಕಾರ ಯಾವ ರೀತಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ. ಸಾಂವಿಧಾನಿಕ, ಕಾನೂನಾತ್ಮಕ ಹಾಗೂ ರಾಜಕೀಯ ಈ ಮೂರೂ ರೀತಿಯಲ್ಲೂ ಆಲೋಚಿಸಿ ಮುಂದೆ ಯಾವ ಹಜ್ಜೆ ಇಡಬೇಕೆಂದು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ, ರಾಜ್ಯಪಾಲರ ನಡೆ ಬಗ್ಗೆ ಸಚಿವ ಸಂಪುಟದಲ್ಲಿ ತೀವ್ರ ಆಕ್ಷೇಪಗಳು ವ್ಯಕ್ತವಾದವು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಒಂದು ವೇಳೆ ರಾಜ್ಯಪಾಲರ ನಡೆ ಸ್ವೀಕಾರಾರ್ಹವಲ್ಲ ಎನ್ನುವುದಾದರೆ, ತಾಂತ್ರಿಕವಾಗಿಯೂ ತೊಡಕಾಗಲಿದೆ ಎಂಬ ಅಭಿಪ್ರಾಯ ಕಾನೂನು ಸಲಹೆಗಾರರಿಂದ ವ್ಯಕ್ತವಾದಲ್ಲಿ ಅವರ ವಿರುದ್ಧ ಗೋ ಬ್ಯಾಕ್ ಗೌರ್ನರ್ ಅಭಿಯಾನ ಆರಂಭಿಸುವ ಅಥವಾ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ರಾಷ್ಟ್ರಪತಿ ಅವರಿಗೆ ಪತ್ರ ಬರೆಯುವಂತಹ ಹೋರಾಟಕ್ಕೂ ಸಜ್ಜಾಗಬೇಕಾಗುತ್ತದೆ ಎನ್ನುವ ಅಭಿಪ್ರಾಯಗಳು ಕೆಲ ಸಚಿವರಿಂದ ವ್ಯಕ್ತವಾದವು ಎಂದು ತಿಳಿದು ಬಂದಿದೆ.
ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಓದಲು ಸರ್ಕಾರ ಸಿದ್ಧಪಡಿಸಿದ್ದ 46 ಪುಟಗಳ ಭಾಷಣದಲ್ಲಿ ಜಿ ರಾಮ್ ಜಿ ಕಾಯ್ದೆಯನ್ನು ಟೀಕಿಸುವ 11 ಪ್ಯಾರಾಗಳನ್ನು ಕೈಬಿಡುವಂತೆ ರಾಜ್ಯಪಾಲರು ಸಲಹೆ ನೀಡಿದರೂ ಇದಕ್ಕೆ ಸರ್ಕಾರ ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಅವರಿಂದ ಒಪ್ಪಿಗೆ ದೊರಕಿರುವ ಕಾಯ್ದೆ ವಿರುದ್ಧ ಭಾಷಣ ಮಾಡಲು ನಿರಾಕರಿಸಿದ ರಾಜ್ಯಪಾಲರು ಸರ್ಕಾರ ನೀಡಿದ್ದ ಭಾಷಣದ ಮೊದಲ ಹಾಗೂ ಕೊನೆಯ ಪ್ಯಾರಾವನ್ನು ಮಾತ್ರ ಓದಿ ನಿರ್ಗಮಿಸಿದರು. ಅವರ ಈ ನಡೆ ಆಡಳಿತ ಪಕ್ಷದ ಸದಸ್ಯರಿಂದ ಸದದನ ಒಳ ಹೊರಗೆ ಆಕ್ರೋಶ, ಟೀಕೆ, ಆಕ್ಷೇಪಗಳಿಗೆ ಕಾರಣವಾಗಿದೆ.
- ಸರ್ಕಾರದ ಭಾಷಣವನ್ನು ಸದನದಲ್ಲಿ ಓದಲು ಒಪ್ಪದ ರಾಜ್ಯಪಾಲರ ನಡೆ ಬಗ್ಗೆ ಸಂಪುಟದಲ್ಲಿ ಚರ್ಚೆ
- ಗೌರ್ನರ್ ನಡವಳಿಕೆ ಕಾನೂನು, ಸಂವಿಧಾನಬದ್ಧವೇ ಎಂದು ಅಭಿಪ್ರಾಯ ಸಂಗ್ರಹಕ್ಕೆ ನಿರ್ಧಾರ
- ಒಂದು ವೇಳೆ ರಾಜ್ಯಪಾಲರ ಭಾಷಣದಲ್ಲಿ ಲೋಪವಿದೆ ಎಂಬ ವಾದ ಬಂದರೆ ತೀವ್ರ ಹೋರಾಟ
- ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ಅಭಿಯಾನ ನಡೆಸಲು ಸರ್ಕಾರದಲ್ಲಿ ಚಿಂತನೆ