- ಸಂಸದೆ ಡಾ.ಪ್ರಭಾ ಹೇಳಿಕೆ । ನವೋದ್ಯಮಗಳ ಆಲೋಚನೆಗಳ ಪ್ರಸ್ತುತಿ ಕಾರ್ಯಕ್ರಮಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆಯನ್ನು ಐಟಿ-ಬಿಟಿ, ನವೋದ್ಯಮ ಹಾಗೂ ಕೈಗಾರಿಕಾ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿಸಿ, ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಸ್ಥಳೀಯ ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ, ದೇಶಿ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರನ್ನು ಜಿಲ್ಲೆಗೆ ಆಕರ್ಷಿಸಲು ನಿರಂತರ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.ನಗರದ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನವೋದ್ಯಮಗಳ ಆಲೋಚನೆಗಳ ಪ್ರಸ್ತುತಿ (ಸ್ಟಾರ್ಟಪ್ ಪಿಚ್ಚಿಂಗ್ ಸೆಷನ್) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿಷನ್ ದಾವಣಗೆರೆ ತಂಡ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರಿನ ಟೆಕ್ ಸಮ್ಮಿಟ್‌ನಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲು ಸಿದ್ಧತೆ ನಡೆಸಲಾಗಿದೆ ಎಂದರು.
ನವೋದ್ಯಮಗಳ ಆಲೋಚನೆ ಪ್ರೋತ್ಸಾಹಿಸಲು ಆಯೋಜಿಸಿರುವ ಕಾರ್ಯಕ್ರಮಕ್ಕೆ 70ಕ್ಕೂ ಹೆಚ್ಚು ತಂಡ ಆಗಮಿಸಿರುವುದು ಸಂತಸದ ಸಂಗತಿ. ಆರಂಭದಲ್ಲಿ 30 ತಂಡ ಭಾಗವಹಿಸುವ ನಿರೀಕ್ಷೆಯಿತ್ತು. ಆದರೆ, ಯುವಜನರ ಉತ್ಸಾಹ ನಿರೀಕ್ಷೆ ಮೀರಿದೆ. ಆರಂಭಿಕ ಹಂತದ ಆಲೋಚನೆಗಳನ್ನು ಉದ್ಯಮವಾಗಿ ರೂಪಿಸಲು ತಜ್ಞರ ಮಾರ್ಗದರ್ಶನ ನೀಡಲಾಗುವುದು. ಅಗತ್ಯ ಆರ್ಥಿಕ ನೆರವು ಮತ್ತು ಹೂಡಿಕೆದಾರರ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿಯೂ ಪ್ರಯತ್ನಿಸಲಾಗುವುದು. ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಹಯೋಗದಲ್ಲಿ ಮುಂಬರುವ ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ದಾವಣಗೆರೆಯ ಆಯ್ದ ನವೋದ್ಯಮಗಳಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಜಾಗತಿಕ ಹೂಡಿಕೆದಾರರು, ಉದ್ಯಮ ತಜ್ಞರು ಹಾಗೂ ತಂತ್ರಜ್ಞಾನ ಕಂಪನಿಗಳ ಪ್ರತಿನಿಧಿಗಳೊಂದಿಗೆ ನೇರ ಸಂವಾದಕ್ಕೆ ಅವಕಾಶ ಸಿಗಲಿದೆ ಎಂದು ವಿವರಿಸಿದರು.
ಪ್ರೊ. ಎಸ್.ಬಸವರಾಜಪ್ಪ, ವಿ.ಎಸ್.ಸಚಿನ್, ಸತೀಶ್ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು, ವಿಷನ್ ತಂಡದ ವೀರೇಶ ಪಟೇಲ್, ಪ್ರಶಾಂತ ಇತರರು ಇದ್ದರು. ಕೆಡಿಇಎಂ, ಯುಬಿಡಿಟಿ ಹಾಗೂ ವಿವಿಧ ಶೈಕ್ಷಣಿಕ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ನವೋದ್ಯಮ ತಂಡಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
(ಬಾಕ್ಸ್)
ರಸ್ತೆ, ರೈಲು ಸಂಪರ್ಕದ ದೃಷ್ಟಿಯಿಂದ ದಾವಣಗೆರೆ ಅನುಕೂಲಕರ ಸ್ಥಳದಲ್ಲಿದ್ದು, ಶಿವಮೊಗ್ಗ-ಹುಬ್ಬಳ್ಳಿ ವಿಮಾನ ನಿಲ್ದಾಣಗಳು ಸುಮಾರು ಒಂದೂವರೆ ಗಂಟೆ ಪ್ರಯಾಣದ ಅಂತರದಲ್ಲಿವೆ. ಆದರೂ, ಜಿಲ್ಲೆಯಲ್ಲಿ ವಿಮಾನ ನಿಲ್ದಾಣವಾದರೆ ಕೈಗಾರಿಕಾ ಹೂಡಿಕೆ ಮತ್ತು ಆರ್ಥಿಕ ಚಟುವಟಿಕೆಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ. ಇಲ್ಲಿಗೆ ವಿಮಾನ ನಿಲ್ದಾಣ ಮಂಜೂರು ಮಾಡಲು ಕೇಂದ್ರ ಸರ್ಕಾರದ ಮಟ್ಟದಲ್ಲಿ ಮನವಿ ಮಾಡುತ್ತಿದ್ದೇನೆ. ಈ ಬಗ್ಗೆ ಮತ್ತೊಮ್ಮೆ ಕೇಂದ್ರ ನಾಗರೀಕ ವಿಮಾನಯಾನ ಸಚಿವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ.
- - -