ಕನ್ನಡಪ್ರಭ ವಾರ್ತೆ ಮಂಡ್ಯ
ನಗರದಲ್ಲಿ ದಿವ್ಯ ಸಂಜೆ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಕೆ.ಎನ್.ಚನ್ನೇಗೌಡ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಸದ್ಗುರು, ಈಗಾಗಲೇ ದೇಶದ ನೂರಕ್ಕೂ ಹೆಚ್ಚು ತಾಲೂಕುಗಳಲ್ಲಿ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮಂಡ್ಯ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕನಿಷ್ಠ ೫೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಸ್ಥಾಪಿಸಲಾಗುವುದು. ಮಂಡ್ಯದಲ್ಲಿರುವ ಶ್ರೀಶಾರದಾ ನಿಕೇತನ ಗುರುಕುಲದ ಬಳಿಯಲ್ಲಿ ೨೦ ಹಾಸಿಗೆಗಳ ಆಸ್ಪತ್ರೆ ನಿರ್ಮಿಸುವ ಉದ್ದೇಶ ಇದೆ ಎಂದರು
ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ. ಸಮಸ್ಯೆ ಕಾಣಿಸಿಕೊಂಡ ನಂತರ ಪರಿಹಾರ ಹುಡುಕುವುದಕ್ಕಿಂತ ಸಮಸ್ಯೆ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಉತ್ತಮ. ಆರೋಗ್ಯ ಶಿಕ್ಷಣವನ್ನು ಪ್ರಾಥಮಿಕ ಶಾಲಾ ಹಂತದಿಂದಲೇ ಪಠ್ಯಕ್ರಮದ ಭಾಗವಾಗಿಸಬೇಕು. ಅದು ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಆಗಲಿದೆ ಎಂದರು.ಆರೋಗ್ಯ ಕ್ಷೇತ್ರದಲ್ಲಿ ಸೂಕ್ತ ಮೂಲಸೌಕರ್ಯ ಒದಗಿಸುವುದು ಇಂದಿನ ತುರ್ತು ಅಗತ್ಯ. ಇದಕ್ಕೆ ನಾವು ಮೊದಲ ಆದ್ಯತೆ ನೀಡಬೇಕು. ವೈದ್ಯಕೀಯ ರಂಗದ ವಿಪರೀತ ವಾಣಿಜ್ಯೀಕರಣ ಅಪಾಯಕಾರಿ. ವಾಣಿಜ್ಯದ ಹಿಡಿತದಿಂದ ಆರೋಗ್ಯ ಕ್ಷೇತ್ರವನ್ನು ಮುಕ್ತಗೊಳಿಸಬೇಕು ಎನ್ನುವ ಉದ್ದೇಶದಿಂದ ನಾವು ಉಚಿತ ವೈದ್ಯಕೀಯ ಶಿಕ್ಷಣ ಕಾಲೇಜು ಆರಂಭಿಸಿದೆವು ಎಂದು ವಿವರಿಸಿದರು.
ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಹೆಣ್ಣುಮಕ್ಕಳಿಗೆ ವಿಶೇಷ ಆದ್ಯತೆ ಕೊಡುತ್ತಿದ್ದೇವೆ. ಈಗಾಗಲೇ ಹೆಣ್ಣುಮಕ್ಕಳ ಮೂರು ಕ್ಯಾಂಪಸ್‌ಗಳಿವೆ. ಇನ್ನಷ್ಟು ಹೆಚ್ಚಿನ ಶಾಲೆಗಳನ್ನು ಹೆಣ್ಣು ಮಕ್ಕಳಿಗಾಗಿ ಆರಂಭಿಸುವ ಉದ್ದೇಶ ಇದೆ. ಪದವಿಯ ನಂತರ ನಮ್ಮಲ್ಲಿ ಇಂಟನ್‌ಶಿಪ್ ಮಾಡುವ ಯುವತಿಯರಿಗೆ ಸ್ಟೇಫಂಡ್ ಕೂಡ ನೀಡುತ್ತಿದ್ದೇವೆ. ನಮ್ಮ ವಿಶ್ವವಿದ್ಯಾಲಯದಲ್ಲಿರುವ ಒಟ್ಟು ವಿದ್ಯಾರ್ಥಿಗಳ ಪೈಕಿ ಮಹಿಳೆಯರ ಪ್ರಮಾಣ ಶೇ.೬೦ ರಷ್ಟು ಇದೆ ಎಂದರು.
ಯಾವುದೇ ದೇಶದ ಜನಸಾಮಾನ್ಯರು ಯುದ್ಧ-ಸಂಘರ್ಷ ಬಯಸುತ್ತಿಲ್ಲ. ಜಾಗತಿಕ ಅಶಾಂತಿಗೆ ನಾಯಕರ ಸ್ವಾರ್ಥವೇ ಮುಖ್ಯ ಕಾರಣ. ಸರಿಯಾದ ನಾಯಕರನ್ನು ಆಯ್ಕೆ ಮಾಡದಿರುವುದೇ ಜನರು ಮಾಡುತ್ತಿರುವ ತಪ್ಪು. ಮತದಾರರು ಸರಿಯಾದರೆ ನಾಯಕರು ಸರಿಯಾಗುತ್ತಾರೆ ಎಂದರು.
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ತಮ್ಮ ನೇತೃತ್ವದ ಸಂಸ್ಥೆಗಳಲ್ಲಿ ಸಿಗುತ್ತಿರುವ ಉಚಿತ ಸೌಲಭ್ಯಗಳ ಕುರಿತು ಕೇಳಿಬರುತ್ತಿರುವ ಆಕ್ಷೇಪಗಳ ಕುರಿತು ಪ್ರತಿಕ್ರಿಯಿಸಿ, ಅರ್ಹರಿಗೆ ದಾನ ಕೊಡಬೇಕು. ಸರ್ಕಾರವು ಕಡುಬಡವರಿಗೆ ಅಗತ್ಯ ನೆರವು ಕೊಡುವುದರಲ್ಲಿ ಯಾವುದೇ ತಪ್ಪಿಲ್ಲ. ನಮ್ಮ ಸಂಸ್ಥೆಗಳಲ್ಲಿ ನಾವು ಯಾವುದೇ ತಾರತಮ್ಯ ಮಾಡದೇ ಎಲ್ಲರಿಗೂ ಆರೋಗ್ಯ ಸೇವೆ ಒದಗಿಸುತ್ತಿದ್ದೇವೆ. ಆದರೆ, ನಮ್ಮ ಸೇವೆ ದುರುಪಯೋಗವಾಗದಂತೆ ಅಗತ್ಯ ಎಚ್ಚರಿಕೆ ವಹಿಸುತ್ತೇವೆ ಎಂದು ವಿವರಿಸಿದರು.
‘ಕರ್ನಾಟಕ ರಾಜ್ಯವನ್ನು ನಿಮ್ಮ ಸುಪರ್ದಿಗೆ ೧೦ ವರ್ಷಗಳ ಅವಧಿಗೆ ಒಪ್ಪಿಸಿದರೆ ಏನು ಮಾಡುತ್ತೀರಿ’ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸದ್ಗುರು, ‘ಶಿಕ್ಷಕರ ಬಗ್ಗೆ ಹೆಚ್ಚು ಗಮನ ಕೊಡುತ್ತೇನೆ, ಅವರ ಸಂಬಳ-ಸೌಕರ್ಯ ಸುಧಾರಿಸಿ ಅವರ ಮೂಲಕ ಶಾಲೆಗಳನ್ನು ಉತ್ತಮ ಪಡಿಸುತ್ತೇನೆ. ಯೋಗ್ಯ ಶಿಕ್ಷಕರು-ಶಾಲೆಗಳೇ ದೇಶದ ಆಧಾರಸ್ತಂಭ’ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು.
ಶ್ರೀಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಎಂ.ಮದನ್‌ಗೌಡ ತಮ್ಮ ಬದುಕಿನ ಕಥನ ಹಂಚಿಕೊಂಡರು.
ಸುಮಾ ರವಿ ಕನ್ವೆನ್ಷನ್ ಹಾಲ್ನ ರವಿ ಭೋಜೇಗೌಡ, ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಹಾಗೂ ಚನ್ನಪಟ್ಟಣದ ಉದ್ಯಮಿ ಬಾಲಾಜಿ ಅವರನ್ನು ಅಭಿನಂದಿಸಲಾಯಿತು.
ಮೀರಾ ಶಿವಲಿಂಗಯ್ಯಗೆ ಕರ್ನಾಟಕ ಪರಿವರ್ತಕ ಪ್ರಶಸ್ತಿಮಂಡ್ಯ ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಅಸಾಮಾನ್ಯ ಸೇವೆ ಸಲ್ಲಿಸಿರುವ ಮೀರಾ ಶಿವಲಿಂಗಯ್ಯ ಅವರಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ‘ಕರ್ನಾಟಕ ಪರಿವರ್ತಕ’ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ಮೀರಾ ಶಿವಲಿಂಗಯ್ಯ, ‘ಭಾರತೀಯ ಸಮಾಜವನ್ನು ನಾನಾ ಸ್ತರದಲ್ಲಿ ಜಾಗೃತಗೊಳಿಸಲು ಸದ್ಗುರು ಶ್ರೀ ಮಧುಸೂದನ ಸಾಯಿ ಪ್ರಯತ್ನಿಸುತ್ತಿದ್ದಾರೆ. ಇವರ ಮೂಲಕ ಭಗವಾನ್ ಸತ್ಯ ಸಾಯಿ ಬಾಬಾ ಅವರ ಸಂದೇಶಗಳು ಕಾರ್ಯರೂಪಕ್ಕೆ ಬರುತ್ತಿವೆ. ಈ ಪ್ರಶಸ್ತಿಯು ನನಗೆ ಧನ್ಯತಾ ಭಾವನೆ ತಂದಿದೆ’ ಎಂದರು.