ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಗುರುವಾರ ಸಂಜೆ 4.30ರ ಸಮಯದಲ್ಲಿ ಕರೋಟಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಸುಮಾ ಮಂಜುನಾಥ್ ಎನ್ನುವವರ ಮೇಕೆಯ ಗುಂಪಿನ ಮೇಲೆ ಚಿರತೆಯೊಂದು ದಾಳಿ ಮಾಡಿ ಒಂದು ಮೇಕೆಯನ್ನು ಹೊತ್ತೊಯ್ಯಿತಲ್ಲದೆ, ಮತ್ತೊಂದು ಮೇಕೆ ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಒದ್ದಾಡುತ್ತಿತ್ತು. ಆ ಮೇಕೆಯನ್ನು ಅರಣ್ಯ ಇಲಾಖೆ ಕಚೇರಿ ಮುಂದೆ ತಂದು ಮಲಗಿಸಿದ ರೈತರು ಚಿರತೆಯ ಬಾಯಿಗೆ ಆಹಾರವಾಗಿರುವ ಮೇಕೆಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಸಾವು ಬದುಕಿನ ನಡುವೆ ಒದ್ದಾಡುತ್ತಿರುವ ಮೇಕೆಯ ಬದಲಿಗೆ ಅರಣ್ಯ ಇಲಾಖೆ ಪರ್ಯಾಯವಾಗಿ ಮೇಕೆಯೊಂದನ್ನು ಕೊಡಿಸಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಕರೋಟಿ ತಮ್ಮಯ್ಯ ಮಾತನಾಡಿ, ತಾಲೂಕಿನಾದ್ಯಂತ ಚಿರತೆಗಳ ಹಾವಳಿ ಮಿತಿ ಮೀರಿದೆ. ನಿತ್ಯ ಒಂದಲ್ಲ ಒಂದು ಕಡೆ ರೈತರ ಸಾಕು ಪ್ರಾಣಿಗಳು ಚಿರತೆಗಳಿಗೆ ಆಹಾರವಾಗುತ್ತಿವೆ. ಚಿರತೆಗಳ ಭಯದಿಂದ ಸಂಜೆಯಾದರೆ ಸಾಕು ರೈತರು ಹೊಲಗದ್ದೆಗಳಿಗೆ ತೆರಳಿ ಬೆಳೆದ ಬೆಳೆಗಳಿಗೆ ನೀರು ಹಾಯಿಸಲು ಹೋಗದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.ಕಾಡಿನಲ್ಲಿರಬೇಕಾದ ಚಿರತೆಗಳ ಸಂತತಿ ನಾಡಿನಲ್ಲಿ ಬೆಳೆಯುತ್ತಿದ್ದರೂ ಅರಣ್ಯ ಇಲಾಖೆ ಚಿರತೆಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ವಹಿಸುತ್ತಿಲ್ಲ. ಚಿರತೆಗಳನ್ನು ಹಿಡಿದು ಕಾಡಿಗೆ ಬಿಡಿ. ಇಲ್ಲವೇ ಸಾಕು ಪ್ರಾಣಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿದರು.
ವಲಯ ಅರಣ್ಯಾಧಿಕಾರಿ ಅನಿತಾ ಮಾತನಾಡಿ, ಚಿರತೆಗಳ ಸಮಸ್ಯೆ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ರಾಜ್ಯದ ಎಲ್ಲೆಡೆ ವಿಸ್ತರಿಸಿದೆ. ವನ್ಯ ಜೀವಿ ಸಂರಕ್ಷಣೆ ನಮ್ಮೆಲ್ಲರ ಮೊದಲ ಆದ್ಯತೆ. ರೈತಾಪಿ ವರ್ಗಕ್ಕೆ ಕಿರುಕುಳ ನೀಡುತ್ತಿರುವ ಕಾಡು ಪ್ರಾಣಿಗಳನ್ನು ಸೆರೆಹಿಡಿದು ಅರಣ್ಯಕ್ಕೆ ಬಿಡುವ ಕೆಲಸವನ್ನು ಇಲಾಖೆ ಮಾಡುತ್ತಿದೆ ಎಂದರು.ಇಲಾಖೆಯಲ್ಲಿ ಬೋನುಗಳ ಕೊರತೆಯಿದೆ. ಹೆಚ್ಚುವರಿ ಬೋನುಗಳ ಅವಶ್ಯಕತೆಯಿದ್ದು ಪ್ರತಿ ಗ್ರಾಮ ಪಂಚಾಯತಿಗೂ ಇಲಾಖೆಯ ವತಿಯಿಂದ ಈಗಾಗಲೇ ಪತ್ರ ಬರೆದಿದ್ದು ಬೋನುಗಳಿಗೆ ಅಗತ್ಯ ಸಹಕಾರ ನೀಡುವಂತೆ ಕೋರಿದ್ದೇವೆ. ಚಿರತೆಗಳಿಗೆ ಬಲಿಯಾದ ರೈತರ ಸಾಕು ಪ್ರಾಣಿಗಳಿಗೆ ನಿಯಮಾನುಸಾರ ಇಲಾಖೆಯ ವತಿಯಿಂದ ಸೂಕ್ತ ಪರಿಹಾರ ನೀಡಲಾಗುವುದೆಂದು ಹೇಳಿ ರೈತರ ಮನವೊಲಿಸಿದರಲ್ಲದೆ ಕರೋಟಿ ಗ್ರಾಮದ ಬಳಿ ತಕ್ಷಣವೇ ಬೋನಿಟ್ಟು ಚಿರತೆಯನ್ನು ಸೆರೆ ಹಿಡಿಯುವುದಾಗಿ ಭರವಸೆ ನೀಡಿದರು.
ಚಿರತೆಯ ದಾಳಿಗೆ ಬಲಿಯಾದ ಮೇಕೆಗೆ ಪರ್ಯಾಯವಾಗಿ ಮತ್ತೊಂದು ಮೇಕೆಯನ್ನು ತೆಗೆದುಕೊಡುವಂತೆ ಒತ್ತಾಯಿಸಿ ತಾಲೂಕಿನ ಕರೋಟಿ ಗ್ರಾಮದ ಕೆಲವು ರೈತರು ಅರಣ್ಯ ಇಲಾಖೆ ಎದುರು ಪ್ರತಿಭಟನೆ ನಡೆಸಿದರು.