ಪರಮಾತ್ಮ ನಿಮ್ಮ ಹೃದಯ ಮಂದಿರದಲ್ಲಿ ನೆಲೆಸುತ್ತಾನೆ

KannadaprabhaNewsNetwork | Published : Mar 2, 2025 1:17 AM

ಸಾರಾಂಶ

ಮನುಷ್ಯ ಎಲ್ಲರನ್ನೂ ಗೌರವಿಸುವಂತಹ ಮಾನವೀಯ ಮೌಲ್ಯಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಶಿವನ ಮೇಲೆ ನಂಬಿಕೆ ಇಟ್ಟರೆ, ಪರಮಾತ್ಮ ನಿಮ್ಮ ಹೃದಯ ಮಂದಿರದಲ್ಲಿ ನೆಲೆಸಲಿದ್ದಾನೆ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಮನುಷ್ಯ ಎಲ್ಲರನ್ನೂ ಗೌರವಿಸುವಂತಹ ಮಾನವೀಯ ಮೌಲ್ಯಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಶಿವನ ಮೇಲೆ ನಂಬಿಕೆ ಇಟ್ಟರೆ, ಪರಮಾತ್ಮ ನಿಮ್ಮ ಹೃದಯ ಮಂದಿರದಲ್ಲಿ ನೆಲೆಸಲಿದ್ದಾನೆ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿಗಳು ಹೇಳಿದರು.ಅವರು ತಾಲೂಕಿನ ಪಟ್ಟನಾಯಕನಹಳ್ಳಿಯ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿ ಆಯೋಜಿಸಿದ್ದ ಶ್ರೀ ಮಠದ ಪ್ರಥಮ ಪೀಠಾಧಿಪತಿಗಳು ಹಾಗೂ ಸಂಸ್ಥಾಪಕರಾದ ಸದ್ಗುರು ಒಂದನೇ ಶ್ರೀ ನಂಜಾವಧೂತ ಸ್ವಾಮೀಜಿಗಳ ಪುಣ್ಯಾರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಜಗತ್ತಿನಲ್ಲಿ ರಾಕ್ಷಕರ ಉಪಟಳ ಹೆಚ್ಚಾಗಿ, ಜಗತ್ತೇ ನಮ್ಮ ಅಧೀನದಲ್ಲಿರಬೇಕು ಎಂಬ ಅಹಂನಿಂದ ಮೆರೆಯುತ್ತಿರುವ ರಾಕ್ಷಸರನ್ನು ಸಂಹಾರ ಮಾಡಿ, ಬ್ರಹ್ಮಾಂಡದಲ್ಲಿರುವ ಸಕಲ ಜೀವರಾಶಿಗಳಿಗೆ ಒಳಿತನ್ನು ಮಾಡಬೇಕೆಂಬ ಉದ್ದೇಶದಿಂದ ಶಿವ ವಿಷವನ್ನು ಕುಡಿದು ನೀಲಕಂಠನಾದ. ಬ್ರಹ್ಮಾಂಡದ ಉಳಿವಿಗಾಗಿ ವಿಷ ಕುಡಿದ ಶಿವನನ್ನು ನಂಬಿ ನಡೆದರೆ ಯಾವ ಕಷ್ಟಗಳು ಸಹ ನಮ್ಮನ್ನು ಬಾಧಿಸುವುದಿಲ್ಲ. ಶಿವರಾತ್ರಿ ಅತ್ಯಂತ ಪವಿತ್ರ ದಿನವಾಗಿದ್ದು ಅದರ ಹೆಸರೆ ಹೇಳುವಂತೆ ಅದು ಶಿವನಿಗೆ ಮೀಸಲಾದ ದಿನ ಹಾಗೂ ರಾತ್ರಿಯಾಗಿದೆ. ಅಂದು ಶಿವನಾಮಸ್ಮರಣೆ ಮಾಡಿದಲ್ಲಿ ಶಿವ ಸಂತೃಪ್ತನಾಗಿ ಬೇಡಿದ ಕೋರಿಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆಯಿದೆ. ಶಿವ ಕೇವಲ ಉಳ್ಳವರ ದೇವರಲ್ಲ ಇಲ್ಲದವರು ದೇವರು ಎಂಬುದನ್ನು ನಾವು ನೆನಪಿಡಬೇಕು. ಅಂದು ಬೇಡರ ಕಣ್ಣಪ್ಪ ಕಣ್ಣನ್ನು ಅರ್ಪಿಸಿದ ಎಂಬ ಕಾರಣಕ್ಕೆ ಆತನಿಗೆ ಪ್ರತ್ಯಕ್ಷನಾಗಿ ಜೀವನವನ್ನು ಪಾವನಗೊಳಿಸಿದ. ಅಂತಹ ಶಿವನನ್ನು ನಾನು ನಿತ್ಯವೂ ಪೂಜಿಸಿದರೆ ನಮ್ಮ ಜೀವನವೂ ಸಹ ಸಾರ್ಥಕವಾಗುತ್ತದೆ ಎಂದರು. ಪ್ರಯಾಗದ ಕುಂಭಮೇಳದಲ್ಲಿ 65 ಕೋಟಿ ಮನು ಕುಲ ಸೇರಿ ಮಹಾ ಕುಂಭಮೇಳದಲ್ಲಿ ಪಾಲ್ಗೊಂಡು ತಮ್ಮ ಪಾಪಗಳನ್ನು ಕಳೆದುಕೊಂಡು, ಪುನೀತ ರಾಗಿರುವುದು ನಮ್ಮ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಜಗತ್ತಿನಲ್ಲಿಯೇ ಶ್ರೀಮಂತ ಗೊಳಿಸಿದೆ. ಭಾರತವೆಂದರೆ ಕೇವಲ ಮೂಢ ನಂಬಿಕೆಗಳ ನಾಡಲ್ಲ. ಇದು ಭಕ್ತಿಯ ನಾಡು, ಶರಣರ ನಾಡು, ದೇವರ ನಾಡು. ಇಲ್ಲ ನಂಬಿಕೆಯೇ ದೇವರು. ನಾವು ಇಂದು ನಮ್ಮ ಹಿಂದಿನ ಗುರುಗಳನ್ನು ಹಾಗೂ ಗುರು ಸಮಾನರಾದ ಎಲ್ಲರನ್ನು ಅತ್ಯಂತ ಪೂಜ್ಯ ಭಾವನೆಯಿಂದ ಪೂಜೆ ಮಾಡುತ್ತೇವೆ. ದೇವರಿಗೆ ನೀಡಿರುವ ಸ್ಥಾನವನ್ನು ಗುರುಗಳಿಗೆ ನೀಡಿದ್ದೇವೆ ಇದರರ್ಥ ನಮಗೆ ದೇವರಷ್ಟೇ ಗುರುವೂ ಮುಖ್ಯ ಎಂಬುದಾಗಿದೆ. ಹರ ಮುನಿದರೂ ಗುರು ಕಾಯುವನು ಎಂಬ ನಂಬಿಕೆ ನಮ್ಮಲ್ಲಿ ಬೇರುರಿದೆ. ಅಷ್ಟರಮಟ್ಟಿಗೆ ನಾವು ಗುರುಗಳ ಪಾದದಲ್ಲಿ ನಂಬಿಕೆ ಇಟ್ಟಿದ್ದೇವೆ. ಇದೇ ಈ ದೇಶದ ಜನರ ಶಕ್ತಿಯಾಗಿದೆ. ಇಂತಹ ದೇಶದಲ್ಲಿ ನಾವು ಹುಟ್ಟಿರುವುದೇ ನಮ್ಮ ಪುಣ್ಯ. ಇದನ್ನು ಆನಂದಿಸಲು ವಿದೇಶಿಗರು ಭಾರತದತ್ತ ಬರುತ್ತಿರುವುದು ನಮ್ಮ ದೇಶಕ್ಕೆ ಮತ್ತೊಂದು ಗರಿ ಮೂಡುವಂತೆ ಮಾಡಿದೆ ಎಂದರು.

ಶ್ರೀಮಠದ ಪಿ ಆರ್ ಓ ತಮ್ಮಣ್ಣ, ನಿರಂಜನ್, ಹನುಮಂತ ರಾಯಪ್ಪ, ಕುಮಾರ್ ಸೇರಿದಂತೆ ನೂರಾರು ಭಕ್ತರು ಹಾಜರಿದ್ದರು.

Share this article