ಪುತ್ತೂರು: ಕರಾವಳಿ ಭಾಗದ ಜನರಿಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಘಟಿಸುವ ಅನುಭವ ಹಾಗೂ ಯಶಸ್ವಿಗೊಳಿಸುವ ಕಾರ್ಯ ನಿರಂತರವಾಗಿ ನಡೆಸುತ್ತಾರೆ. ದೇವರ ಸೇವೆ ಮಾಡುವ ಭಾಗ್ಯ ನಮಗೆಲ್ಲರಿಗೂ ಸಿಕ್ಕಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಮಾಡಿದರೆ ಭಗವಂತ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಹನುಮಗಿರಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಸೋಮವಾರ ಹನುಮಗಿರಿ ವೈದೇಹಿ ಸಭಾಭವನದಲ್ಲಿ ನಡೆದ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದ ಬ್ರಹ್ಮಕಲಶೋತ್ಸವ ಉಪ ಸಮಿತಿಗಳ ಸಮಾಲೋಚನಾ ಸಭೆಯ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಬ್ರಹ್ಮಕಲಶೋತ್ಸವ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸ್ಥಳೀಯರನ್ನು ಸೇರಿಸಿ ಸಮಿತಿ ರಚಿಸಲಾಗಿದೆ. ಸಮಿತಿಯ ನಿರ್ಧಾರದಂತೆ ಕಾರ್ಯಗಳು ನಡೆಯುತ್ತವೆ. ವಿವಿಧ ಸಮಿತಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು.ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ಮಾತನಾಡಿ, ದೈವಜ್ಞರ ನಿರ್ದೇಶನದಂತೆ ಬ್ರಹ್ಮಕಲಶೋ ತ್ಸವಕ್ಕೆ ಸಕಲ ತಯಾರಿಗಳು ನಡೆಯುತ್ತಿವೆ. ಎಲ್ಲರೂ ಸಕ್ರಿಯವಾಗಿ ತೊಡಗಿಸಿಕೊಂಡು ಯಶಸ್ವಿ ಗೊಳಿಸಬೇಕು. ಜಪದೀಕ್ಷೆ ನಿರಂತರವಾಗಿ ನಡೆಯುತ್ತಿದೆ. ಊರ ಪರವೂರ ಭಕ್ತರನ್ನು ಸೇರಿಸಿ 30 ಸಮಿತಿಗಳನ್ನು ರಚಿಸಲಾಗಿದೆ. ಮಾ.18ರಂದು ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳ್ಳಲಿದೆ ಎಂದು ಹೇಳಿದರು.