ಕಡವಿನಕಟ್ಟೆಯಲ್ಲಿ ಅಹೋರಾತ್ರಿ ಭಜನಾ ಕಾರ್ಯಕ್ರಮ ಸಂಪನ್ನ
ಕನ್ನಡಪ್ರಭ ವಾರ್ತೆ ಭಟ್ಕಳಕಲಿಯುಗದಲ್ಲಿ ದೇವರ ಅನುಗ್ರಹ ಪಡೆಯುವುದಕ್ಕೆ ಭಜನೆ ಹಾಗೂ ನಾಮ ಸಂಕೀರ್ತನೆ ಒಂದು ಉತ್ತಮ ಮಾರ್ಗವಾಗಿದೆ ಎಂದು ಶ್ರೀ ಕ್ಷೇತ್ರ ಕಡವಿನಕಟ್ಟೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಹಾಗೂ ಕಾರ್ಯದರ್ಶಿ ಪ್ರಕಾಶ ಎನ್. ಭಟ್ಟ ಹೇಳಿದರು.
ಶ್ರೀ ಕ್ಷೇತ್ರ ಕಡವಿನಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಅಹೋರಾತ್ರಿ ಭಜನಾ ಕಾರ್ಯಕ್ರಮ ಉದ್ಘಾಟಿಸಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ದೇವರ ಸನ್ನಿಧಿಯಲ್ಲಿ ಬೇರೆ ಬೇರೆ ಭಜನಾ ತಂಡಗಳು ಬಂದು ದೇವರ ಎದುರಿನಲ್ಲಿ ಹಾಡುವ ಭಜನೆಯಿಂದ ಶ್ರೀದೇವಿಯು ಸಂತುಷ್ಟಳಾಗಿ ಹರಸುತ್ತಾಳೆ ಎಂದರು.ಅಹೋರಾತ್ರಿ ಭಜನಾ ಕಾರ್ಯಕ್ರಮದಲ್ಲಿ ದೇವಸ್ಥಾನದ ಅರ್ಚಕರಾದ ಮಂಜುನಾಥ ಭಟ್ಟ, ರಾಮಚಂದ್ರ ಭಟ್ಟ, ಶ್ರೀಪಾದ ಭಟ್ಟ ಮುಂತಾದವರು ದೀಪ ಪ್ರಜ್ವಲನೆ ಮಾಡಿದರು. ಪ್ರಶಾಂತ ಭಟ್ಟ ಹಾಗೂ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ರಮೇಶ ಆಚಾರ್ಯ, ಜಟ್ಟಾ ನಾಯ್ಕ, ನಾರಾಯಣ ನಾಯ್ಕ, ಭಾಸ್ಕರ ನಾಯ್ಕ, ಶ್ರೀಧರ ನಾಯ್ಕ, ಚಂದ್ರಕಾಂತ ನಾಯ್ಕ, ಮಾಸ್ತಪ್ಪ ನಾಯ್ಕ ಮುಂತಾದವರಿದ್ದರು.
ಅಹೋರಾತ್ರಿ ಭಜನಾ ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಲಾಗಿದ್ದ ಮಹಾ ಅನ್ನಸಂತರ್ಪಣೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು. ವಿವಿಧ ಕಡೆಗಳಿಂದ ಬಂದಿದ್ದ ಪ್ರಸಿದ್ಧ ಭಜನಾ ತಂಡಗಳಾದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕಡವಿನಕಟ್ಟಾ, ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಭಜನಾ ಮಂಡಳಿ ಕಡವಿನಕಟ್ಟಾ, ಶ್ರೀ ಮಹಾಸತಿ ಭಜನಾ ಮಂಡಳಿ ಸರ್ಪನಕಟ್ಟಾ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಶಿರಾಲಿ, ಗಾನಶ್ರೀ ಭಟ್ಕಳ, ತಾರಾ ಭಟ್ ಭಜನಾ ತಂಡ ಹೊನ್ನಾವರ, ಶ್ರೀ ಸಿದ್ಧಿವಿನಾಯಕ ಮಹಿಳಾ ಭಜನಾ ತಂಡ ಜಾಲಿ, ಶ್ರೀ ಸಿದ್ಧಿವಿನಾಯಕ ಮಹಿಳಾ ಭಜನಾ ತಂಡ ಕಟಗಾರಕೊಪ್ಪ, ಶ್ರೀ ಸರ್ವೇಶ್ವರಿ ಭಜನಾ ಮಂಡಳಿ ಮಂಕಿ, ವೀರಜಟಕಾ ಭಜನಾ ಮಂಡಳಿ ತೆಂಗಿನಗುಂಡಿ ತಂಡಗಳು ಸುಶ್ರಾವ್ಯವಾಗಿ ಭಜನೆ ಹಾಡಿದರು.