ಹೊಸಪೇಟೆ: ಒಟಿಟಿ ರಚನೆ ಮೂಲಕ ಕನ್ನಡದ ಸಿನಿಮಾ, ಜಾನಪದ ಕಲೆಗಳನ್ನು ದೇಶದ ಹೊರಗಡೆಯೂ ವೀಕ್ಷಣೆಗೆ ಅವಕಾಶ ಮಾಡಲು ಹಲವು ಉನ್ನತ ಮಟ್ಟದ ಸಭೆಗಳು ನಡೆದಿವೆ. ಕಲಾ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಚಿತ್ರೀಕರಣಕ್ಕೆ ಅನುಕೂಲವಾಗಲು ಮಧ್ಯ ಕರ್ನಾಟಕದಲ್ಲಿ ಸ್ಟುಡಿಯೋ ಸ್ಥಾಪನೆಗೆ ಜಮೀನು ಪಡೆಯಲು ಕ್ರಮ ವಹಿಸಲಾಗಿದೆ ಎಂದು ಕಂಠೀರವ ಸ್ಟುಡಿಯೋ ಅಧ್ಯಕ್ಷ ಮೆಹಬೂಬ್ ಪಾಷಾ ತಿಳಿಸಿದರು.
ಕಂಠೀರವ ಸ್ಟುಡಿಯೋದ ವಜ್ರ ಮಹೋತ್ಸವ ಆಚರಣೆಯ ಸಂದರ್ಭದಲ್ಲಿದ್ದು, ಬೆಂಗಳೂರಿನ ಹೊರಗೆ ಮಧ್ಯ ಕರ್ನಾಟಕ ಭಾಗದಲ್ಲಿ ಸ್ಟುಡಿಯೋ ಸ್ಥಾಪನೆ ಮಾಡುವುದರಿಂದ ಹೊರಾಂಗಣ ಮತ್ತು ಒಳಾಂಗಣ ಚಿತ್ರೀಕರಣಕ್ಕೆ ಸ್ಥಳೀಯ ಕಲಾ ಪ್ರತಿಭೆಗಳಿಗೆ ಅನುಕೂಲವಾಗಲಿದೆ. ಅವರ ಕಲಾ ಪ್ರತಿಭೆಯನ್ನು ಅನಾವರಣ ಮಾಡಲು ಸಹ ಅನುಕೂಲವಾಗಲಿದೆ. ಬೆಂಗಳೂರು ಕೇಂದ್ರ ಸ್ಥಾನ ಹೊರತುಪಡಿಸಿ ಹೊರಗಡೆಗೆ ಸ್ಟುಡಿಯೋ ಸ್ಥಾಪನೆ ಉದ್ದೇಶವಾಗಿದೆ ಎಂದರು.
ಸ್ಟುಡಿಯೋ ಸ್ಥಾಪನೆಯಿಂದ ಉತ್ತರ ಕರ್ನಾಟಕದ ಜಿಲ್ಲೆ, ಕಲ್ಯಾಣ ಕರ್ನಾಟಕ, ಕೋಸ್ಟಲ್ ಕರ್ನಾಟಕದ ಭಾಗಕ್ಕೂ ಸಂಪರ್ಕಕ್ಕೆ ಅನುಕೂಲವಾಗಲಿದೆ. ವಿಜಯನಗರ ಸೇರಿದಂತೆ ಮೂರ್ನಾಲ್ಕು ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಮನವಿ ಮಾಡಿ 25 ಎಕರೆ ಅನುಪಯುಕ್ತ ಜಾಗವನ್ನು ರಾಜ್ಯ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ನೀಡಿದಲ್ಲಿ ಅಲ್ಲಿ ಸ್ಟುಡಿಯೋ ಸ್ಥಾಪನೆ ಮಾಡಿ ಕಿರು ಚಿತ್ರ, ಸಿನಿಮಾ ಸೇರಿದಂತೆ ಜಾನಪದ ಕಲೆ, ಸ್ಥಳೀಯ ಕಲೆಗಳ ಪ್ರದರ್ಶನದ ಚಿತ್ರೀಕರಣ ಮಾಡಿ ಒಟಿಟಿ ಮೂಲಕ ಪ್ರಸಾರ ಮಾಡಲು ಸಹ ಅನುಕೂಲವಾಗಲಿದೆ. ಇದರಿಂದ ದೇಶ, ವಿದೇಶಗಳಲ್ಲಿನ ಕನ್ನಡಿಗರು ನಾಡಿನ ಕಲೆ, ಸಂಗೀತ ವೀಕ್ಷಣೆ ಮಾಡಲು ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದರು.ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಮನವಿ ಸ್ವೀಕರಿಸಿ, ಸ್ಟುಡಿಯೋ ಸ್ಥಾಪನೆ ಬಗ್ಗೆ ನೀಡಿರುವ ಮನವಿ ಪತ್ರದನ್ವಯ ಪರಿಶೀಲನೆ ನಡೆಸಿ ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.