ಗದಗ: ಮಕ್ಕಳ ಸೃಜನಾತ್ಮಕತೆ ಉತ್ತೇಜಿಸುವ ದೃಷ್ಟಿಯಿಂದ ಭಾನುವಾರ ಗದಗ ಮೃಗಾಲಯದಲ್ಲಿ ಕನ್ನಡಪ್ರಭ ದಿನಪತ್ರಿಕೆ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಜಂಟಿಯಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು ಕಲಾಲೋಕವನ್ನೇ ಸೃಷ್ಟಿಸಿದರು.
ಬೆಳಗ್ಗೆ ನಡೆದ ಕಾರ್ಯಕ್ರಮವನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹಾಂತೇಶ ಅವರು ಚಿತ್ರ ಬರೆಯುವ ಮೂಲಕ ಉದ್ಘಾಟಿಸಿ, ಮಕ್ಕಳ ಮನೋವಿಕಾಸಕ್ಕೆ ಸಹಕಾರಿಯಾಗಿದೆ ಎಂದರು.ಮೃಗಾಲಯದ ಆರ್‌ಎಫ್‌ಒ ಸ್ನೇಹಾ ಕೊಪ್ಪಳ ಮಾತನಾಡಿ, ಚಿತ್ರಕಲೆ ಎನ್ನುವುದು ಪ್ರತಿಯೊಬ್ಬರಲ್ಲಿ ಅಡಗಿರುವ ಸುಪ್ತ ವಿದ್ಯೆಯಾಗಿದೆ. ಅದನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ ಕಲ್ಪಿಸಿದ ವೇದಿಕೆ ಉತ್ತಮವಾಗಿದೆ ಎಂದರು.
ವೃತ್ತಿ ವಿಷಯ ಪರಿವೀಕ್ಷಕಿ ಗೀತಾ ಕುಲಕರ್ಣಿ ಮಾತನಾಡಿ, ಇಲಾಖೆ ಮತ್ತು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ವಿದ್ಯಾರ್ಥಿಗಳ ಮನೋವಿಕಾಸಕ್ಕಾಗಿ ವೇದಿಕೆ ಕಲ್ಪಿಸಿದ್ದು, ಅದನ್ನು ವಿದ್ಯಾರ್ಥಿಗಳು ಸೂಕ್ತವಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು.ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಗಾರ ಗಿರೀಶ ಕಮ್ಮಾರ ಮಾತನಾಡಿ, ಚಿತ್ರಕಲೆ ಎನ್ನುವುದು ಮಕ್ಕಳಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸುವ, ಭಾವನೆಗಳಿಗೆ ಉತ್ತೇಜನ ನೀಡುವ ವಿಷಯವಾಗಿದೆ ಎಂದರು.ಕನ್ನಡಪ್ರಭ ಪ್ರಧಾನ ವರದಿಗಾರ ಶಿವಕುಮಾರ ಕುಷ್ಟಗಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಈ ಚಿತ್ರಕಲಾ ಸ್ಪರ್ಧೆಯ ಸ್ವರೂಪ ಮತ್ತು ವಿಷಯ ಪ್ರಶಸ್ತಿಗಳ ಬಗ್ಗೆ ತಿಳಿಸಿದರು.ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯ ಕಿರೇಸೂರ ನಿರೂಪಿಸಿದರು. ಕನ್ನಡಪ್ರಭ ಛಾಯಾಗ್ರಾಹಕ ಶಂಕರ ಗುರಿಕಾರ, ಸುವರ್ಣ ನ್ಯೂಸ್‌ನ ಕ್ಯಾಮೆರಾಮನ್ ಲಿಂಗರಾಜ ಹಂಜಗಿಮಠ, ಕನ್ನಡಪ್ರಭ ಪ್ರಸರಣ ವಿಭಾಗದ ಪ್ರಸಾದ ಮುಂತಾದವರು ಇದ್ದರು. ಬಸವರಾಜ ಈರಣ್ಣವರ ವಂದಿಸಿದರು.ವಿನೂತನವಾಗಿ ಉದ್ಘಾಟನೆ...ಚಿತ್ರಕಲಾ ಸ್ಪರ್ಧೆಯನ್ನು ವಿನೂತನ ರೀತಿಯಲ್ಲಿ ಉದ್ಘಾಟಿಸಲಾಯಿತು. ಡ್ರಾಯಿಂಗ್ ಸೀಟ್‌ಗೆ ಅತಿಥಿಗಳು ಬಣ್ಣ ಬಳಿಯುತ್ತಿದ್ದಂತೆ ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ ಚಿತ್ರಕಲಾ ಸ್ಪರ್ಧೆ ಎಂದು ಅಕ್ಷರಗಳು ಅನಾವರಣಗೊಳ್ಳುವ ಮೂಲಕ ಚಾಲನೆ ದೊರೆಯಿತು.ಸೈಕಲ್ ಬಹುಮಾನ...ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಸೈಕಲ್, ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗೆ ಸ್ಮಾರ್ಟ್ ವಾಚ್ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗೆ ಕಾಪರ್ ಬಾಟಲ್‌ಗಳನ್ನು ಬಹುಮಾನವಾಗಿ ವಿತರಿಸಲಾಯಿತು.