ಚೆನ್ನೈ/ಬೆಂಗಳೂರು: ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಹಂಚಿಕೆ ಮಾಡಿದ ಹಾಗೂ ಕರ್ನಾಟಕವು ಬಿಡುಗಡೆ ಮಾಡುತ್ತಿರುವ ನೀರಿನ ಪ್ರಮಾಣ ಎರಡೂ ಕಡಿಮೆ ಎಂದು ಹೇಳಿಕೊಂಡು ತಮಿಳುನಾಡು ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಮುಖ್ಯಮಂತ್ರಿ ವಿಜಯ್‌ ಅವರು ಹಿರಿಯ ವಕೀಲರ ಜತೆಗೆ ಚರ್ಚಿಸಿದ ಬಳಿಕ ನೀಡಿದ ಸೂಚನೆಯಂತೆ ಸುಪ್ರೀಂ ಕೋರ್ಟ್‌ಗೆ ಈ ಅರ್ಜಿ ಸಲ್ಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದರ ಬೆನ್ನಲ್ಲೇ ತಮಿಳುನಾಡು ಅರ್ಜಿಗೆ ತಕ್ಕ ಉತ್ತರ ನೀಡುವಂತೆ ಅಧಿಕಾರಿಗಳಿಗೆ ಮತ್ತು ರಾಜ್ಯದ ಪರ ವಕೀಲರಿಗೆ ಕರ್ನಾಟಕದ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.

ತ.ನಾಡು ವಾದವೇನು?:

ಕಾವೇರಿ ನೀರು ನಿಯಂತ್ರಣ ಸಮಿತಿಯು ಜು.28ರಂದು ಸಭೆ ಮಾಡಿ ಕರ್ನಾಟಕಕ್ಕೆ ಮುಂದಿನ 15 ದಿನಗಳ ಕಾಲ ನಿತ್ಯ 3500 ಕ್ಯುಸೆಕ್‌ ನೀರು ಬಿಡುವಂತೆ ಸೂಚಿಸಿತ್ತು. ಈ ಆದೇಶವನ್ನು ನಂತರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕೂಡ ಎತ್ತಿಹಿಡಿದಿತ್ತು. ಆ.3ರಂದು ಕಾವೇರಿ ಕಣಿವೆ ವ್ಯಾಪ್ತಿಯ ಕೆಆರ್‌ಎಸ್‌, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯದಲ್ಲಿ ಒಟ್ಟಾರೆ 77.537 ಟಿಎಂಸಿ ನೀರು ಸಂಗ್ರಹವಾಗಿತ್ತು. ಹೀಗಾಗಿ ಕರ್ನಾಟಕಕ್ಕೆ ನೀರು ಬಿಡುಗಡೆ ಮಾಡಲು ಯಾವುದೇ ಸಮಸ್ಯೆ ಇಲ್ಲ ಎಂದು ತಮಿಳುನಾಡು ಹೇಳಿಕೊಂಡಿದೆ.


ಕೆಆರ್‌ಎಸ್‌, ಕಬಿನಿ ಜಲಾಶಯ ಅಚ್ಚುಕಟ್ಟು ಪ್ರದೇಶದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಡ್ಯಾಂಗಳಿಗೆ ಒಳಹರಿವು ಹೆಚ್ಚಾಗಿದ್ದು, ಬಿಳಿಗುಂಡ್ಲುವಿನಲ್ಲಿ ಬಿಡುಗಡೆಯಾಗುವ ನೀರಿನ ಪ್ರಮಾಣ 26.954 ಟಿಎಂಸಿಗೆ ಹೆಚ್ಚಾಗಬೇಕು ಎಂದು ಹೇಳಿದೆ. ಹೀಗಾಗಿ 4.536 ಟಿಎಂಸಿ ನೀರು ಹರಿಸುವ ಆದೇಶ ಸರಿಯಲ್ಲ, ಹೆಚ್ಚಿನ ನೀರು ಹರಿಸಬೇಕಿದೆ ಎಂದು ಹೇಳಿಕೊಂಡು ಈ ಅರ್ಜಿ ಸಲ್ಲಿಸಲಾಗಿದೆ.

ಕರ್ನಾಟಕದಿಂದಲೂ ಮೇಲ್ಮನವಿ:ವಿಧಾನಸೌಧದಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ರಾಮಲಿಂಗಾರೆಡ್ಡಿ, ಕಾವೇರಿ ಕೊಳ್ಳದ ಜಲಾಶಯಗಳಾದ ಹೇಮಾವತಿ, ಹಾರಂಗಿ, ಕೆಆರ್‌ಎಸ್‌ ಮತ್ತು ಕಬಿನಿ ಜಲಾಶಯಗಳ ಒಳ ಮತ್ತು ಹೊರ ಹರಿವಿನ ವಿವರ ಪಡೆದರು. ಜತೆಗೆ ಕಬಿನಿ ಜಲಾಶಯ ಭರ್ತಿಯಾಗಿದ್ದು, ಅದರಿಂದ ಹೊರ ಹರಿವು ಹೆಚ್ಚಿದೆ. ಆ ನೀರಿನ ಪ್ರಮಾಣವು ತಮಿಳುನಾಡಿಗೆ ನಿಗದಿಪಡಿಸಿದ್ದಕ್ಕಿಂತ ಹೆಚ್ಚಾಗಿದೆ. ಹೀಗಿದ್ದರೂ ತಮಿಳುನಾಡು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಹೀಗಾಗಿ ರಾಜ್ಯದಿಂದ ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರಿನ ವಿವರಗಳೊಂದಿಗೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ನಿರ್ದೇಶಿಸಿದರು.

ಹೊರಹರಿವಿನ ವಿವರ:

ಕೆಆರ್‌ಎಸ್‌ನಲ್ಲಿ ಸದ್ಯ 23.07 ಟಿಎಂಸಿ ಅಡಿಗಳಷ್ಟು ನೀರಿದ್ದು, ಅದರಲ್ಲಿ ಡೆಡ್‌ ಸ್ಟೋರೇಜ್‌ ಹೊರತುಪಡಿಸಿ 14.70 ಟಿಎಂಸಿ ನೀರು ಬಳಕೆ ಮಾಡಬಹುದಾಗಿದೆ. ಕೆಆರ್‌ಎಸ್‌ಗೆ ಸದ್ಯ 32,048 ಕ್ಯುಸೆಕ್‌ ಒಳಹರಿವಿದ್ದು, 1,450 ಕ್ಯುಸೆಕ್‌ ಹೊರಹರಿವಿದೆ. ಹಾಗೆಯೇ, ತಮಿಳುನಾಡಿಗೆ ನೀರು ಹರಿಯುವ ಕಬಿನಿ ಜಲಾಶಯದಲ್ಲಿ ಸದ್ಯ 18.61 ಟಿಎಂಇ ಅಡಿಗಳಷ್ಟು ನೀಡಿದ್ದು, 8.80 ಟಿಎಂಸಿ ಅಡಿ ನೀರು ಬಳಸಬಹುದು. ಇನ್ನು, ಜಲಾಶಯಕ್ಕೆ 31,746 ಕ್ಯುಸೆಕ್‌ ಒಳಹರಿವಿದ್ದರೆ, 27 ಸಾವಿರ ಕ್ಯುಸೆಕ್‌ ನೀರು ತಮಿಳುನಾಡಿಗೆ ಹರಿಸಲಾಗುತ್ತಿದೆ. ಇದನ್ನು ಗಮನಿಸಿದರೆ ಸಿಡಬ್ಲ್ಯುಎಂಎ ನೀಡಿರುವ ಆದೇಶಕ್ಕಿಂತ ಹೆಚ್ಚಿನ ನೀರು ತಮಿಳುನಾಡಿಗೆ ಹರಿಸಲಾಗುತ್ತಿದೆ.