ಮೇವಿಲ್ಲದೆ ಮರಣದ ಅಂಚಲ್ಲಿ ದೇವರ ಎತ್ತುಗಳು

KannadaprabhaNewsNetwork |  
Published : Mar 19, 2026, 01:15 AM IST
ಚಿತ್ರ 18ಎಂ.ಎಲ್.ಕೆ2 ತಾಲೂಕಿನ ಮುತ್ತಿಗಾರ ಹಳ್ಳಿಯ ದೇವರ ಎತ್ತುಗಳು ದೂಡುವ ದೊಡ್ಡಿಯ ಸಮೀಪದಲ್ಲಿ ಸಾವಿಗೀಡಾಗಿರುವ ಜಾನುವಾರು.ಚಿತ್ರ 18ಎಂ.ಎಲ್.ಕೆ3ತಾಲೂಕಿನ ಮುತ್ತಿಗಾರ ಹಳ್ಳಿಯ ದೇವರ ಎತ್ತುಗಳು ದೂಡುವ ದೊಡ್ಡಿಯ ಸಮೀಪದಲ್ಲಿ ಸಾವಿಗೀಡಾಗಿರುವ ಜಾನುವಾರು.ಚಿತ್ರ 18ಎಂ.ಎಲ್.ಕೆ4ತಾಲೂಕಿನ ಮುತ್ತಿಗಾರ ಹಳ್ಳಿಯ ದೇವರ ಎತ್ತುಗಳು ದೂಡುವ ದೊಡ್ಡಿಯ ಸಮೀಪದಲ್ಲಿ ಸಾವಿಗೀಡಾಗಿರುವ ಜಾನುವಾರು. | Kannada Prabha

ಸಾರಾಂಶ

ಹಸಿರು ಮರೆಯಾಗಿ ಬಿರು ಬಿಸಿಲು ಏರುತ್ತಿದ್ದಂತೆ ಬುಡಕಟ್ಟು ಸಮುದಾಯದ ನಂಬಿಕೆಯ ಮೇಲೆ ಬರಸಿಡಿಲು ಬಡಿದಂತಾಗಿದೆ. ಶತಮಾನಗಳ ಪರಂಪರೆಯನ್ನು ಹೊತ್ತು ತಿರುಗುವ ದೇವರ ಎತ್ತುಗಳು ಇಂದು ಹನಿ ನೀರು ಮತ್ತು ತುತ್ತು ಮೇವಿಗಾಗಿ ಪರಿತಪಿಸುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಹಸಿವಿನ ಬಾಧೆ ಮತ್ತು ರಣ ಬಿಸಿಲ ತಾಪಕ್ಕೆ ಒಂಬತ್ತು ಜಾನುವಾರು ಪ್ರಾಣ ಕಡೆದುಕೊಂಡಿದ್ದು ಬುಡಕಟ್ಟು ಜನರಲ್ಲಿ ಆತಂಕ ಮನೆ ಮಾಡುವಂತಾಗಿದೆ.

ಬಿಜಿಕೆರೆ ಬಸವರಾಜ

ಕನ್ನಡ ಪ್ರಭ ವಾರ್ತೆ ಮೊಳಕಾಲ್ಮೂರು

ಹಸಿರು ಮರೆಯಾಗಿ ಬಿರು ಬಿಸಿಲು ಏರುತ್ತಿದ್ದಂತೆ ಬುಡಕಟ್ಟು ಸಮುದಾಯದ ನಂಬಿಕೆಯ ಮೇಲೆ ಬರಸಿಡಿಲು ಬಡಿದಂತಾಗಿದೆ. ಶತಮಾನಗಳ ಪರಂಪರೆಯನ್ನು ಹೊತ್ತು ತಿರುಗುವ ದೇವರ ಎತ್ತುಗಳು ಇಂದು ಹನಿ ನೀರು ಮತ್ತು ತುತ್ತು ಮೇವಿಗಾಗಿ ಪರಿತಪಿಸುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಹಸಿವಿನ ಬಾಧೆ ಮತ್ತು ರಣ ಬಿಸಿಲ ತಾಪಕ್ಕೆ ಒಂಬತ್ತು ಜಾನುವಾರು ಪ್ರಾಣ ಕಡೆದುಕೊಂಡಿದ್ದು ಬುಡಕಟ್ಟು ಜನರಲ್ಲಿ ಆತಂಕ ಮನೆ ಮಾಡುವಂತಾಗಿದೆ.

ಬುಡಕಟ್ಟು ಜನರಿಗೆ ಎತ್ತುಗಳೇ ದೇವರು.ನೂರಾರು ಹಳ್ಳಿಗಳ ಮ್ಯಾಸ ನಾಯಕರು ಶುಭ ಸಂದರ್ಭದಲ್ಲಿ ಮೊದಲು ಪೂಜಿಸುವುದು ತಲೆ ತಲಾಂತರದಿಂದ ಬಂದ ಸಂಪ್ರದಾಯ. ಕಿಲಾರಿಗಳು (ಪೋಷಕರು) ದೇವರ ಎತ್ತುಗಳ ಪೋಷಕರು.

ಯಾವುದೇ ಸಹಾಯ ಇಲ್ಲದೆ ನಿಸ್ವಾರ್ಥ ಸೇವೆ ಇವರದ್ದು ಶತಮಾನಗಳಿಂದಲೂ ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಜಾನುವಾರುಗಳಿಗೆ ಪ್ರಸ್ತುತ ದಿನಗಳಲ್ಲಿ ಮೇವಿನ ಕೊರತೆ ಬಾಧಿಸುತ್ತಿದೆ .ಈ ಸಮಸ್ಯೆಗೆ ಸಿಲುಕಿ ಕಳೆದೊಂದು ಕಳೆದ ಹದಿನೈದು ದಿನಗಳಿಂದ 9 ದೇವರ ಎತ್ತುಗಳ ಪೈಕಿ ಕೆಲವು ಅನಾರೋಗ್ಯಕ್ಕೆ ತುತ್ತಾಗಿ ಸಾವಿಗೀಡಾದರೆ ಇನ್ನೂ ಕೆಲವು ಹಸಿವಿನಿಂದ ಪ್ರಾಣ ಕಳೆದು ಕೊಂಡಿವೆ ಎನ್ನುವುದು ಅಲ್ಲಿನ ಕಿಲಾರಿಗಳಿಂದ ಕೇಳಿಬರುತ್ತಿದೆ.

ಮೇವಿನ ಮೂಲ ಇಲ್ಲದೆ ಕೇವಲ ಅರಣ್ಯ ಮತ್ತು ಬಯಲನ್ನು ನೆಚ್ಚಿಕೊಂಡಿರುವ ದೇವರ ಎತ್ತುಗಳು ಕೂಡ್ಲಿಗಿ ತಾಲೂಕಿನ ಕಡೆ ಮೇವು ಹರಸಿ ಹೋಗಿದ್ದ ವೇಳೆ 6 ಜಾನುವಾರು ಪಟ್ಟರೆ .ಮುತ್ತಿಗಾರಹಳ್ಳಿ ಎತ್ತುಗಳು ದೂಡುವ ದೊಡ್ಡಿಯಲ್ಲಿ ಮೂರು ಕರುಗಳು ಪ್ರಾಣ ಕಳೆದುಕೊಂಡಿವೆ ಎನ್ನುವುದು ಅಲ್ಲಿನ ಕಿಲಾರಿ ಪಾಲಯ್ಯ ಅವರ ಅಭಿಪ್ರಾಯ. ಕಣ್ಣ ಮುಂದೆಯೇ ಕರುಗಳು ಪ್ರಾಣ ಬಿಡುತ್ತಿರುವುದನ್ನು ನೋಡಲು ಸಾಧ್ಯವಾಗುತ್ತಿಲ್ಲ. ನಮಗೆ ಮೇವು ಒದಗಿಸಿ ಎನ್ನುವುದು ಕಿಲಾರಿ ಸುಕ್ಲು ಮಲ್ಲಯ್ಯ ಅವರ ಅಳಲು.

ಸರ್ಕಾರದ ಸಹಾಯವಿಲ್ಲದೆ ಕೇವಲ ಭಕ್ತರು ನೀಡುವ ಮೇವಿಂದ ಪೋಷಣೆಯಾಗುತ್ತಿರುವ ಅಮೃತ ಮಹಲ್ ತಳಿಯ ದೇಸಿ ದನಕರುಗಳಿಗೆ ಪ್ರತಿ ಬೇಸಿಗೆ ಮೇವಿನ ಕೊರತೆ ಬಾದಿಸುವುದು ಸಾಮಾನ್ಯ. ಮೇವು ಸರಿದೂಗಿಸುವಲ್ಲಿ ದೂರದ ಕಡೆ ಗುಳೆ ಹೋಗುವುದು ಮಾಮೂಲು.ಆದರೆ ಈ ಬಾರಿ ಬಿರು ಬಿಸಿಲಿಗೆ ಅಂಜಿ ವಲಸೆ ಹೋಗಿಲ್ಲ.ಪರಿಣಾಮ ಭಕ್ತರು ನೀಡಿದ್ದ ಮೇವು ಅನಿವಾರ್ಯವಾಗಿದ್ದು ಅದು ಖಾಲಿಯಾಗುವ ಸನಿಹದಲ್ಲಿದ್ದು ದನಕರುಗಳ ಪೋಷಣೆಗೆ ಸಂಚಕಾರ ಎದುರಾಗುವಂತಾಗಿದೆ.

ಕೇವಲ ಪೂಜೆಗೆ ಮಾತ್ರ ಸೀಮಿತವಾಗಿರುವ ದೇವರ ಎತ್ತುಗಳ ಮಾರಾಟವಿಲ್ಲ ವಾಣಿಜ್ಯ ಬಳಕೆಯಿಲ್ಲ ಈ ಹಸುಗಳ ಹಾಲನ್ನು ಮಾರಾಟ ಮಾಡದೆ ಭಕ್ತರಿಗೆ ಹಾಲು, ಮೊಸರು ಮತ್ತು ಮಜ್ಜಿಗೆಯನ್ನು ಪ್ರಸಾದ ರೂಪದಲ್ಲಿ ಉಚಿತವಾಗಿ ನೀಡಲಾಗುತ್ತದೆ. ಇದು ತಲೆ ತಲಾಂತರದಿಂದ ನಡೆಯುತ್ತಿರುವ ಸಂಪ್ರದಾಯ.

350ಕ್ಕೂ ಹೆಚ್ಚು ಇರುವ ಎತ್ತುಗಳಿಗೆ ಒಂದೆಡೆ ಬಿರು ಬಿಸಿಲಿನ ಹೊಡೆತ ಮತ್ತೊಂದೆಡೆ ಮೇವಿನ ಕೊರತೆ ಈ ಎರಡರ ನಡುವೆ ಎತ್ತುಗಳನ್ನು ಉಳಿಸಲು ಕಿಲಾರಿಗಳು ಹೋರಾಟ ನಡೆಸುತ್ತಿದ್ದಾರೆ. ಮೇವಿನ ದಾಸ್ತಾನು ಸಂಪೂರ್ಣವಾಗಿ ಖಾಲಿಯಾಗಿದ್ದು ಶಕ್ತಿಯಿರುವ ಜಾನುವಾರುಗಳು ದೂರದ ಪ್ರದೇಶಗಳಿಗೆ ಮೇವು ಹುಡುಕಲು ತೆರಳಿದರೆ ದುರ್ಬಲ ದೇಹ ಹೊಂದಿರುವ ಎತ್ತುಗಳು ದೇವರ ದೂಡುವ ದೊಡ್ಡಿಗಳಲ್ಲೇ ಉಳಿದುಕೊಂಡು ಕಷ್ಟಪಡುತ್ತಿವೆ.ಇಡೀ ಅರಣ್ಯ ಪ್ರದೇಶ ಸುತ್ತಿದರೂ ಮೇವು ದೊರೆಯದೆ ಎತ್ತುಗಳು ನಿಶ್ಚಕ್ತಿಗೊಳಗಾಗುತ್ತಿವೆ.

ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಈ ಎತ್ತುಗಳ ರಕ್ಷಣೆಗೆ ಇದುವರೆಗೆ ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ. ಪ್ರತ್ಯೇಕ ಗೋಶಾಲೆ ಇಲ್ಲದಿರುವುದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ.ಸರ್ಕಾರ ಕೂಡಲೇ ಎಚ್ಚೆತ್ತು ನೂರಾರು ವರ್ಷಗಳಿಂದ ನಂಬಿಕೆಯ ತಳಹದಿಯ ಮೇಲೆ ನಿಂತಿರುವ ಬುಡಕಟ್ಟು ಸಂಸ್ಕೃತಿಯನ್ನು ಉಳಿಸಲು ಗೋಶಾಲೆ ಆರಂಭಿಸಬೇಕು. ಶತಮಾನಗಳ ಪರಂಪರೆ ಅಳಿಯುವ ಮುನ್ನಾ ಶಾಶ್ವತ ಪರಿಹಾರ ಒದಗಿಸಬೇಕು ಎನ್ನುವುದು ಈ ಭಾಗದ ಬುಡಕಟ್ಟು ಜನರ ಅಭಿಪ್ರಾಯ.

ಮೇವು ಬೆಳೆಯಲು ಭೂಮಿ ನೀಡಲು ಮನವಿ

ಬುಡಕಟ್ಟು ಜನರ ಆರಾದ್ಯ ದೈವ ದೇವರ ಎತ್ತುಗಳಿಗೆ ಪ್ರಸ್ತುತ ದಿನಗಳಲ್ಲಿ ಮೇವಿನ ಕೊರತೆ ಕಾಡುತ್ತಿದೆ. ಸರ್ಕಾರ ಎತ್ತುಗಳ ದೂಡುವ ದೊಡ್ಡಿಯ ಸಮೀಪದಲ್ಲಿ 16 ಎಕರೆ ಭೂಮಿ ಕೊಟ್ಟರೆ ಅದರಲ್ಲಿ ಮೇವು ಬೆಳೆದು ಜಾನುವಾರು ಪೋಷಣೆ ಮಾಡುತ್ತೇವೆ. ಈ ಸಂಬಂಧವಾಗಿ ಜಿಲ್ಲಾಧಿಕಾರಿಗೆ ಅರ್ಜಿಯನ್ನು ನೀಡಿದ್ದೇವೆ. ಜತೆಗೆ ಶಾಶ್ವತ ಗೋಶಾಲೆ ಆರಂಭಿಸಿದ್ದಲ್ಲಿ ಬುಡಕಟ್ಟು ಜನರ ಸಂಪ್ರದಾಯ ಮತ್ತು ಆಚರಣೆಗಳನ್ನು ಮುಂದಿನ ತಲೆಮಾರಿಗೂ ಜೀವಂತಗೊಳಿಸಬಹುದು ಎಂದು ಮೊಳಕಾಲ್ಮೂರು ಮ್ಯಾಸ ನಾಯಕ ಬುಡಕಟ್ಟು ಸಂಸ್ಕೃತಿ ಸಂರಕ್ಷಣೆ ಸಮಿತಿ ಸಂಚಾಲಕ ಕೆ.ಬಿ.ಓಬಣ್ಣ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಭ್ಯಂಗ ಸ್ನಾನಕ್ಕೆ ಒತ್ತು ನೀಡುವುದು ಅಗತ್ಯ: ಡಾ.ಚಂದ್ರಕಾಂತ್ ನಾಗಸಮುದ್ರ
2024ನೇ ಸಾಲಿನ ಶ್ರೀಶಿವರಾತ್ರೀಶ್ವರ ಪ್ರಶಸ್ತಿಗೆ ಪ್ರೊ.ಬಾಲಚಂದ್ರ ಜಯಶೆಟ್ಟಿ ಆಯ್ಕೆ