ಶ್ರೀಶಿವರಾತ್ರೀಶ್ವರ ಧಾರ್ಮಿಕ ದತ್ತಿಯ 2024ನೇ ಸಾಲಿನ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿಗೆ ದಿವಂಗತ ಪ್ರೊ. ಬಾಲಚಂದ್ರ ಜಯಶೆಟ್ಟಿಯವರ ಅಧ್ಯಾತ್ಮ ಕ್ರಾಂತಿವೀರ ಮಹಾತ್ಮ ಶ್ರೀ ಬಸವೇಶ್ವರ್ ಕೇ ವಚನ್ ಹಿಂದಿ ಕೃತಿಯು ಆಯ್ಕೆಯಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಅಧ್ಯಾತ್ಮ ಕ್ರಾಂತಿವೀರ ಮಹಾತ್ಮ ಶ್ರೀ ಬಸವೇಶ್ವರ್ ಕೇ ವಚನ್ ಕೃತಿಗೆ 2024ನೇ ಸಾಲಿನ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ ಲಭಿಸಿದೆ.

ಶ್ರೀಶಿವರಾತ್ರೀಶ್ವರ ಧಾರ್ಮಿಕ ದತ್ತಿಯ 2024ನೇ ಸಾಲಿನ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿಗೆ ದಿವಂಗತ ಪ್ರೊ. ಬಾಲಚಂದ್ರ ಜಯಶೆಟ್ಟಿಯವರ ಅಧ್ಯಾತ್ಮ ಕ್ರಾಂತಿವೀರ ಮಹಾತ್ಮ ಶ್ರೀ ಬಸವೇಶ್ವರ್ ಕೇ ವಚನ್ ಹಿಂದಿ ಕೃತಿಯು ಆಯ್ಕೆಯಾಗಿದೆ.

ಪ್ರೊ.ಬಾಲಚಂದ್ರ ಜಯಶೆಟ್ಟಿಯವರು ಲೇಖಕರು, ಅನುವಾದಕರು. ಮೂಲತಃ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದವರು. ವಿವಿಧ ಸರಕಾರಿ ಕಾಲೇಜುಗಳಲ್ಲಿ ಹಿಂದಿ ಪ್ರಾಧ್ಯಾಪಕರಾಗಿ, ಬಳಿಕ ಪ್ರಾಂಶುಪಾಲರಾಗಿ 1997ರಲ್ಲಿ ನಿವೃತ್ತರಾದರು. ಹಿಂದಿ ಮತ್ತು ಕನ್ನಡ ಅನುವಾದದ 83 ಕೃತಿಗಳು, 26 ಸಂಪಾದಿತ ಕೃತಿಗಳು, 16 ಕನ್ನಡ ಕೃತಿಗಳು, 24 ಮರಾಠಿ ಕೃತಿಗಳು, 9 ಹಿಂದಿ ಕೃತಿಗಳು, 5 ಸಂಶೋಧನೆ ಮತ್ತು ಸಮೀಕ್ಷಾತ್ಮಕ ಲೇಖನಗಳು ಇವರಿಂದ ರಚಿತವಾಗಿವೆ.

ರಾಜ್ಯ ಸರ್ಕಾರದ ಪದವಿ ಪೂರ್ವ ತರಗತಿಗಳ ಹಿಂದಿ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ, ವಿಶ್ವವಿದ್ಯಾಲಯ ಶಿಕ್ಷಣ ಮಂಡಳಿ, ಸೆನೆಟ್, ಕಲಾನಿಕಾಯದ ವಿಶೇಷತಜ್ಞರಾಗಿಯೂ ಸೇವೆ ಸಲ್ಲಿಸಿದ್ದರು. ದೆಹಲಿಯ ಭಾರತೀಯ ಅನುವಾದ್ ಪರಿಷತ್, ಆಥರ್ಸ್ ಗಿಲ್ಡ್ ಆಫ್ ಇಂಡಿಯಾ ಮುಂತಾದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಇವರ ಸಾಹಿತ್ಯಸೇವೆಗೆ ಅನೇಕ ಪ್ರಶಸ್ತಿಗಳು, ಪುರಸ್ಕಾರಗಳು ಸಂದಿವೆ.

ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ 1983 ರಿಂದ ಪ್ರತಿ ವರ್ಷವೂ ಉತ್ತಮ ಕೃತಿಗೆ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ ನೀಡಲಾಗುತ್ತಿದೆ. ಪುರಸ್ಕೃತರ ಪರವಾಗಿ ಅವರ ಮನೆಯವರಿಗೆ ಪ್ರಶಸ್ತಿಫಲಕ, ಸ್ವಸ್ತಿವಾಚನ, ಫಲತಾಂಬೂಲ ಹಾಗೂ 25 ಸಾವಿರ ರು.ಗಳ ಗೌರವಧನವನ್ನು ಸಮಾರಂಭದಲ್ಲಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು.