ಕನ್ನಡಪ್ರಭ ವಾರ್ತೆ ಮೈಸೂರು
ಭಗವಂತನು ಭಕ್ತರನ್ನು ಕಠಿಣವಾಗಿ ಪರೀಕ್ಷಿಸುತ್ತಾನೆ ಮತ್ತು ಅವರನ್ನು ಅದರಲ್ಲಿ ಜಯಶಾಲಿಯಾಗುವಂತೆಯೂ ಮಾಡುತ್ತಾನೆ ಎಂದು ಲೇಖಕ ಪ್ರೊ.ಕೆ. ಅನಂತರಾಮು ತಿಳಿಸಿದರು.ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಮಠದಲ್ಲಿ ಶ್ರಾವಣ ಮಾಸದ 27ನೇ ದಿನದ ಪ್ರವಚನ ನೀಡಿದ ಅವರು, ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿಯಲ್ಲಿ ವಿವರಿಸಿರುವಂತೆ ತಮಿಳುನಾಡಿನ ಕಂಚಿ ಪಟ್ಟಣದಲ್ಲಿ ಸಿರಿಯಾಳ ಮತ್ತು ಚೆಂಗಳೆ ಎಂಬ ಅಪ್ಪಟ ಶಿವಭಕ್ತ ದಂಪತಿ ಇರುತ್ತಾರೆ. ಸಂತಾನವಿಲ್ಲದ ಅವರು ಬಹಳ ವರ್ಷಗಳ ನಂತರ ಶಿವನನ್ನು ಕುರಿತು ಕಠಿಣ ವ್ರತವನ್ನು ಆಚರಿಸಿ ಚೀಲಾಳ ಎಂಬ ಪುತ್ರನನ್ನು ಪಡೆಯುತ್ತಾರೆ ಎಂದರು.
ಸಿರಿಯಾಳನು ನಿತ್ಯವೂ ನೂರಾರು ಜಂಗಮರಿಗೆ ದಾಸೋಹ ಸೇವೆಯನ್ನು ಮಾಡುತ್ತಿರುತ್ತಾನೆ. ಆತನ ಸೇವೆಯ ಕೀರ್ತಿ ಶಿವಲೋಕದವರೆಗೂ ಹಬ್ಬುತ್ತದೆ. ಶಿವನು ಇಂದ್ರಾದಿ ದೇವತೆಗಳನ್ನು ಕರೆದು ಸಿರಿಯಾಳನನ್ನು ಪರೀಕ್ಷೆ ಮಾಡಿ ಬನ್ನಿರೆಂದು ಕಳುಹಿಸುತ್ತಾನೆ. ನೂರಾರು ಸಂಖ್ಯೆಯಲ್ಲಿ ಜಂಗಮ ರೂಪದಲ್ಲಿ ಹೋಗಿದ್ದ ದೇವತೆಗಳನ್ನೆಲ್ಲ ಸಿರಿಯಾಳನು ಸಂತೃಪ್ತಗೊಳಿಸುತ್ತಾನೆ ಎಂದು ಹೇಳಿದರು.ನಾರದನು ಸಿರಿಯಾಳನನ್ನು ಪರೀಕ್ಷಿಸಲು 21 ದಿನಗಳ ಕಾಲ ಮಳೆಯನ್ನು ಸುರಿಸುತ್ತಾನೆ. ಇದರಿಂದ ಸಿರಿಯಾಳನಿಗೆ ಪ್ರಸಾದ ತಯಾರಿಸಲು ಒಣಸೌಧೆ ದೊರೆಯದಂತಾಗುತ್ತದೆ. ನಾರದನು ಜಂಗಮರೂಪ ಧರಿಸಿ ಬರುತ್ತಾನೆ. ಸಿರಿಯಾಳನು ಪ್ರಸಾದ ತಯಾರಿಸಲು ತನ್ನ ಪಟ್ಟೆ ಪೀತಾಂಬರಗಳನ್ನೇ ದಹಿಸಲು ಶುರು ಮಾಡಿದನು. ನಾರದನು ಸಿರಿಯಾಳನ ಭಕ್ತಿಗೆ ಮೆಚ್ಚಿ ಪಟ್ಟೆ ಪೀತಾಂಬರಗಳನ್ನು ದಹಿಸಿವುದನ್ನು ನಿಲ್ಲಿಸುತ್ತಾನೆ ಎಂದರು.
ಕೊನೆಗೆ ಶಿವನೇ ಜಂಗಮರೂಪವನ್ನು ಧರಿಸಿ ಸಿರಿಯಾಳನ ಭಕ್ತಿಯನ್ನು ಪರೀಕ್ಷಿಸಲು ಬರುತ್ತಾನೆ. ಶಿವನು ನಾನು ನರಮಾಂಸವನ್ನು ಮಾತ್ರ ಪ್ರಸಾದವನ್ನಾಗಿ ಸೇವಿಸುವುದು ಎನ್ನುತ್ತಾನೆ. ಕೊನೆಗೆ ದಂಪತಿ ಅವರ ಪುತ್ರನನ್ನೇ ಕತ್ತರಿಸಿ ಪ್ರಸಾದ ತಯಾರಿಸುತ್ತಾರೆ. ಜಂಗಮರೂಪಿ ಶಿವನು ಸಿರಿಯಾಳನನ್ನು ಸಹ ಪ್ರಸಾದ ಸೇವಿಸಲು ಆಹ್ವಾನಿಸುತ್ತಾನೆ. ಅವರ ಪುತ್ರನನ್ನು ಪ್ರಸಾದ ಸೇವಿಸಲು ಕರೆಯುವಂತೆ ಚಂಗಳೆಗೆ ಶಿವನು ಹೇಳುತ್ತಾನೆ. ತಾಯಿಯು ಮಗನ ಹೆಸರು ಹೇಳಿ ಕರೆಯುತ್ತಿದ್ದಂತೆ ಮಗುವು ಒಳಗಿನಿಂದ ಓಡಿ ಬರುತ್ತದೆ. ಶಿವನು ಅವರ ಭಕ್ತಿಗೆ ಮೆಚ್ಚಿ ನಿಜರೂಪ ತೋರುತ್ತಾನೆ. ಶಿವನ ಆಶೀರ್ವಾದದಿಂದ ಸಿರಿಯಾಳನ ಜೊತೆಗೆ ಅವರ ಸುತ್ತಮುತ್ತಲಿನ ಜನರು ಉದ್ಧಾರವಾಗುತ್ತಾರೆ ಎಂದು ತಿಳಿಸಿದರು.ಕೆ.ಎನ್. ರವಿಶಂಕರ್ ಮತ್ತು ಕುಟುಂಬದವರು ಸೇವಾರ್ಥ ನೆರವೇರಿಸಿದರು.