ಕನ್ನಡಪ್ರಭ ವಾರ್ತೆ ಮೈಸೂರು
ವಿದ್ಯಾರ್ಥಿಗಳು ಎಐ, ಸೈಬರ್ ಸುರಕ್ಷತೆ ಮೊದಲಾದ ತಾಂತ್ರಿಕ ಕ್ಷೇತ್ರಗಳಲ್ಲಿ ಪಾರಂಗತರಾಗಿ ತರಗತಿಯ ಹೊರಗೂ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಹೇಳಿದರು.ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಪರಿವರ್ತನಾ ಬಿಸಿನೆಸ್ ಸ್ಕೂಲ್ ನ 2023- 25ನೇ ಸಾಲಿನ ಎಂಬಿಎ ಮತ್ತು ಎಂಸಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಎಂಬಿಎ ವಿದ್ಯಾರ್ಥಿಗಳಿಗೆ ವಿದೇಶಗಳಲ್ಲಿ ಉತ್ತಮ ಸಂಬಳದ ಹುದ್ದೆಗಳ ಅವಕಾಶವಿದೆ. ಈ ನಿಟ್ಟಿನಲ್ಲಿ ತಮ್ಮ ಕೌಶಲ್ಯ ವೃದ್ಧಿಸಿಕೊಳ್ಳಬೇಕು. ಕೇವಲ ಸಂಪಾದನೆಯೊಂದೇ ಜೀವನ ಗುರಿಯಾಗಬಾರದು. ಸಮಾಜ ಸೇವೆಯ ಮೂಲಕ ಉತ್ತಮ ಜಗತ್ತನ್ನು ನಿರ್ಮಿಸಬಹುದು ಎಂದು ಅವರು ಹೇಳಿದರು.ಮುಕ್ತ ವಿವಿಯ ವಿಶ್ರಾಂತ ಕುಲಪತಿ ಡಾ.ಎನ್.ಎಸ್. ರಾಮೇಗೌಡ ಮಾತನಾಡಿ, ಪಿಎಚ್ ಡಿ ಅಧ್ಯಯನಗಳಿಗೆ ಸಂಬಂಧಿಸಿದಂತೆ ಯುಜಿಸಿ ಹೊಸ ನಿಯಮಾವಳಿ ಪ್ರಕಟಿಸಿದೆ. 120 ವಿದ್ಯಾರ್ಥಿಗಳಲ್ಲಿ ಪ್ರತಿಯೊಬ್ಬರೂ ವಿಭಿನ್ನ ವೃತ್ತಿಪರ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವುದು ಗಮನಾರ್ಹ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಓಂ ಶ್ರೀನಿಕೇತನ ಟ್ರಸ್ಟ್ ಅಧ್ಯಕ್ಷ ಡಾ.ಎಂ. ಪುಟ್ಟೇಗೌಡ ಮಾತನಾಡಿ, ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯ ಕೊಡುವ ಕೆಲಸ ನಾವು ಮಾಡುತ್ತಿದ್ದೇವೆ. ಈ ಪದವಿ ಪ್ರದಾನ ಸಮಾರಂಭವು ನಮ್ಮನ್ನು ಇನ್ನಷ್ಟು ಗಟ್ಟಿಯಾಗಿ ಬೆಳೆಯಲು ದಿಕ್ಸೂಚಿಯಾಗಿದೆ ಎಂದು ಅವರು ಹೇಳಿದರು.ಕಾಲೇಜಿನ 120 ಎಂಬಿಎ ಮತ್ತು 45 ಎಂಸಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಶುಭ ಹಾರೈಸಲಾಯಿತು.
ನಿರ್ವಹಣಾ ಟ್ರಸ್ಟಿ ಬಿ.ವಿ. ಕುಮಾರ್, ಖಜಾಂಚಿ ಡಾ.ಕೆ.ಬಿ. ಧನಂಜಯ, ವ್ಯವಸ್ಥಾಪಕ ನಿರ್ದೇಶಕ ಮಂಜುರಾಮ ಪುಟ್ಟೇಗೌಡ, ಶೈಕ್ಷಣಿಕ ನಿರ್ದೇಶಕ ಪ್ರೊ.ಎನ್. ರಾಮು, ಕಾನೂನು ಕಾಲೇಜಿನ ನಿರ್ದೇಶಕ ಕೆ.ಬಿ. ವಾಸು, ಪ್ರಾಂಶುಪಾಲ ಡಾ.ಜಿ. ರಘುನಂದನ್, ಆಡಳಿತಾಧಿಕಾರಿ ಡಾ.ಎಂ.ಎಂ. ಕೃಷ್ಣ ಇದ್ದರು.