ಧಾರವಾಡ: ತಾಲೂಕಿನ ಯಾದವಾಡ ಗ್ರಾಮದ ಗ್ರಾಮದೇವಿಯರ ಜಾತ್ರಾ ಮಹೋತ್ಸವದ ಮಂಡಲ ಪೂಜಾ ಕಾರ್ಯಕ್ರಮ ಶುಕ್ರವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪನ್ನಗೊಂಡಿತು.
ಬೆಳಗಾವಿ ಜಿಲ್ಲೆ ವೀರಾಪುರದ ಚೇತನ ಸ್ವಾಮೀಜಿಗಳ ನೇತೃತ್ವದಲ್ಲಿ ಬೆಳಗ್ಗೆ ಹೋಮ, ದೇವಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆದವು. ಈ ಎಲ್ಲ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದ ರೋಣದ ಸದ್ಗುಗುರು ಶ್ರವಣಕುಮಾರ ಸ್ವಾಮೀಜಿ, ಶಿಂಗನಹಳ್ಳಿ ರಾಚೂಟೇಶ್ವರ ಮಹಾ ಸ್ವಾಮೀಜಿ ಆಶೀರ್ವಾದ ನೀಡಿದರು. ಮಂಡಲ ಪೂಜೆ ನಿಮಿತ್ತ ಅರಳಿದ ರಂಗೋಲಿ ಗಮನ ಸೆಳೆಯಿತು.
ಗ್ರಾಮದ ಮುತೈದೆಯರು ಕುಂಕುಮಾರ್ಚನೆ, ಅಭಿಷೇಕಗಳು ನಡೆದವು. ನಂತರ ಆರಂಭಗೊಂಡ ಹೋಮ ಸುಮಾರು ಮೂರು ಗಂಟೆಗಳ ಕಾಲ ನಡೆಯಿತು. ಮುನ್ನ ದಿನ ಗುರುವಾರ ರಾತ್ರಿ ಪೂರ್ತಿ ಭಜನಾ ಕಾರ್ಯಕ್ರಮಗಳು ನಡೆದವು. ಮಂಡಲ ಪೂಜೆ ಹಿನ್ನೆಲೆಯಲ್ಲಿ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು ಎಂದು ಗ್ರಾಮಸ್ಥ ಮಂಜುನಾಥ ಹಂಪನ್ನವರ ತಿಳಿಸಿದ್ದಾರೆ.