ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಭಗವಂತನ ಆರಾಧನೆ ಎಲ್ಲ ಕಡೆಗಳಲ್ಲೂ ಇದ್ದು, ಅದಕ್ಕೆ ಪ್ರಾಚೀನ, ಆಧುನಿಕ ಕಾಲವೆಂಬ ವ್ಯತ್ಯಾಸವಿಲ್ಲದೆ ನಿರಂತರವಾಗಿ ನಡೆಯುತ್ತಿದೆ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಶ್ರದ್ಧೆ, ಭಕ್ತಿ ಇದ್ದಲ್ಲಿ ಭಗವಂತನ ಅನುಗ್ರಹಕ್ಕೆ ಯಾವುದೇ ಕೊರತೆ ಇಲ್ಲ ಎಂದು ಶೃಂಗೇರಿ ಶಾರದಾ ಪೀಠದ ಶ್ರೀಮಜ್ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.ಅವರು ಮಂಗಳವಾರ ಮಿತ್ತಬಾಗಿಲು ಗ್ರಾಮದ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ (ಶ್ರೀ ದುರ್ಗಾದೇವಿ) ದೇವಸ್ಥಾನದಲ್ಲಿ ಶ್ರೀ ಚಂಡಿಕಾಹೋಮದ ಪೂರ್ಣಾಹುತಿ ನೆರವೇರಿಸಿ ಆಶೀರ್ವಚನ ನೀಡಿದರು.
ದೇವರ ಸ್ಮರಣೆಯಿಂದ ಮಾನಸಿಕವಾಗಿ ಅಲೌಕಿಕ ಬಲ ಸಿಗುತ್ತದೆ. ಇದು ಲೌಕಿಕ ಕೆಲಸಗಳನ್ನು ಸರಾಗವಾಗಿ ನೆರವೇರಿಸಲು ಸಹಕಾರಿಯಾಗುತ್ತದೆ. ಯಾವುದೇ ಕಾರ್ಯಗಳಲ್ಲಿ ಅವಸರ ಪಡದೆ ತಾಳ್ಮೆಯಿಂದ ಮುಂದುವರಿದರೆ ನಿಶ್ಚಿತ ಬಲ ದೊರಕುತ್ತದೆ. ದೇವರ ಭಕ್ತಿಯು ನಮ್ಮ ಶಕ್ತಿಯನ್ನು ಹೆಚ್ಚಿಸಿ ವಿಶೇಷ ಚೈತನ್ಯದ ಮೂಲಕ ನಮ್ಮ ಬಲವನ್ನು ಹೆಚ್ಚಿಸಿ ಜೀವನದ ಉನ್ನತಿಗೆ ಕಾರಣವಾಗುತ್ತದೆ ಎಂದರು.ಶೃಂಗೇರಿ ಶ್ರೀಗಳಿಗೆ ಸ್ವಾಗತ, ಮೆರವಣಿಗೆ ನಡೆಯಿತು. ಚಂಡಿಕಾ ಹೋಮದ ಪೂರ್ಣಾಹುತಿ, ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ಶ್ರೀ ಜಗದ್ಗುರುಗಳಿಂದ ಪ್ರಸನ್ನಪೂಜೆ, ಕ್ಷೇತ್ರದರ್ಶನ,ಧೂಳಿ ಪಾದಪೂಜೆ, ಫಲಸಮರ್ಪಣೆ, ಪಾದಪೂಜಾ-ಭಿಕ್ಷಾವಂದನೆ ಸೇವೆಗಳು, ಫಲಮಂತ್ರಾಕ್ಷತೆ ಮೊದಲಾದ ಕಾರ್ಯಕ್ರಮಗಳು ನಡೆದವು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಿ.ಕೆ.ಲೋಕೇಶ್ ರಾವ್, ಬ್ರಹ್ಮ ಕಲಶೋತ್ಸವದ ಸಮಿತಿಯ ಪ್ರಧಾನ ಕಾರ್ಯದರ್ಶಿ ದಾಸಪ್ಪಗೌಡ ಕಾಂಜಾನು, ಪ್ರಧಾನ ಸಂಘಟನಾ ಕಾರ್ಯದರ್ಶಿ ವಿನಯ ಚಂದ್ರ ಸೇನರಬೆಟ್ಟು, ಆಡಳಿತ ಅಧಿಕಾರಿ ಮೋಹನ್ ಬಂಗೇರ, ಕೋಶಾಧಿಕಾರಿ ವಾಸುದೇವ ರಾವ್ ಕಕ್ಕೆನೇಜಿ, ಜೀರ್ಣೋದ್ಧಾರ ಮಹಿಳಾ ಸಮಿತಿಯ ಅಧ್ಯಕ್ಷೆ ಜ್ಯೋತಿಲಕ್ಷ್ಮೀ, ಮಂಜುನಾಥ್ ಕಾಮತ್, ಆಲಂಬಾಡಿ ಪದ್ಮನಾಭತಂತ್ರಿ, ಶೃಂಗೇರಿಯ ಆಡಳಿತ ಅಧಿಕಾರಿ ಮುರುಳಿ, ವಾಗೀಶ್ ಶಾಸ್ತ್ರಿ, ಸತ್ಯಶಂಕರ ಹೊಳ್ಳ ಹಾಗೂ ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬಿ.ಕೆ.ಧನಂಜಯ ರಾವ್ ಸ್ವಾಗತಿಸಿದರು.