ಗೋಡ್ಸೆ ಗಾಂಧಿಯನ್ನು ಕೊಂದ್ರು, ಬಿಜೆಪಿ ಗಾಂಧಿ ವಿಚಾರಧಾರೆ ಕೊಂದಿದೆ: ಸಲೀಂ

KannadaprabhaNewsNetwork |  
Published : Feb 24, 2026, 03:15 AM IST
ಸಲೀಂ | Kannada Prabha

ಸಾರಾಂಶ

ಹಿಂದೆ ನಾಥುರಾಂ ಗೋಡ್ಸೆ ಗಾಂಧೀಜಿಯನ್ನು ಕೊಂದ್ರು. ಈಗ ಬಿಜೆಪಿಯವರು ಅವರ ವಿಚಾರಧಾರೆಯನ್ನು ಕೊಲೆ ಮಾಡಿದ್ದಾರೆ ಎಂದು ವಿಧಾನ ಪರಿಷತ್‌ನ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ:

ಹಿಂದೆ ನಾಥುರಾಂ ಗೋಡ್ಸೆ ಗಾಂಧೀಜಿಯನ್ನು ಕೊಂದ್ರು. ಈಗ ಬಿಜೆಪಿಯವರು ಅವರ ವಿಚಾರಧಾರೆಯನ್ನು ಕೊಲೆ ಮಾಡಿದ್ದಾರೆ ಎಂದು ವಿಧಾನ ಪರಿಷತ್‌ನ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಹಮ್ಮಿಕೊಂಡಿದ್ದ ‘ಮನರೇಗಾ ಉಳಿಸಿ ಸಂಗ್ರಾಮ’ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿ, ನರೇಗಾ ಯೋಜನೆಯಿಂದ ಎಲ್ಲರಿಗೂ ಉದ್ಯೋಗ ಸಿಗುವಂತಾಗಿತ್ತು. ಆದರೆ, ಬಿಜೆಪಿಯವರು ನರೇಗಾ ಯೋಜನೆಯಲ್ಲಿ ಗಾಂಧೀಜಿಯವರ ಹೆಸರು ತೆಗೆದು, ಅದರ ಸ್ವರೂಪ ಬದಲಾವಣೆ ಮಾಡಿರುವುದು ದುರಂತ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಉದ್ಯೋಗ ಸಿಗದಂತೆ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದರು.

‘ಬಿಜೆಪಿಯವರಿಗೆ ಗಾಂಧೀಜಿಯವರ ವಿಚಾರಧಾರೆಗಳ ಬಗ್ಗೆ ನಂಬಿಕೆ ಇಲ್ಲ. 20 ವರ್ಷಗಳ ಹಳೆಯ ಯೋಜನೆಯಾಗಿರುವ ಉದ್ಯೋಗ ಖಾತ್ರಿಯ ಸ್ವರೂಪವನ್ನೇ ಬದಲಿಸಿದ್ದಾರೆ. ಪ್ರಶ್ನಿಸಿದರೆ, ಅದರಲ್ಲಿರುವ ದೋಷ ಸರಿಪಡಿಸಲು ಮಾಡಿದ್ದೇವೆ ಎಂದು ಸಬೂಬು ಹೇಳುತ್ತಿದ್ದಾರೆ. ಕಳೆದ 12 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಸರ್ಕಾರಕ್ಕೆ ಈಗ ಜ್ಞಾನೋದಯವಾಗಿದೆ’ ಎಂದು ಅವರು ವ್ಯಂಗ್ಯವಾಡಿದರು.

ಮನರೇಗಾ ಯೋಜನೆಯ ಹೆಸರು ಮತ್ತು ಸ್ವರೂಪವನ್ನು ಬದಲಾವಣೆ ಮಾಡುವ ಮೂಲಕ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯ ಆತ್ಮಕ್ಕೆ ಕೊಡಲಿಯೇಟು ನೀಡಿದೆ. ಬಿಜೆಪಿಯವರಿಗೆ ನಾಚಿಕೆ, ಮಾನ–ಮರ್ಯಾದೆ ಇಲ್ಲ. ಭವಿಷ್ಯದಲ್ಲಿ ಬಿಜೆಪಿಯವರಿಗೆ ಗಾಂಧಿ ಪ್ರತಿಮೆ ಎದುರು ಕುಳಿತು ಹೋರಾಟ ಮಾಡುವ ನೈತಿಕತೆ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ಬಡಜನರ ಹೊಟ್ಟೆ ಮೇಲೆ ಹೊಡೆದಿದೆ:

ದೇಶದಲ್ಲಿ ಕೋಟ್ಯಾಂತರ ಬಡ ಜನರು ದಿನ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಆದರೀಗ ಕೇಂದ್ರದ ಎನ್‌ಡಿಎ ಸರ್ಕಾರ ಮನರೇಗಾ ಯೋಜನೆ ಕೈಬಿಟ್ಟು, ವಿಬಿ ಜಿ ರಾಮ್ ಜಿ ತಂದು ಶ್ರಮಿಕರ, ರೈತರ, ಬಡಜನರ ಹೊಟ್ಟೆ ಮೇಲೆ ಹೊಡೆದಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣ್‌ದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದರು.ಸೋಮವಾರ ನಡೆದ ಅಖಿಲ ಭಾರತ ಮಟ್ಟದ ನರೇಗಾ ಬಜಾವ್ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇದು ಕೇಂದ್ರ ಸರ್ಕಾರ ಕಾಂಗ್ರೆಸ್ ಮೇಲೆ ನಡೆಸಿದ ಹಲ್ಲೆಯಲ್ಲ. ಬದಲಾಗಿ, ಬಿಜೆಪಿ ಮತ್ತು ಜೆಡಿಎಸ್ ಸೇರಿಕೊಂಡು, ಕುತಂತ್ರ ಮಾಡಿ, ಶ್ರಮಿಕರ, ರೈತರ, ಬಡಜನರ ಹೊಟ್ಟೆ ಪಾಡಿನ ಮೇಲೆ ನಡೆಸಿದ ಹಲ್ಲೆ‌ ಎಂದರು.ದೇಶದ ಬಡ ಜನರ ಉದ್ಯೋಗಕ್ಕೆ ಸಹಾಯವಾಗಲಿ ಎಂದು ಈ ಯೋಜನೆಯನ್ನು ಮನಮೋಹನ್ ಸಿಂಗ್ ಮೂಲಕ ಸೋನಿಯಾ ಗಾಂಧಿ ಆರಂಭಿಸಿದ್ದರು. ಆದರೆ, ಈಗ ಹೊಸ ಕಾನೂನನ್ನು ಬಿಜೆಪಿ ಚಾಲ್ತಿಗೆ ತಂದಾಗ ಅವರ ಮನಸ್ಥಿತಿ ಹೇಗಿದೆ ಎಂಬುದು ಅರ್ಥ‌ ಆಯ್ತು. ಅವರಿಗೆ ಬಡವರು ಅನುಕೂಲವಾಗಿರೋದು ಇಷ್ಟ ಇಲ್ಲ. ಆದರೆ, ಕಾಂಗ್ರೆಸ್‌ನ ಮನಸ್ಥಿತಿಯೇ ಬೇರೆ. ಹಿಂದುಳಿದವರು, ಪರಿಶಿಷ್ಟರು, ಬಡವರು ಸೇರಿ ಎಲ್ಲರಿಗೂ ನ್ಯಾಯ ಕೊಡಬೇಕು ಎನ್ನೋದು ಕಾಂಗ್ರೆಸ್ ಯೋಜನೆ ಎಂದರು. ಬಿಜೆಪಿ-ಜೆಡಿಎಸ್‌ ಸೇರಿ ಗಾಂಧಿ ಅವರ ಹೆಸರನ್ನು ಯಾಕೆ ತೆಗೆದಿದ್ದಾರೆ ಎಂಬುದನ್ನು ದೇಶದ ದುಡಿಯುವ ಜನತೆ ಪ್ರಶ್ನೆ ಮಾಡಬೇಕು ಎಂದರು.11 ಕೋಟಿ ಜನ ನರೇಗಾದಡಿ ದುಡಿಯುತ್ತಿದ್ದಾರೆ. 55 ಕೋಟಿ ಜನರು ಇದರ‌ ಮೇಲೆ ಅವಲಂಬಿತರಾಗಿದ್ದಾರೆ. ಅವರ ಹೊಟ್ಟೆ ಮೇಲೆ ಯಾಕೆ ಹೊಡೆಯುತ್ತಿದ್ದಾರೆ. ಅನ್ನವನ್ನು ಯಾಕೆ ಕಿತ್ತುಕೊಳ್ತಿದ್ದಾರೆ ಅಂತ ಪ್ರಶ್ನೆ ಮಾಡಬೇಕು. ಹಿಂದುಳಿದ ವರ್ಗದವರ, ಬುಡಕಟ್ಟು ಜನರ ದುಡಿಯುವ ಹಕ್ಕನ್ನು ಯಾಕೆ‌ ಕುಸಿದುಕೊಂಡರು ಅಂತ ಪ್ರಶ್ನೆ ಮಾಡಬೇಕು. ದೇಶದ ಹಿಂದೂ, ಮುಸಲ್ಮಾನ, ಕ್ರೈಸ್ತರ ದುಡಿಯುವ ಹಕ್ಕನ್ನು ಯಾಕೆ ಕಿತ್ತುಕೊಂಡರು ಅಂತ ಪ್ರಶ್ನೆ ಮಾಡಬೇಕು. ಪ್ರತಿಯೊಬ್ಬ‌ರೂ ಬಿಜೆಪಿ-ಜೆಡಿಎಸ್ ನಾಯಕರನ್ನು ಪ್ರಶ್ನೆ ಮಾಡಬೇಕು. ಗ್ರಾಮ ಪಂಚಾಯಿತಿಯಿಂದ ಲೋಕಸಭೆಯವರೆಗಿನ ನಾಯಕರನ್ನು ಪ್ರಶ್ನೆ ಮಾಡಬೇಕು ಎಂದು ಜನರಿಗೆ ಕರೆ ನೀಡಿದರು.ಈಗ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಮತ್ತೊಂದು ಒಡಂಬಡಿಕೆ‌ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿರುವ ರೈತರು, ಬಡವರು, ಶ್ರಮಿಕರಿಗೆ ಅನ್ಯಾಯ ಮಾಡುತ್ತೆ ಈ ಒಡಂಬಡಿಕೆ. ನಮ್ಮ ದೇಶದ‌ ರೈತರು ಬೆಳೆದ ಪದಾರ್ಥಗಳ ಏನಾಗಬೇಕು ಹೇಳಿ?. ಹೊಸ ಒಡಂಬಡಿಕೆಯಿಂದ ಇದಕ್ಕೂ ಸಮಸ್ಯೆ ಇದೆ. ನಮ್ಮ ರಾಜ್ಯದ ರೈತರು ತಾವು ಬೆಳೆದ ಪದಾರ್ಥಗಳನ್ನು ಎಲ್ಲಿಗೆ ಕೊಡಬೇಕು?. ಹಣ್ಣು, ತರಕಾರಿಗಳನ್ನು ವಿವಿಧ ದೇಶಗಳಿಂದ ತರೆಸಿಕೊಂಡರೆ, ನಮ್ಮ ರೈತರು ಬೆಳೆದಿದ್ದನ್ನು ಎಲ್ಲಿಗೆ‌ ಹಾಕಬೇಕು?. ನಮ್ಮ ರೈತರು ಬದುಕೋದು ಬೇಡ್ವಾ? ಎಂದು ಪ್ರಶ್ನಿಸಿದರು,

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಸಿಗೆಯಲ್ಲಿ 90 ಹಳ್ಳಿಯಲ್ಲಿ ನೀರಿನ ಸಮಸ್ಯೆ
ಕೊಪ್ಪಳ: ಊರ ಜಾತ್ರೆ ವೇಳೆ ದಲಿತರು-ಸವರ್ಣೀಯರ ಸಂಘರ್ಷ