ಗಜೇಂದ್ರಗಡ: ಪ್ರಕೃತಿಯನ್ನು ನಾವು ಪೋಷಿಸುವ ಜತೆಗೆ ಪ್ರಕೃತಿಯ ಗುಣವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಅಂದಾಗ ಮಾತ್ರ ಸರ್ವಜನಾಂಗದ ತೋಟ ನಿರ್ಮಾಣ ಸಾಧ್ಯ ಎಂಬುದಕ್ಕೆ ಗೋಗೇರಿ ಗ್ರಾಮ ಸಾಕ್ಷಿಯಾಗಿದೆ ಎಂದು ಹಾಲಕೆರೆಯ ಅನ್ನದಾನೇಶ್ವರ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ಸಮೀಪದ ಗೋಗೇರಿ ಗ್ರಾಮದಲ್ಲಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಗಂಧ ಲೇಪನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ವಿವಿಧೆತೆಯಲ್ಲಿ ಏಕತೆಯನ್ನು ಸಾರುವ ದೇಶವಾಗಿರುವ ಭಾರತದಲ್ಲಿ ಜನಿಸಿರುವ ಪ್ರತಿಯೊಬ್ಬರೂ ಭಾಗ್ಯಶಾಲಿಗಳು. ಇಲ್ಲಿನ ಮಣ್ಣಿನ ಗುಣವು ಪ್ರತಿಯೊಬ್ಬರಲ್ಲಿ ಸಹೋದರತ್ವ, ಭ್ರಾತೃತ್ವವು ಬಾಲ್ಯದಿಂದಲೇ ಮೈಗೂಡಿಕೊಂಡಿದೆ. ಸಮಾನತೆ ಹಾಗೂ ಸಮಬಾಳು ಎಂಬ ಸಂದೇಶವು ರಾಜ್ಯದಿಂದಲೇ ವಿಶ್ವದೆಡೆಗೆ ಬೆಳಕಿನಂತೆ ಇಂದಿಗೂ ಸಾಗುತ್ತಿದೆ. ಅಂತಹ ಪುಣ್ಯ ಮತ್ತು ತಪೋಭೂಮಿ ನಮ್ಮದಾಗಿದೆ. ಹೀಗಾಗಿ ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟವು ರಾಜ್ಯವಾದರೆ, ಅದಕ್ಕೆ ಜಿಲ್ಲೆಯ ಹಾಲಕೆರೆ ಅನ್ನದಾನೇಶ್ವರ ಮಠವು ಭಾವೈಕ್ಯತೆಯ ತವರಾಗಿದೆ. ಗೋಗೇರಿ ಗ್ರಾಮವು ಭಾವೈಕ್ಯತೆಗೆ ಸಾಕ್ಷಿಯಾಗಿದೆ ಎಂದ ಅವರು, ಬಸವಾದಿ ಶರಣರು ಹಾಕಿಕೊಟ್ಟ ಪರಂಪರೆ, ಧಾರ್ಮಿಕ ಆಚರಣೆಗಳು ಇಂದಿಗೂ ನಡೆದುಕೊಂಡು ಬಂದಿವೆ. ಯುವ ಪೀಳಿಗೆಯು ಬಸವಾದಿ ಶರಣರ ತತ್ವದಾರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನೆಮ್ಮದಿಯ ಜೀವನವನ್ನು ಸಾಗಿಸಿ ಎಂದರು.
ಗಂಧ ಲೇಪನ ಕಾರ್ಯಕ್ರಮವನ್ನು ಗ್ರಾಮದ ಅಂಜುಮನ್ ಇಸ್ಲಾಂ ಕಮಿಟಿಯವರು ನಡೆಸಿಕೊಟ್ಟ ಬಳಿಕ ಶಿಕ್ಷಕ ಆರ್.ಐ. ಭಗವಾನ್ ಕುರಾನ್ ಪಠಣ ಮಾಡಿದರು.ಗೋಗೇರಿ ಸರ್ವ ಸಮಾಜದಿಂದ ಶ್ರೀಗಳನ್ನು ಸನ್ಮಾನಿಸಲಾಯಿತು. ಬಳಿಕ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಹುಸೇನಸಾಬ್ ಬಡಿಗೇರ್, ಆರ್.ಕೆ. ಬಾಗವಾನ್, ಅರ್.ಐ. ಬಾಗವಾನ್ ಹಾಗೂ ಶಾಬುದ್ದೀನ್ ನದಾಫ್, ಬಸಪ್ಪ ಗುಂಡೆ, ಶೇಖರಪ್ಪ ಎಗರಿ, ಬಸಪ್ಪ ಕೇರಿ, ಕಳಕಪ್ಪ ಮಾದರ ಸೇರಿ ಶರಣಬಸವೇಶ್ವರ ದೇವಸ್ಥಾನದಲ್ಲಿ ವಿವಿಧ ಸೇವೆಗಳನ್ನು ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.
ಶರಣಬಸವೇಶ್ವರರ ಕುರಿತು ಸಿದ್ದಯ್ಯ ಶಾಸ್ತ್ರಿ ಪುರಾಣ ಪ್ರವಚನ ನಡೆಸಿಕೊಟ್ಟರು. ವೀರಶೈವ ಸಮಾಜದ ಅಧ್ಯಕ್ಷ ಶೇಖರಪ್ಪ ಯಗರಿ, ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಮೂಲಿಮನಿ, ಗಂಗಪ್ಪ ಗುಂಡೆ, ಶಂಕ್ರಯ್ಯ ಮೇಟಿಮಠ, ಕಳಕಯ್ಯ ಹಿರೇಮಠ, ಎಂ.ಕೆ. ಗುಂಡೆ, ಶೇಖರಯ್ಯ ಹಿರೇಮಠ, ಸಂಗಪ್ಪ ಅಡವಿ, ಪರಶುರಾಮ ಚೊಪಡೆ, ಕಳಕಪ್ಪ ಮಾದರ ಸೇರಿ ಇತರರು ಇದ್ದರು.