ಗೋಕರ್ಣ: ಇಲ್ಲಿನ ಪೊಲೀಸ್ ಠಾಣೆಯ ವ್ಯಾಪ್ತಿಯ ಬ್ಯಾಂಕ್, ಫೈನಾನ್ಸ್ ಹಾಗೂ ದೇವಾಲಯದ ಪ್ರಮುಖರ ಕರೆಯಿಸಿ ಭದ್ರತೆ ಹಾಗೂ ಸುರಕ್ಷತೆಯ ಕುರಿತು ಪಿ.ಐ. ಶ್ರೀಧರ ಎಸ್.ಆರ್ ಭಾನುವಾರ ಠಾಣೆಯಲ್ಲಿ ಸಭೆ ನಡೆಸಿದರು.
ದೇವಸ್ಥಾನಗಳಲ್ಲಿ ಬೆಲೆಬಾಳುವ ಚಿನ್ನಾಭರಣವನ್ನು ರಾತ್ರಿ ದೇವರ ಮೇಲೆ ಇಟ್ಟು ಹೋಗದಂತೆ ನೋಡಿಕೊಳ್ಳುವುದು, ಉತ್ಸವ, ಜಾತ್ರೆ ಸಮಯದಲ್ಲಿ ಉತ್ಸವಮೂರ್ತಿ ಕಾಯಲು ಪ್ರತ್ಯೇಕ ಗೃಹರಕ್ಷಕ ದಳದ ಸಿಬ್ಬಂದಿ ನೇಮಿಸಿಕೊಳ್ಳುವುದು, ಬ್ಯಾಂಕ್ ಹಾಗೂ ದೇವಸ್ಥಾನದಲ್ಲಿ ಹೆಚ್ಚಿನ ಚಿನ್ನಾಭರಣವನ್ನ ಸೇಫ್ ಲಾಕರ್‌ನಲ್ಲಿ ಇಡುವುದು, ಕಡ್ಡಾಯವಾಗಿ ಅಗ್ನಿ ಶಾಮಕ ಉಪಕರಣ ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ರಾತ್ರಿ ವೇಳೆ ಭದ್ರತಾ ಸಿಬ್ಬಂದಿ ಇದ್ದರೆ ಮಾತ್ರ ತೆರೆಯಲು ಸೂಚಿಸಿ ಇಲ್ಲವಾದಲ್ಲಿ ಬಂದ್ ಮಾಡುವಂತೆ ತಿಳಿಸಿದರು.ದೇವಾಲಯದ ಸುತ್ತಮುತ್ತ ಇರುವ ಬಿಡಾಡಿ ದನಗಳಿಗೆ ರಿಪ್ಲೆಕ್ಟರ್ ಜಾಕೆಟ್ ಅಳವಡಿಕೆ ಮತ್ತು ದನಗಳನ್ನು ಸ್ಥಳೀಯ ಗೋಶಾಲೆಗೆ ಸೇರಿಸಲು ಕ್ರಮ ಕೈಗೊಳ್ಳುವುದರ ಬಗ್ಗೆ ಸಹಕರಿಸುವಂತೆ ತಿಳಿಸಲಾಯಿತು.
ಈ ವೇಳೆ ಪಿ.ಎಸ್.ಐ. ಖಾದರ ಬಾಷಾ, ಶಶಿಧರ, ಸಿಬ್ಬಂದಿ, ಈ ಭಾಗದ ಪ್ರಮುಖ ದೇವಾಲಯಗಳ ಪ್ರಮುಖರು, ಅರ್ಚಕರು, ಬ್ಯಾಂಕ್, ಫೈನಾನ್ಸ್ ಮುಖ್ಯಸ್ಥರು ಪಾಲ್ಗೊಂಡಿದ್ದರು.