₹3 ಕೋಟಿ ವೆಚ್ಚದಲ್ಲಿ ಗೋಕರ್ಣ ಅಭಿವೃದ್ಧಿ: ಪ್ರಸ್ತಾವನೆ ಸಲ್ಲಿಸಲು ಸೂಚನೆ

KannadaprabhaNewsNetwork |  
Published : Dec 05, 2025, 01:15 AM IST
ಸಭೆ ನಡೆಯುತ್ತಿರುವುದು | Kannada Prabha

ಸಾರಾಂಶ

ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ತಾಣಕ್ಕೆ ಒದಗಿಸಬಹುದಾದ ಅಗತ್ಯ ಕೆಲಸ ಹಾಗೂ ಅಭಿವೃದ್ದಿ ಕುರಿತು ಶಾಸಕ ದಿನಕರ ಶೆಟ್ಟಿ ಪ್ರವಾಸೋದ್ಯಮ ಇಲಾಖೆ ಜಿಲ್ಲಾ ನಿರ್ದೇಶಕರೊಂದಿಗೆ ಸಭೆ ನಡೆಸಿ ನಂತರ ವಿವಿಧ ಸ್ಥಳಗಳ ಪರಿಶೀಲನೆ ನಡೆಸಿದ್ದಾರೆ.

ಪ್ರವಾಸೋದ್ಯಮ ಇಲಾಖೆ ಅಧಿಕಾರಿ, ಗ್ರಾಪಂ ಅಧ್ಯಕ್ಷರೊಂದಿಗೆ ಶಾಸಕರ ಸಭೆ

ಅವ್ಯವಸ್ಥೆ ಸರಿಪಡಿಸಲು ಸೂಚನೆ

ಕನ್ನಡಪ್ರಭ ವಾರ್ತೆ ಗೋಕರ್ಣ

ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ತಾಣಕ್ಕೆ ಒದಗಿಸಬಹುದಾದ ಅಗತ್ಯ ಕೆಲಸ ಹಾಗೂ ಅಭಿವೃದ್ದಿ ಕುರಿತು ಶಾಸಕ ದಿನಕರ ಶೆಟ್ಟಿ ಪ್ರವಾಸೋದ್ಯಮ ಇಲಾಖೆ ಜಿಲ್ಲಾ ನಿರ್ದೇಶಕರೊಂದಿಗೆ ಸಭೆ ನಡೆಸಿ ನಂತರ ವಿವಿಧ ಸ್ಥಳಗಳ ಪರಿಶೀಲನೆ ನಡೆಸಿದ್ದಾರೆ.

ಹಲವು ಜ್ವಲಂತ ಸಮಸ್ಯೆಯಿಂದ ಬಳಲುತ್ತಿರುವ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಪಣ ತೊಟ್ಟಿರುವ ಶಾಸಕರು ಪ್ರವಾಸೋದ್ಯಮ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದ್ದರು. ಅದರಂತೆ ₹ 3 ಕೋಟಿ ವೆಚ್ಚದಲ್ಲಿ ಕಾರ್ಯಯೋಜನೆಗೆ ಸರ್ಕಾರ ಮುಂದಾಗಿದ್ದು, ಪ್ರಸ್ತಾವನೆ ಸಲ್ಲಿಸಲು ಸೂಚಿಸಿದೆ.

ಈ ಹಿನ್ನೆಲೆ ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಹಾಗೂ ಗ್ರಾಪಂ ಅಧ್ಯಕ್ಷರೊಂದಿಗೆ ಶಾಸಕರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದರು.

ಮೇಲಿನಕೇರಿಯಲ್ಲಿರುವ ಬಸ್ ತಂಗುದಾಣ ಸರಿಪಡಿಸುವುದು, ಖಾಸಗಿ ಬಸ್ ನಿಲುಗಡೆಗೊಳಿಸುವಲ್ಲಿ ಪ್ರತ್ಯೇಕ ಬಸ್ ತಂಗುದಾಣ ನಿರ್ಮಿಸುವುದು ಹಾಗೂ ಬಹುಮುಖ್ಯವಾಗಿ ವಾಹನ ನಿಲುಗಡೆ ಸಮಸ್ಯೆ ತಪ್ಪಿಸಲು ಸೂಕ್ತ ಸ್ಥಳ ಗುರುತಿಸಿ, ಪ್ರವಾಸಿ ವಾಹನ ನಿಲುಗಡೆ ಸ್ಥಳದಿಂದ ಜನರನ್ನ ಕರೆದುಕೊಂಡು ಹೋಗಲು ಬ್ಯಾಟರಿ ವಾಹನಗಳ ವ್ಯವಸ್ಥೆ ಕಲ್ಪಿಸುವ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಯಿತು.

ಸಾಮಾನ್ಯ ಯಾತ್ರಿಕರಿಗೆ ಯಾತ್ರಿ ನಿವಾಸ ನಿರ್ಮಾಣ, ಮುಖ್ಯಕಡಲತೀರದಲ್ಲಿ ಉದ್ಯಾನವನವನ್ನ ಗ್ರಾಪಂಯಿಂದ ಪ್ರವಾಸೋದ್ಯಮ ಇಲಾಖೆ ಪಡೆದುಕೊಂಡು ನಿರ್ವಹಣೆ ಮಾಡುವುದು ಹಾಗೂ ಜನರಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಕಲ್ಪಿಸುವ ಯೋಜನೆ, ರಾಮತೀರ್ಥಕ್ಕೆ (ರಾಮಮಂದಿರ) ತೆರಳುವ ಮಾರ್ಗದ ಪಕ್ಕದಲ್ಲಿರುವ ಇಲಾಖೆ ಜಾಗದಲ್ಲಿ ಉದ್ಯಾನವನ ನಿರ್ಮಾಣ, ಸೆರ್ವೆ ನಂ. ೧೯ರ ಜಾಗದಲ್ಲಿ ಕಡಲತೀರದಲ್ಲಿ ನಿಲುಗಡೆಗೊಂಡ ವಾಹನ ಹೊರಹೋಗಲು ರಸ್ತೆ ನಿರ್ಮಾಣ ಹಾಗೂ ಅಧಿಕ ವಾಹನ ನಿಲುಗಡೆಗೆ ಸುಸಜ್ಜಿತ ವ್ಯವಸ್ಥೆ ಕಲ್ಪಿಸುವುದು, ಮುಖ್ಯಕಡಲತೀರದಲ್ಲಿರುವ ಪ್ಯಾರಾಗೋಲ್ ರಿಪೇರಿ, ಹೆಚ್ಚಿನ ಶೌಚ ಮತ್ತು ಸ್ನಾನ ಗೃಹ ನಿರ್ಮಿಸುವುದು ಹಾಗೂ ಮತ್ತಿತರ ಅಗತ್ಯ ಸೌಲಭ್ಯಗಳ ಬಗ್ಗೆ ಚರ್ಚಿಸಲಾಯಿತು.

ಸ್ಥಳಕ್ಕೆ ಭೇಟಿ ಹಲವು ಕ್ರಮಕ್ಕೆ ಖಡಕ್ ಸೂಚನೆ:

ಅಗತ್ಯ ಸೌಲಭ್ಯ ಒದಗಿಸುವ ಸ್ಥಳದ ಪ್ರಸ್ತುತ ಸ್ಥಿತಿಗತಿಯನ್ನ ಖುದ್ದು ಶಾಸಕರು ವೀಕ್ಷಿಸಿದರು. ಮೇಲಿನ ಕೇರಿ ಎ.ಪಿ.ಎಂ.ಸಿ. ಪ್ರಾಂಗಣ ಜಾಗದಲ್ಲಿ ವಾಹನ ನಿಲುಗಡೆ ಹಾಗೂ ಸ್ವಚ್ಛತೆಯ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳಲು ಸೂಚಿಸಿ, ಬಸ್ ತಂಗುದಾಣ ನಿರ್ಮಿಸುವ ಬಗ್ಗೆ ಚರ್ಚಿಸಿದರು. ಇದರಂತೆ ಮಾರುತಿ ಕಟ್ಟೆ ಬಳಿಯಿರುವ ತುಕ್ಕು ಹಿಡಿದ ಬಸ್ ತಂಗುದಾಣವನ್ನ ವೀಕ್ಷಿಸಿದರು.

ಮುಖ್ಯ ಕಡಲತೀರದಲ್ಲಿ ಭೇಟಿ ನೀಡಿದ ವೇಳೆ ಅಂಗಡಿಮುಂಗಟ್ಟು ರಸ್ತೆ ಅತಿಕ್ರಮಿಸಿರುವುದನ್ನ ಗಮನಿಸಿದ ಶಾಸಕರು ಕೊಡಲೇ ತೆರವುಗೊಳಿಸುವಂತೆ ಅಂಗಡಿಕಾರಿಗೆ ಸೂಚಿಸಿ, ಈ ರೀತಿ ರಸ್ತೆಯನ್ನ ಆಕ್ರಮಿಸಿರುವವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿದರು

ಈ ವೇಳೆ ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ, ಸದಸ್ಯರಾದ ಗಣಪತಿ ನಾಯ್ಕ, ಸತೀಶ ದೇಶಭಂಡಾರಿ, ಲಕ್ಷ್ಮೀಶ ಗೌಡ, ಪ್ರಭಾಕರ ಪ್ರಸಾದ, ಗ್ರಾಪಂ ಅಭಿವೃದ್ದಿ ಅಧಿಕಾರಿ ವಿ.ಎ. ಪಟಗಾರ, ತಾಪಂ ಮಾಜಿ ಸದಸ್ಯ ಮಹೇಶ ಶೆಟ್ಟಿ, ಕುಮಾರ ಮಾರ್ಕಾಂಡೆ, ಜಗದೀಶ ಅಂಬಿಗ, ಜಯರಾಮ ಹೆಗಡೆ ಮತ್ತಿತರರಿದ್ದರು.

ನಿರ್ವಹಣೆ ನಮಗೆ ಕೊಡಿ

ಪ್ರವಾಸೋದ್ಯಮ ಇಲಾಖೆಯಿಂದ ಈ ಹಿಂದೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ವಿವಿಧ ಕಡಲತೀರದ ಅಭಿವೃದ್ಧಿ ಕಾರ್ಯಗಳನ್ನ ಮಾಡಿದ್ದು, ನಂತರ ಗ್ರಾಪಂಗೆ ನೀಡಲಾಗಿತ್ತು . ಆದರೆ ಸರಿಯಾದ ನಿರ್ವಹಣೆಯಿಲ್ಲದೆ ಹಾಳಾಗಿದೆ. ಆದ್ದರಿಂದ ಇನ್ನುಮುಂದೆ ನಮ್ಮ ಇಲಾಖೆಯಿಂದ ಅನುಷ್ಠಾನಗೊಂಡ ಅಭಿವೃದ್ಧಿ ಯೋಜನೆಗಳು ಪೂರ್ಣಗೊಂಡ ನಂತರ ನಿರ್ವಹಣೆಯನ್ನ ಇಲಾಖೆಗೆ ನೀಡಿ ಸರಿಯಾಗಿ ನೋಡಿಕೊಳ್ಳುತ್ತೇವೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಶಾಸಕರ ಬಳಿ ವಿನಂತಿಸಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ಕುರ್ಚಿಗೆ ಪೈಪೋಟಿ, ರೈತರ ಸಮಸ್ಯೆ ಗೌಣ: ವಿಜಯೇಂದ್ರ
ಜನ್ಮ ಸಾರ್ಥಕತೆಗೆ ಗುರುವಿನ ಅನುಗ್ರಹ ಅವಶ್ಯ