ಕನ್ನಡಪ್ರಭ ವಾರ್ತೆ ಉಳ್ಳಾಲ
ಹಾಡಹಗಲೇ ಸೇವಾ ಸಹಕಾರಿ ಸಂಘದ ಬ್ಯಾಂಕ್ ಒಳಗೆ ನುಗ್ಗಿರುವ ಐದು ಮಂದಿ ದರೋಡೆಕೋರರ ತಂಡ ಬಂದೂಕು ಮತ್ತು ತಲವಾರು ತೋರಿಸಿ ಅಂದಾಜು 10-12 ಕೋಟಿ ರು. ಮೌಲ್ಯದ ಚಿನ್ನಾಭರಣ ಹಾಗೂ 5 ಲಕ್ಷ ರು. ಮೊತ್ತದ ನಗದು ದರೋಡೆ ನಡೆಸಿರುವ ಘಟನೆ ಕರ್ನಾಟಕ- ಕೇರಳ ಗಡಿ ಸಮೀಪದ ಕೆ.ಸಿ.ರೋಡ್ ಜಂಕ್ಷನ್ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ 1.15 ರ ವೇಳೆಗೆ ಸಂಭವಿಸಿದೆ.ಕೃತ್ಯ ನಡೆದದ್ದು ಹೀಗೆ...:ಅಪರಾಹ್ನ ಮೂವರು ಮಹಿಳಾ ಸಿಬ್ಬಂದಿ ಹಾಗೂ ಚಿನ್ನ ಪರಿಶೀಲನೆಗಾರ ರಾಮಚಂದ್ರ ಆಚಾರ್ಯ ಮತ್ತು ಸಿಸಿಟಿವಿ ರಿಪೇರಿಗೆಂದು ಬಂದ ಸಂದೀಪ್ ಎಂಬವರು ಬ್ಯಾಂಕ್ ಒಳಗೆ ಇದ್ದಂತಹ ವೇಳೆಯೇ ಆಗಂತುಕ ಐದು ಮಂದಿಯ ತಂಡ ಒಳನುಗ್ಗಿದೆ. ಐದು ಮಂದಿಯೂ ತಲವಾರು ಮತ್ತು ಪಿಸ್ತೂಲು ಹಿಡಿದು ಸಿಬ್ಬಂದಿಯನ್ನು ಬೆದರಿಸಿ, ಈ ಪೈಕಿ ಇಬ್ಬರು ಕೌಂಟರಿನೊಳಗೆ ನುಗ್ಗಿದ್ದಾರೆ. ಓರ್ವ ಸೀದಾ ಲಾಕರ್‌ನತ್ತ ತೆರಳಿ ಚಿನ್ನವನ್ನು ಮೂರು ಗೋಣಿಗಳಲ್ಲಿ ತುಂಬಿಸಿ ಬಳಿಕ ನಗದು ದೋಚಿದ್ದಾರೆ.
ಈ ಸಂದರ್ಭ ಸಿಸಿಟಿವಿ ಸಿಬ್ಬಂದಿ ಸಂದೀಪ್ ರಕ್ಷಣೆಗಾಗಿ ಕೈಮುಗಿದಿದ್ದು, ಈ ವೇಳೆ ಅವರ ಕೈಯಲ್ಲಿದ್ದ ಉಂಗುರವನ್ನು ಕಂಡು ಅದನ್ನೂ ಎಳೆದು ದೋಚಿದ್ದಾರೆ. ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ತಂಡ, ಅಡ್ಡಿಪಡಿಸಿದಲ್ಲಿ ಶೂಟ್ ಮಾಡಿ ಕೊಲ್ಲುವ ಬೆದರಿ ಒಡ್ಡುತ್ತಲೇ ಕೃತ್ಯ ಎಸಗಿದೆ.ರಕ್ಷಣೆಗೆ ಧಾವಿಸಿದ ವಿದ್ಯಾರ್ಥಿಗಳು: ಮುಸ್ಲಿಂ ವ್ಯಾಪಾರಸ್ಥರೇ ಹೆಚ್ಚಾಗಿರುವ ಜಂಕ್ಷನ್‌ನಲ್ಲಿ ಶುಕ್ರವಾರ ಸಮಯವಾಗಿದ್ದರಿಂದಾಗಿ ಜುಮಾ ನಮಾಝ್ ಹಿನ್ನೆಲೆಯಲ್ಲಿ ಎಲ್ಲರೂ ಮಸೀದಿಗೆ ತೆರಳಿದ್ದರು. ಇದರಿಂದಾಗಿ ಅಂಗಡಿಗಳು ಎಲ್ಲವೂ ಬಂದ್ ಆಗಿದ್ದು, ಪ್ರದೇಶವೂ ನಿರ್ಜನವಾಗಿತ್ತು. ಅದೇ ಸಂದರ್ಭ ಉಪಯೋಗಿಸಿಕೊಂಡು ಬ್ಯಾಂಕ್ ಇರುವ ಮೊದಲ ಮಹಡಿಗೆ ತೆರಳಿ ತಂಡ ಕೃತ್ಯವೆಸಗಿದೆ.
ಈ ವೇಳೆ ಸಿಬ್ಬಂದಿ ಆಗಂತುಕರನ್ನು ಗಮನಿಸಿ ಬೊಬ್ಬೆ ಹಾಕುವುದನ್ನು ಕೇಳಿದ ಅಲ್ಲೇ ಕೆಳಗೆ ಬೇಕರಿ ಅಂಗಡಿಗೆ ಬಂದಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಇಬ್ಬರು ಮೇಲೆ ಓಡಿ ಬಂದಿದ್ದಾರೆ. ವಿದ್ಯಾರ್ಥಿಗಳಿಗೂ ಬೆದರಿಸಿದ ತಂಡ ಅವರಿಗೆ ವಾಪಸ್ ಹೋಗುವಂತೆ ಕನ್ನಡ ಭಾಷೆಯಲ್ಲಿ ಬೈಯ್ದಿದ್ದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.ಸಿಸಿಟಿವಿ ದುರಸ್ತಿ ವೇಳೆಯೇ ಕೃತ್ಯ: ಬೀದರ್ ನಲ್ಲಿ ಬ್ಯಾಂಕ್ ದರೋಡೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕೆ.ಸಿ.ರೋಡ್ ಕೋಟೆಕಾರು ಬ್ಯಾಂಕ್ ಸಿಬ್ಬಂದಿಯೂ ಸಿಸಿಟಿವಿಯಲ್ಲಿ ದೃಶ್ಯಗಳು ಸರಿಯಾಗಿ ಕಾಣುತ್ತಿಲ್ಲ ಎಂದು ದುರಸ್ತಿಗೆ ಸಂದೀಪ್ ಅವರಿಗೆ ತಿಳಿಸಿದ್ದರು. ಅದರಂತೆ ಸಂದೀಪ್ ಅಪರಾಹ್ನ12.30 ಸುಮಾರಿಗೆ ಬ್ಯಾಂಕಿಗೆ ಬಂದಿದ್ದಾರೆ. ಲಾಕರ್ ಭಾಗದಲ್ಲಿರುವ ಸಿಸಿಟಿವಿಯ ವೈರ್‌ಗಳನ್ನು ಇಲಿಗಳು ತಿಂದಿರುವುದರಿಂದ ವೈರ್ ಸಂಪೂರ್ಣ ಬದಲಾಯಿಸುವ ಸಲುವಾಗಿ ಡಿವಿಆರ್ ನಿಂದ ಪ್ರತ್ಯೇಕಿಸಿದ್ದರು. ಆದರೆ ದುರಸ್ತಿಗೆ ಇಳಿದ ಕೆಲವೇ ನಿಮಿಷಗಳಲ್ಲಿ ಆಗಂತುಕರು ಬ್ಯಾಂಕಿನೊಳಕ್ಕೆ ನುಗ್ಗಿದ್ದಾರೆ ಎಂದು ಸಿಸಿಟಿವಿ ತಂತ್ರಜ್ಞ ಸಂದೀಪ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇಲ್ಲಿ ಇದು ಮೂರನೇ ದುರಂತ:2017 ರ ಜು.22 ರಂದು ಕೆ.ಸಿರೋಡ್ ಜಂಕ್ಷನ್‌ನಲ್ಲೇ ಬೇರೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಇದೇ ಬ್ಯಾಂಕ್ ಶಾಖೆಗೆ ಶುಕ್ರವಾರದ ಸಮಯದಲ್ಲೇ ಇಬ್ಬರು ದರೋಡೆಕೋರರು ನುಗ್ಗಿ ಚೂರಿ ತೋರಿಸಿ ಚಿನ್ನ ದೋಚಿ ಪರಾರಿಯಾಗಿದ್ದರು. ಈ ವೇಳೆ ಚಿನ್ನ ಪರಿಶೀಲಿಸುವ ರಾಮಚಂದ್ರ ಆಚಾರ್ಯರೇ ದರೋಡೆಕೋರನೊಬ್ಬನ ಮೇಲೆ ಕಲ್ಲನ್ನೆಸೆದು ಕಳವು ನಡೆಸುತ್ತಿದ್ದ ಚಿನ್ನವನ್ನು ರಕ್ಷಿಸಿದ್ದರು.
ಪ್ರಕರಣ ಸಂಬಂಧ ಪಿಲಾರು ಕುರ್ಚಿಗುಡ್ಡೆ ನಿವಾಸಿ ರಾಮಚಂದ್ರ ಮತ್ತು ಪಂಡಿತ್ ಹೌಸ್ ನ ಮೋಹನ್ ಕುಮಾರ್ ಎಂಬವರನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಅಂದು ನಿರ್ದೇಶಕರಾಗಿದ್ದ ಮಹಿಳೆಯ ಪತಿ ಕೃತ್ಯದಲ್ಲಿ ಭಾಗಿಯಾಗಿದ್ದರು. ಘಟನೆ ಬೆನ್ನಲ್ಲೇ ಬ್ಯಾಂಕ್ ಆಡಳಿತ ಸೆಕ್ಯುರಿಟಿ ಸಿಬ್ಬಂದಿಯನ್ನು ನೇಮಿಸಿತ್ತು.2017ರ ನ.8 ರಂದು ಬ್ಯಾಂಕ್ ಸೆಕ್ಯುರಿಟಿ ಕೋಣೆಯಲ್ಲಿ ಮಲಗಿದ್ದ ಮೂವರು ಸಿಬ್ಬಂದಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು. ಮೃತಪಟ್ಟ ಉಮೇಶ್, ಸಂತೋಷ್ , ಸೋಮನಾಥ್ ಅವರ ಸಾವಿಗೆ ಮಲಗಿದ್ದ ಕೋಣೆಯಲ್ಲಿ ಜನರೇಟರಿನಿಂದ ಹೊರಸೂಸಿದ ಕಾರ್ಬನ್ ಮೊನೊಕ್ಸೈಡ್ ಅನಿಲ ಕಾರಣವಾಗಿತ್ತು ಎಂಬುದು ತನಿಖೆ ವೇಳೆ ತಿಳಿದುಬಂದಿತ್ತು.
ಘಟನೆ ನಂತರ ಇಡೀ ಶಾಖಾ ಕಚೇರಿಯನ್ನು ಅಲ್ಲಿಂದ ಕೆಲ ಮೀಟರ್ ಅಂತರದಲ್ಲಿರುವ ಇನ್ನೊಂದು ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಇದೀಗ 8 ವರ್ಷಗಳ ಬಳಿಕ ಮತ್ತೊಂದು ದುರಂತ ಘಟಿಸಿದೆ.ಘಟನಾ ಸ್ಥಳಕ್ಕೆ ಡಿಸಿಪಿ ಕೆ.ರವಿಶಂಕರ್, ಸಿಸಿಬಿ ಇನ್ಸ್ ಪೆಕ್ಟರ್ ರಫೀಕ್, ಎಸಿಪಿ ಧನ್ಯಾ ನಾಯಕ್, ಉಳ್ಳಾಲ ಠಾಣಾಧಿಕಾರಿ ಬಾಲಕೃಷ್ಣ ಹೆಚ್.ಎನ್ , ಶ್ವಾನದಳ , ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
............................ಹಿಂದಿ ಮಾತನಾಡುತ್ತಿದ್ದರು....
ಘಟನೆ ವೇಳೆ ಐದು ಮಂದಿ ಬ್ಯಾಂಕಿನಲ್ಲಿದ್ದೆವು. ದರೋಡೆಕೋರರು ಒಳಗೆ ನುಗ್ಗುತ್ತಿದ್ದಂತೆ ಓರ್ವ ಒಂದು ಕೈಯಲ್ಲಿ ತಲವಾರು, ಇನ್ನೊಂದು ಕೈಯಲ್ಲಿ ಪಿಸ್ತೂಲು ತೋರಿಸುತ್ತಾ ಒಳಹೊಕ್ಕಿದ್ದಾನೆ. ತಲವಾರು ಹೊಸತಾಗಿ ಉಪಯೋಗಿಸದ ರೀತಿಯಲ್ಲಿತ್ತು. ತಲವಾರನ್ನು ನೆಲಕ್ಕೆ ಬಡಿದು ಎಲ್ಲರನ್ನು ಕುಳಿತುಕೊಳ್ಳುವಂತೆ ಸೂಚಿಸಲಾಯಿತು.ಹೊಡೆಯುವ ಭೀತಿಯಿಂದ ಎಲ್ಲರೂ ಮೂಲೆಗಳಲ್ಲಿ ಕುಳಿತುಬಿಟ್ಟೆವು. ಅದರಲ್ಲಿ ಒಬ್ಬ ನೇರ ಸ್ಟ್ರಾಂಗ್ ರೂಮಿಗೆ ತೆರಳಿದ್ದಾನೆ. ಮುಖಕ್ಕೆ ಎಲ್ಲರೂ ಮಾಸ್ಕ್ ಧರಿಸಿದ್ದು, ಈಗಿನ ಶೈಲಿಯ ತೂತುಗಳುಳ್ಳ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಹಿಂದಿ ಭಾಷೆಯಲ್ಲೇ ಸಂಭಾಷಣೆ ನಡೆಸುತ್ತಿದ್ದರು.
-ರಾಮಚಂದ್ರ ಆಚಾರ್ಯ, ಬ್ಯಾಂಕಿನ ಚಿನ್ನ ಪರಿಶೀಲಿಸುವವರು...................................ಬಾಗಿಲು ಮುಚ್ಚುತ್ತಿದ್ದೆವು.............ಸಿಸಿಟಿವಿ ದುರಸ್ತಿ ಕೆಲಸ ಆಗುತ್ತಿದ್ದುದರಿಂದ ಸ್ಟ್ರಾಂಗ್ ರೂಮಿನ ಬಾಗಿಲು ತೆರೆದಿತ್ತು. ಶುಕ್ರವಾರ ಪ್ರತಿಬಾರಿಯೂ ಗ್ರಾಹಕರಿಲ್ಲದಿರುವುದನ್ನು ಗಮನಿಸಿ ಬಾಗಿಲು ಮುಚ್ಚುತ್ತಿದ್ದೆವು. ಇಂದು ಮಾಡಿರಲಿಲ್ಲ. ಅದನ್ನೇ ದುರ್ಬಳಕೆ ಮಾಡಿಕೊಂಡಿದ್ದಾರೆ.
-ವಾಣಿ ಲೋಕಯ್ಯ, ಶಾಖಾ ವ್ಯವಸ್ಥಾಪಕಿ..........................ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಭೇಟಿಮಂಗಳೂರಿನಲ್ಲಿ ನಡೆಯುತ್ತಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾರ್ಯಕ್ರಮದಿಂದಲೇ ನೇರವಾಗಿ ಘಟನಾ ಸ್ಥಳಕ್ಕೆ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಭೇಟಿ ನೀಡಿದರು. ಸಿಬ್ಬಂದಿ ಜೊತೆಗೆ ಮಾಹಿತಿ ಪಡೆದುಕೊಂಡು ಧೈರ್ಯ ತುಂಬಿದರು. ಬಳಿಕ ಮಾಧ್ಯಮದ ಜತೆಗೆ ಮಾತನಾಡಿ ` ಜನರು ಕಡಿಮೆಯಿದ್ದ ಸಂದರ್ಭ ತಲವಾರು ಪಿಸ್ತೂಲು ತೋರಿಸಿ ಹೆದರಿಸಿ ಹಣ ಚಿನ್ನ ದೋಚಿದ್ದಾರೆ. ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರವನ್ನು ಬ್ಯಾಂಕಿನವರು ನೀಡುತ್ತಾರೆ. ಭ್ರಷ್ಟರಹಿತ ಪೊಲೀಸರು ತನಿಖೆಯನ್ನು ಪಾರದರ್ಶಕವಾಗಿ ನಡೆಸಬೇಕು. ಆರೋಪಿಗಳನ್ನು ಬಂಧಿಸಿ ಮುಂದೆಂದೂ ಇಂತಹ ಪ್ರಕರಣವನ್ನು ನಡೆಸದಂತೆ ನೋಡಿಕೊಳ್ಳಬೇಕು. ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿಯೂ ಸೂಚನೆ ನೀಡಲಾಗಿದೆ. ಗಡಿಭಾಗದ ಪೊಲೀಸರಿಗೂ ಮಾಹಿತಿಗಳನ್ನು ನೀಡಲಾಗಿದೆ. ತನಿಖೆಗೆ ಎಲ್ಲರೂ ಸಹಕಾರವನ್ನು ನೀಡಬೇಕು. ಪೊಲೀಸರು ಪ್ರಕರಣವನ್ನು ಬೇಧಿಸುತ್ತಾರೆ. ಗಾಬರಿಪಡಬೇಕಾದ ಅವಶ್ಯಕತೆಯಿಲ್ಲ ಎಂದರು.
..............................ಕಾರಿಗೆ ನಕಲಿ ನಂಬರ್ ಪ್ಲೇಟ್ಫಿಯೇಟ್ ಲಿನಿಯಾ ಕಾರಿನಲ್ಲಿ ಬಂದಿದ್ದ ಆರು ಮಂದಿ ಕಿನ್ಯಾ ರಸ್ತೆಯಾಗಿ ಬ್ಯಾಂಕಿನ ಮುಂದಕ್ಕೆ ಬಂದಿದ್ದರು. ಐವರು ಬ್ಯಾಂಕಿನ ಮೇಲೆ ಗೋಣಿಚೀಲದ ಜೊತೆಗೆ ತೆರಳಿದ್ದರು. ಒಬ್ಬ ಮಾತ್ರ ಕಾರೊಳಕ್ಕೆ ಇದ್ದು, ಕೃತ್ಯ ನಡೆಸುತ್ತಿದ್ದಂತೆ ಎಲ್ಲರೂ ಗೋಣಿಚೀಲದ ಜೊತೆಗೆ ಬಂದು ಕಾರೊಳಕ್ಕೆ ತುಂಬಿಸಿ ಪರಾರಿಯಾಗಿದ್ದಾರೆ. ಈ ಕುರಿತ ಸಮೀಪದ ಅಂಗಡಿಗಳ ಸಿಸಿಟಿವಿ ದೃಶ್ಯಗಳು ಸೆರೆಯಾಗಿದೆ. ಅಲ್ಲದೆ ಕಾರಿನ ನೋಂದಣಿ ಸಂಖ್ಯೆಯನ್ನು ಪೊಲೀಸರು ಪತ್ತೆ ಹಚ್ಚಿ, ಮಾಲೀಕನಿಗೆ ಕರೆ ಮಾಡಿದಾಗ ಅದೂ ನಕಲಿಯಾಗಿತ್ತು. ಪೊಲೀಸರ ಕರೆಯಿಂದಾಗಿ ಅಸಲಿ ನಂಬರ್ ಪ್ಲೇಟ್ ಮಾಲೀಕನಿಗೆ ಶಾಕ್ ಆಗಿತ್ತು...............................ತಲಪಾಡಿ ಟೋಲ್‌ನಲ್ಲಿ ರು. 150 ಪಾವತಿಕೃತ್ಯ ನಂತರ ಆರೋಪಿಗಳು ಕೇರಳದತ್ತ ತೆರಳಿದ್ದು, ಇದಕ್ಕೆ ಸಾಕ್ಷಿಯಾಗಿ ತಲಪಾಡಿ ಟೋಲ್ ಗೇಟ್ ನಲ್ಲಿ ರು.150 ಹಣ ಕೊಟ್ಟು ರಶೀದಿ ಪಡೆದು ದರೋಡೆಕೋರರು ಪರಾರಿಯಾಗಿದ್ದಾರೆ. ನಂಬರ್ ಪ್ಲೇಟ್ ನಕಲಿಯಾಗಿದ್ದುದರಿಂದಾಗಿ ಕಾರಿನಲ್ಲಿ ಫಾಸ್‌ಟ್ಯಾಗ್ ಕೂಡ ಇರಲಿಲ್ಲ.
....................ಗ್ರಾಹಕರು ಗಾಬರಿ ಆಗಬೇಕಿಲ್ಲ. 19 ಕೋಟಿ ರು.ನಷ್ಟು ಇನ್ಶುರೆನ್ಸ್ ಇದೆ. ಗ್ರಾಹಕರಿಗೆ ಅವರ ಮೊತ್ತ ಸಿಗಲಿದೆ.-ಕೃಷ್ಣ ಶೆಟ್ಟಿ, ಕೆಳಗಿನ ಕೋಟೆಕಾರು ಗುತ್ತು, ಬ್ಯಾಂಕ್ ಅಧ್ಯಕ್ಷ.
.................................ಆತುರದಲ್ಲಿ 6 ಕೋಟಿ ಚಿನ್ನ ಬಿಟ್ಟ ದರೋಡೆಕೋರರು!ಆತುರದಲ್ಲಿ ಇನ್ನು 6 ಕೋಟಿ ರು.ಮೌಲ್ಯದ ಚಿನ್ನವನ್ನು ದರೋಡೆಕೋರರು ಬಿಟ್ಟು ಹೋಗಿದ್ದಾರೆ. ಸುಮಾರು 12 ಕೇಜಿಯಷ್ಟು ಚಿನ್ನ ಬ್ಯಾಂಕ್ ನಲ್ಲೇ ಉಳಿಸಿರುವ ಮಾಹಿತಿ ಬೆಳಕಿಗೆ ಬಂದಿದೆ. ಭಾರ ಆಗುತ್ತೆ ಅಥವಾ ಸಮಯಾವಕಾಶ ಸಾಲದೆ ಬಿಟ್ಟು ಹೋಗಿರುವ ಶಂಕೆಯನ್ನು ಬ್ಯಾಂಕ್ ಅಧಿಕೃತರು ತಿಳಿಸಿದ್ದಾರೆ......................................
ಮಹಿಳೆಯಿಂದ ಪೊಲೀಸರಿಗೆ ಮಾಹಿತಿ !ಸೊಸೆ ಮನೆಯ ಎದುರಿನ ಬ್ಯಾಂಕ್ ನಲ್ಲೇ ಕೆಲಸ ಮಾಡುತ್ತಿದ್ದಾಳೆ. ಮಧ್ಯಾಹ್ನ ಆದರೂ ಯಾಕೆ ಮನೆಗೆ ಬಂದಿಲ್ಲ ಅಂತಾ ಬ್ಯಾಂಕ್ ನತ್ತ ನೋಡಿದೆ. ಆಗ ಹಣದ ಮೂಟೆ ಹಿಡ್ಕೊಂಡು ಕಳ್ಳರು ಕೆಳಗೆ ಬರುತ್ತಿದ್ದರು. ಮೂಟೆಯನ್ನು ಎಳೆದುಕೊಂಡೇ ಬರುತ್ತಿದ್ದರು. ಯಾರಾದರೂ ಪೊಲೀಸ್ ಗೆ ಹೇಳಿ ಅಂತ ಓಡಿದೆ .ಶುಕ್ರವಾರ ಆದ ಕಾರಣ ಯಾರೂ ಇರಲಿಲ್ಲ. ಮಗನಿಂದ ಪೊಲೀಸ್ ಕಂಟ್ರೋಲ್ ರೂಂಗೆ ಫೋನ್ ಮಾಡಿಸಿದೆ. ದರೋಡೆಕೋರರು ಮಾಸ್ಕ್ ಧರಿಸಿದ್ದರು. ಮಧ್ಯಾಹ್ನವೇ ದರೋಡೆಯಾಗಿದೆ ಮನೆಯಲ್ಲಿ ಇರೋಕೆ ಭಯ ಆಗ್ತಿದೆ.-ಉಷ, ಬ್ಯಾಂಕ್ ಎದುರಿನ ಮನೆ ನಿವಾಸಿ, ಪೊಲೀಸರಿಗೆ ಮೊದಲು ಮಾಹಿತಿ ತಲುಪಿಸಿದವರು.