ಕನ್ನಡಪ್ರಭ ವಾರ್ತೆ ಮಡಿಕೇರಿ
ಅಯ್ಯಂಗೇರಿ ನಿವಾಸಿ ಕೆ.ಎಚ್. ಜಲೀನ ಎಂಬವರು ಏ.12 ರಂದು ಬೆಳಗ್ಗೆ 7.30ಕ್ಕೆ ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ತೆರಳಿದ್ದರು. ಮರು ದಿನ ಸಂಜೆ ಹಿಂತಿರುಗಿ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಹಿಂಬಾಗಿಲನ್ನು ಮೀಟಿ ಮುರಿದು ಬೀರುವಿನಲ್ಲಿ ಇಟ್ಟಿದ್ದ ರು.15,08,000 ಮೌಲ್ಯದ 232 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿರುವುದು ಕಂಡುಬಂದಿದೆ.
ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಮೇರೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಮಡಿಕೇರಿ ಉಪ ವಿಭಾಗ ಅಧೀಕ್ಷಕರು, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಎಲ್. ಅರುಣ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದರು.ಆರೋಪಿಗಳ ಪತ್ತೆಗೆ ಬಲೆ ಬೀಸಿದ ತನಿಖಾ ತಂಡ ಮಾಹಿತಿ ಕಲೆಹಾಕಿ ಇಬ್ಬರನ್ನು ಬಂಧಿಸಿ ರು.12,10,000 ರೂ. ಮೌಲ್ಯದ 177 ಗ್ರಾಂ ಚಿನ್ನಾಭರಣ ಸಮೇತ ಕೃತ್ಯಕ್ಕೆ ಬಳಸಿದ ಬೈಕ್ ಮತ್ತು ಎರಡು ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಧನೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಅವರು ಶ್ಲಾಘಿಸಿದ್ದಾರೆ.