ಕೊಪ್ಪಳ: ಕಳ್ಳರ ಹೆಡೆಮುಡಿ ಕಟ್ಟಲು ಶುರು ಮಾಡಿದ ಕೊಪ್ಪಳ ಪೊಲೀಸರು ಸಾಲುಸಾಲು ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ, ನಗದು, ಚಿನ್ನಾಭರಣ ವಶಪಡಿಸಿಕೊಳ್ಳುತ್ತಿದ್ದಾರೆ.
ಅಳವಂಡಿ ಮತ್ತು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ನಾನಾ ಕಡೆ ನಡೆದ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ, ಇಬ್ಬರು ಆರೋಪಿಗಳನ್ನು ಬಂಧಿಸಿ, ₹15 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಹನುಮೇಶ ಮತ್ತು ರಾಘವೇಂದ್ರ ಎನ್ನುವ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಬಂಧಿತರಿಂದ 290 ಗ್ರಾಂ ಬಂಗಾರ ಹಾಗೂ ₹50 ಸಾವಿರ ಮೌಲ್ಯದ ಬೈಕ್ ಸೇರಿದಂತೆ ಸುಮಾರು ₹15 ಲಕ್ಷ ಮೊತ್ತದ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಚಾಲಾಕಿ ಕಳ್ಳರು: ಕಳ್ಳತನ ಮಾಡಿದ ಬಂಗಾರವನ್ನು ಬ್ಯಾಂಕಿನಲ್ಲಿ ಅಡವಿಟ್ಟಿದ್ದರು. ಇದರ ಜಾಡು ಹಿಡಿದ ಪೊಲೀಸರು ತಾಂತ್ರಿಕ ಸಹಾಯದಿಂದ ಆರೋಪಿಗಳ ಹೆಡೆಮುಡಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿರುವ ತಂಡದಲ್ಲಿದ್ದ ಪೊಲೀಸರಿಗೆ ತಲಾ ₹20 ಸಾವಿರ ನಗದು ಪುರಸ್ಕಾರವನ್ನು ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಿಗೋಡಿ ಘೋಷಣೆ ಮಾಡಿದ್ದಾರೆ.ಪ್ರಕರಣವನ್ನು ಭೇದಿಸಿದ ತಂಡದಲ್ಲಿ ಗ್ರಾಮೀಣ ಪಿಐ ಮಹಾಂತೇಶ ಸಜ್ಜನ, ಪಿಎಸ್‌ಐಗಳಾದ ನಾಗಪ್ಪ, ಅಶೋಕ ಬೇವೂರು, ಸುನಿಲ್ ಎಚ್.ಮೀನಾಕ್ಷಿ, ಎಎಸ್ಐ ನೀಲಕಂಠಪ್ಪ, ಶಶಿಕಾಂತ ರಾಠೋಡ ಇದ್ದಾರೆ.ಜಿಲ್ಲೆಯಲ್ಲಿ ಆಗಿದ್ದ ಕಳ್ಳತನ ಪ್ರಕರಣವನ್ನು ನಮ್ಮ ತಂಡ ಜಾಲಾಡುತ್ತಿದ್ದು, ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಕಳ್ಳತನವಾಗಿದ್ದ ಬಂಗಾರ, ನಗದು ಹಾಗೂ ವಸ್ತುಗಳನ್ನು ಸಹ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಯಶೋದಾ ವಂಟಿಗೋಡಿ ತಿಳಿಸಿದ್ದಾರೆ.