ಆರೋಗ್ಯ ಬಲವರ್ಧನೆಗೆ ಸಿರಿಧಾನ್ಯ ಬಳಸಿ

KannadaprabhaNewsNetwork | Published : Nov 4, 2023 12:32 AM

ಸಾರಾಂಶ

ರಾಣಿಬೆನ್ನೂರು ತಾಲೂಕಿನ ಇಟಗಿ ಗ್ರಾಮದ ರೇವಣಪ್ಪ ಪೂಜಾರ ಜಮೀನಿನಲ್ಲಿ 20 ದೇಶೀಯ ತಳಿಯ ರಾಗಿ ಬೆಳೆ ಕ್ಷೇತ್ರೋತ್ಸವದಲ್ಲಿ ದೇಶಿ ಬೀಜ ಬೆಳೆಯಲ್ಲಿ ಸಹಭಾಗಿತ್ವ ತಳಿ ಆಯ್ಕೆ ಹಾಗೂ ಪರಿಚಯಿಸುವ ಕಾರ್ಯಕ್ರಮ ನಡೆಯಿತು.

ರಾಣಿಬೆನ್ನೂರು: ಆರೋಗ್ಯದ ಬಲವರ್ಧನೆಗೆ ಸಿರಿಧಾನ್ಯ ಬಳಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಹೇಳಿದರು.

ತಾಲೂಕಿನ ಇಟಗಿ ಗ್ರಾಮದ ರೇವಣಪ್ಪ ಪೂಜಾರ ಜಮೀನಿನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ 20 ದೇಶೀಯ ತಳಿಯ ರಾಗಿ ಬೆಳೆ ಕ್ಷೇತ್ರೋತ್ಸವದಲ್ಲಿ ದೇಶಿ ಬೀಜ ಬೆಳೆಯಲ್ಲಿ ಸಹಭಾಗಿತ್ವ ತಳಿ ಆಯ್ಕೆ ಹಾಗೂ ಪರಿಚಯಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರು ಇಂದಿನ ದಿನಗಳಲ್ಲಿ ತಮ್ಮ ಕುಟುಂಬಕ್ಕಾದರೂ ಕೃಷಿಯಲ್ಲಿ ಬದಲಾವಣೆ ಮಾಡಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಆಹಾರ ಬೆಳೆಗಳು, ತರಕಾರಿ ಸೊಪ್ಪು, ಅಕ್ಕಡಿಕಾಳು ಬೆಳೆಯಬೇಕು ಎಂದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿ ಡಾ. ನಾಗಪ್ಪ ಹರಿಜನ ಮಾತನಾಡಿ, ರಾಗಿಯಲ್ಲಿ ರೋಗ ನಿರೋಧಕ ಶಕ್ತಿಯಿದ್ದು, ಅದರ ಮೌಲ್ಯವರ್ಧನೆ ಮಾಡಿ ಅದರಿಂದ ಪೌಷ್ಟಿಕ ಆಹಾರ ತಯಾರಿಸಬೇಕು. ಅದನ್ನು ನಿರಂತರ ಸೇವಿಸಿದಲ್ಲಿ ಮನುಷ್ಯನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದರು.

ಕೃಷಿ ಪದವೀಧರ ಹನುಮಂತರೆಡ್ಡಿ ಮಾತನಾಡಿ, ಸಾಂಪ್ರದಾಯಿಕ ಕೃಷಿಯತ್ತ ರೈತರು ಗಮನಹರಿಸಬೇಕು. ಕಿರು ಧಾನ್ಯಗಳನ್ನು ರೈತರು ಅಧಿಕ ಪ್ರಮಾಣದಲ್ಲಿ ಬೆಳೆಯುವ ಮೂಲಕ ಜಮೀನಿನ ಇಳುವರಿ ಹಾಗೂ ಫಲವತ್ತತೆ ಹೆಚ್ಚಿಸಿಕೊಳ್ಳಲು ಗಮನಹರಿಸಬೇಕು. ವನಸಿರಿ ಸಂಸ್ಥೆಯವರು ತುಂಬಾ ದಿನಗಳಿಂದ ಸಿರಿಧಾನ್ಯ ಬೆಳೆಯುವ ರೈತರಿಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಇಂತಹ ಅವಕಾಶಗಳನ್ನು ರೈತರು, ರೈತ ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ವನಸಿರಿ ಸಂಸ್ಥೆಯ ನಿರ್ದೇಶಕ ಎಸ್.ಡಿ. ಬಳಿಗಾರ ಮಾತನಾಡಿ, ನಮ್ಮ ಸಂಸ್ಥೆಯು ದೇಸಿ ಬೀಜಗಳನ್ನು ರಕ್ಷಣೆ ಮಾಡಲು ಮೂರು ಬೀಜ ಬ್ಯಾಂಕ್‌ಗಳನ್ನು ಸ್ಥಾಪನೆ ಮಾಡಲಿದೆ. ಶೀಘ್ರದಲ್ಲಿ ಸಾವಯವ ರೈತರ ಸಂತೆ ಪ್ರಾರಂಭಿಸಿ ರೈತರಿಗೆ ಯೋಗ್ಯಬೆಲೆ ದೊರೆಯುವಂತೆ ಮಾಡುವ ಗುರಿ ಹೊಂದಿದೆ ಎಂದರು.

ಕ್ಷೇತ್ರೋತ್ಸವದಲ್ಲಿ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಡಾ. ಗುರುಪ್ರಸಾದ, ಡಾ. ಶಾಂತಕುಮಾರ, ರೇವಣಪ್ಪ ಪೂಜಾರ, ಜಿ.ಪಿ. ನದಾಫ್, ಹನುಮಂತಪ್ಪ ಮಣ್ಣಮ್ಮನವರ, ಹೈದರಾಬಾದ್‌ನ ಪೂಜಿತಾ ವಾಸನ್ ಸಂಸ್ಥೆ ಹಾಗೂ ಸುತ್ತಮುತ್ತಲಿನ ಗ್ರಾಮದ 100ಕ್ಕೂ ಹೆಚ್ಚು ಜನ ರೈತರು, ರೈತ ಮಹಿಳೆಯರು ಪಾಲ್ಗೊಂಡು ಸಿರಿಧಾನ್ಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

Share this article