ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗದಲ್ಲಿ ಕನ್ನಡ ವಿಷಯದಲ್ಲಿ ಓರ್ವ ವಿದ್ಯಾರ್ಥಿನಿ ಚಿನ್ನದ ಪದಕ ಪಡೆದರೆ, ಇತಿಹಾಸ ಮತ್ತು ರಾಜ್ಯಶಾಸ್ತ್ರ ವಿಷಯಗಳ ನಾಲ್ವರು ವಿದ್ಯಾರ್ಥಿಗಳು ಮೈಸೂರು ವಿಶ್ವ ವಿದ್ಯಾಲಯವು ನಡೆಸಿದ ಕಾಲೇಜು ಶಿಕ್ಷಣ ಇಲಾಖೆ ಪ್ರಾಧ್ಯಾಪಕರ ಹುದ್ದೆ ಆಯ್ಕೆಗೆ ಯುಜಿಸಿ ನಿಗದಿಪಡಿಸಿರುವ ಕೆ-ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಾಂಶುಪಾಲ ವಿ.ವಿ.ಜಗದೀಶ್ ತಿಳಿಸಿದರು.ಸ್ನಾತಕೋತ್ತರ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಶ್ಮಿತಾ ಡಿ.ಆರ್.ಕನ್ನಡ ವಿಭಾಗದಲ್ಲಿ ಉತ್ತಮ ಅಂಕ ಗಳಿಸಿ ಮೈಸೂರು ವಿವಿ 105ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಕೆ-ಸೆಟ್ ಪರೀಕ್ಷೆಯಲ್ಲಿ ಅನಿಲ್‌ಕುಮಾರ್ ಬಿ.ಎಸ್, ಉಷಾ.ಎಂ, ಗಣೇಶ ಪಿ.ವಿ ಹಾಗೂ ಮೊಹಮ್ಮದ್ ಅಕೀಫ್ ಪಾಸಾಗಿ ಇತಿಹಾಸ ವಿಭಾಗಕ್ಕೆ ಮತ್ತು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದರು.
ಪಟ್ಟಣದ ಕಾಲೇಜು ಗ್ರಾಮಾಂತರ ವಿಭಾಗದ ಕಾಲೇಜಾಗಿದ್ದು, ಇಲ್ಲಿ ಅತ್ಯುತ್ತಮ ಶೈಕ್ಷಣಿಕ ವಾತಾವರಣವಿದೆ. ಎಲ್ಲಾ ನಾಲ್ವರು ವಿದ್ಯಾರ್ಥಿಗಳು ಕೂಡಾ ಬಡ ಮಧ್ಯಮ ವರ್ಗದವರು. ಈಗಿರುವ ನಿಯಮಾವಳಿಗಳನ್ವಯ ಇವರೆಲ್ಲರೂ ಕೂಡಾ ಪ್ರಾಧ್ಯಾಪಕರಾಗಲು ಅರ್ಹತೆ ಪಡೆದುಕೊಂಡಿದ್ದಾರೆ.ವ್ಯಾಸಂಗದ ಅವಧಿಯಲ್ಲಿ ತಮ್ಮ ನಿಗದಿತ ಪಾಠಗಳ ಜೊತೆಗೆ ಸಾಧನೆ ಮಾಡಿರುವ ಇವರನ್ನು ಕಾಲೇಜು ಅಭಿನಂದಿಸುತ್ತದೆ. ಈ ಯಶಸ್ಸಿಗೆ ಕಾರಣರಾದ ಡಾ.ಜಯಕೀರ್ತಿ, ಸರಸ್ವತಿ, ಮುನಿಕೃಷ್ಣ. ಕುಮಾರಸ್ವಾಮಿ.ಡಿ.ಎನ್, ಡಾ.ರಮೇಶ್.ಸಿ, ಡಾ.ಸುರೇಶ್, ಕಿರಣ್, ರಾಜೇಶ್, ರಘುಪತಿ, ಜಗಧೀಶ್, ಮಂಜುನಾಥಸ್ವಾಮಿ, ಮಹೇಂದ್ರ, ಸಿದ್ದಯ್ಯ, ಎಂ.ವಿ.ಮೂರ್ತಿ ಅವರನ್ನು ಅಭಿನಂದಿಸಿದರು.
ಪ್ರಸಕ್ತ ಸಾಲಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನಮ್ಮ ಕಾಲೇಜಿನ ವಿದ್ಯಾರ್ಥಿ ಕಿರಣ್ ಆಯ್ಕೆಯಾಗಿರುವುದು ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಾಧನೆಯಾಗಿದೆ. ಪಿಯುಸಿ ನಂತರ ವಿದ್ಯಾರ್ಥಿಗಳು ಕಾಲೇಜಿಗೆ ಸೇರುವ ಮೂಲಕ ನಿಮ್ಮ ಭವಿಷ್ಯ ಉತ್ತಮಗೊಳಿಸಿಕೊಳ್ಳಿ ಎಂದು ಮನವಿ ಮಾಡಿದರು.