ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಹಗಲು ರಾತ್ರಿ ಕಷ್ಟ ಪಟ್ಟು ಬೆಳೆದ ದಾಳಿಂಬೆಗೆ ಚಿನ್ನದ ಬೆಲೆ ಬಂದಿದೆ, ಗುಣಮಟ್ಟದ ಕೆ.ಜಿ ದಾಳಿಂಬೆಗೆ 200 ರುಪಾಯಿ ಬೆಲೆಗೆ ಮಾರಾಟವಾಗುತ್ತಿದೆ. ಇದರಿಂದ ಕಳ್ಳರ ಕಣ್ಣು ರೈತರ ದಾಳಿಂಬೆ ತೋಟಗಳ ಮೇಲೆ ಬಿದ್ದಿದೆ. ಬೆಳೆದು ನಿಂತಿರುವ ದಾಳಿಂಬೆ ತೋಟಗಳಿಗೆ ನುಗ್ಗುತ್ತಿರುವ ಕಳ್ಳರು ಹಣ್ಣುಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಇದನ್ನು ತಡೆಯಲು ಚಿಕ್ಕಬಳ್ಳಾಪುರ ತಾಲೂಕಿನ ನಾಯನಹಳ್ಳಿ, ಅಂದಾರ್ಲಹಳ್ಳಿ, ನಂದಿ, ಚದಲಪುರ,ಪೆರೇಸಂದ್ರ ಬಳಿ ಇರುವ ತೋಟಗಳಲ್ಲಿ ರೈತರು ಹಗಲು, ರಾತ್ರಿ ಕಾವಲು ಕಾಯುತ್ತಿದ್ದಾರೆ.
2,344 ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಜಿಲ್ಲೆಯಲ್ಲಿ ಸಮಾರು 2,344 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ದಾಳಿಂಬೆ ಬೆಳೆ ವಿಸ್ತರಣೆಯಾಗಿದೆ. ಕಳೆದ 7-8 ವರ್ಷಗಳಿಂದ ಜಿಲ್ಲೆಯಲ್ಲಿ ದಿನೇ ದಿನೆ ದಾಳಿಂಬೆ ಬೆಳೆಯುವ ಪ್ರದೇಶ ಬೆಳೆಯುತ್ತಲೇ ಇದೆ. ದ್ರಾಕ್ಷಿ ತೋಟಗಳನ್ನು ಕಿತ್ತು ದ್ರಾಕ್ಷಿ ಚಪ್ಪರಗಳಲ್ಲೇ ದಾಳಿಂಬೆ ಗಿಡಗಳನ್ನು ನಾಟಿ ಮಾಡಲಾಗಿದೆ. ಇನ್ನೊಂದೆಡೆ ನೆರೆಹೊರೆಯ ಜಿಲ್ಲೆಯವರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಮೀನನ್ನು ಲೀಸ್‌ಗೆ ಪಡೆದು ದಾಳಿಂಬೆ ಬೆಳೆಯನ್ನು ಹಾಕಿ ಲಾಭದ ನಿರೀಕ್ಷೆಯಲ್ಲಿದ್ದಾರೆ.ಉತ್ತಮವಾಗಿ ಬೆಳೆ ಬೆಳೆದರೆ ವರ್ಷಕ್ಕೆ ಒಂದು ಎಕರೆಗೆ 5-8 ಲಕ್ಷ ಸಂಪಾದನೆ ಮಾಡಬಹುದು. ಸದ್ಯ ಮಾರುಕಟ್ಟೆಯಲ್ಲಿ 150-250 ರೂ.ವರೆಗೂ ದಾಳಿಂಬೆ ಮಾರಾಟವಾಗುತ್ತಿದೆ. ರೈತರಿಗೆ ಕನಿಷ್ಠ 100-150 ರೂ.ವರೆಗೂ ಕೆ.ಜಿ.ಗೆ ಸಿಗಲಿದೆ. ಜಿಲ್ಲೆಯಲ್ಲಿ ರೈತರು ದಾಳಿಂಬೆ ಕೃಷಿಯನ್ನು ಹೈಟೆಕ್ ಆಗಿ ಮಾಡುತ್ತಿದ್ದು, ಉತ್ತಮ ಆದಾಯ ಗಳಿಸುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ಕಳ್ಳರದ್ದೇ ಈಗ ರೈತರಿಗೆ ಸವಾಲಾಗಿ ಪರಿಣಮಿಸಿದೆ.
ಸೋಲಾರ್ ವಿದ್ಯುತ್ ಬೇಲಿಸಾಕಷ್ಟು ರೈತರು ದಾಳಿಂಬೆ ತೋಟಗಳಿಗೆ ಸೋಲಾರ್ ವಿದ್ಯುತ್ ಬೇಲಿ ಹಾಕಿ, ಸಿಸಿ ಟಿವಿ ಕ್ಯಾಮರಾಗಳನ್ನು ಹಾಕಿದ್ದರೂ ಸಹಾ ಕಳ್ಳರು ತಮ್ಮ ಕೈ ಚಳಕ ತೋರಿಸುತ್ತಿರುವುದನ್ನು ಕಂಡು ರೋಸಿ ಹೋಗಿದ್ದಾರೆ.ಕಳ್ಳರು ತೋಟಗಳಲ್ಲಿ ಕಳುವು ಮಾಡುತ್ತಿರುವ ದೃಶ್ಯಗಳು ಸಿಸಿ ಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಪೋಲಿಸ್ ದೂರು ನೀಡಿದರೂ ಕಳ್ಳರ ಪತ್ತೆಯಾಗಿಲ್ಲಾ. ಅಕಸ್ಮಾತ್ ಕಳ್ಳರು ಪತ್ತೆಯಾದರೂ ರೈತರಿಗೆ ಹಣ ಸಿಗುವ ಗ್ಯಾರಂಟಿ ಇಲ್ಲಾ. ಕಳ್ಳನಿಗೆ ಹೆಚ್ಚೆಂದರೆ ಆರುತಿಂಗಳ ಶಿಕ್ಷೆ ಕೋರ್ಟ್ ನೀಡಬಹುದು. ಅದಕ್ಕೆ ರೈತರೆ ಎಲ್ಲದಕ್ಕೂ ಸನ್ನದ್ದರಾಗಿ ಕಾವಲು ಕಾಯುತ್ತಿದ್ದಾರೆ.