₹1 ಲಕ್ಷ ದಾಟಿದರೂ ಇಳಿಯದ ಚಿನ್ನದ ಖರೀದಿ : ಬುಕ್ಕಿಂಗ್ ಶೇಕಡ 10ರಷ್ಟು ಹೆಚ್ಚಳ

KannadaprabhaNewsNetwork |  
Published : Apr 27, 2025, 01:35 AM ISTUpdated : Apr 27, 2025, 07:49 AM IST
ಚಿನ್ನ | Kannada Prabha

ಸಾರಾಂಶ

ದಾಖಲೆ ದರ ಏರಿಕೆ ನಡುವೆಯೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅಕ್ಷಯ ತೃತೀಯಕ್ಕೆ ಚಿನ್ನ ಮುಂಗಡ ಬುಕ್ಕಿಂಗ್ ಶೇಕಡ 10ರಷ್ಟು ಹೆಚ್ಚಾಗಿದೆ. 

  ಬೆಂಗಳೂರು : ದಾಖಲೆ ದರ ಏರಿಕೆ ನಡುವೆಯೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅಕ್ಷಯ ತೃತೀಯಕ್ಕೆ ಚಿನ್ನ ಮುಂಗಡ ಬುಕ್ಕಿಂಗ್ ಶೇಕಡ 10ರಷ್ಟು ಹೆಚ್ಚಾಗಿದೆ. ಚಿನ್ನ ಖರೀದಿಯ ಪ್ರಮಾಣ ಕಡಿಮೆಯಾಗಿದ್ದರೂ ಹೆಚ್ಚಿನ ಜನ ಹೂಡಿಕೆ ಉದ್ದೇಶದಿಂದ ಕೊಳ್ಳುತ್ತಿರುವುದು ಇದಕ್ಕೆ ಕಾರಣವಾಗಿದೆ.

ಹಿಂದೆಲ್ಲ ವರ್ಷದ ಸರಾಸರಿ ಏರಿಕೆ ಒಂದು ಗ್ರಾಂ. ಚಿನ್ನದ ಮೇಲೆ ₹50-100 ಹೆಚ್ಚಾಗುತ್ತಿತ್ತು. ಆದರೆ, 2024ರ ಏಪ್ರಿಲ್‌ನಲ್ಲಿ ಒಂದು ಗ್ರಾಂ. ಚಿನ್ನದ ಬೆಲೆ ₹6,600- ₹6,700 ರಷ್ಟಿದ್ದುದು, 2025ರ ಏಪ್ರಿಲ್‌ಗೆ ಬರೊಬ್ಬರಿ ₹10 ಸಾವಿರ ದಾಟಿದೆ. ಸದ್ಯ ಇಷ್ಟು ದೊಡ್ಡಮಟ್ಟದ ಏರಿಕೆ ಇದೇ ಮೊದಲು. ಆದರೆ, ಮುಂದಿನ ಆರು ತಿಂಗಳಲ್ಲಿ ₹12 ಸಾವಿರ ದಾಟುವ ಸಾಧ್ಯತೆಯಿದೆ. ಕಾರ್ತಿಕದ ವೇಳೆಗೆ ಮದುವೆ ಸೀಸನ್ ಕೂಡ ಇದ್ದು, ಹೀಗಾಗಿ ಗ್ರಾಹಕರು ಈಗಲೇ ಗ್ರಾಹಕರು ಚಿನ್ನ ಖರೀದಿ ಮಾಡಿಟ್ಟುಕೊಳ್ಳುತ್ತಿದ್ದಾರೆ. ಅಕ್ಷಯ ತೃತೀಯದಲ್ಲೂ ಇದನ್ನೇ ಕಾಣುತ್ತಿದ್ದೇವೆ ಎಂದು ಚಿನ್ನಾಭರಣ ವರ್ತಕರು ಅಭಿಪ್ರಾಯ ಪಟ್ಟಿದ್ದಾರೆ.

ಹಬ್ಬದ ಹಿನ್ನೆಲೆಯಲ್ಲಿ 15 ದಿನದಿಂದಲೇ ಆಭರಣದ ಬುಕ್ಕಿಂಗ್‌ ಆಗುತ್ತಿದೆ. ಇದನ್ನು ಗಮನಿಸಿದರೆ ಕಳೆದ ವರ್ಷಕ್ಕಿಂತ ಶೇ.10 ರಷ್ಟು ಹೆಚ್ಚು ವಹಿವಾಟಿನ ನಿರೀಕ್ಷೆಯಿದೆ. ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಕೊಳ್ಳದಿದ್ದರೂ ಸಾಮಾನ್ಯಕ್ಕಿಂತ ಹೆಚ್ಚಿನ ಗ್ರಾಹಕರು ಈ ಬಾರಿ ಖರೀದಿಗೆ ಮುಂದೆ ಬಂದಿದ್ದಾರೆ. ಹಬ್ಬದ ದಿನ ಸಹಜವಾಗಿ ದರ ಹೆಚ್ಚಿರುವ ಕಾರಣ ಮುಂಗಡ ಬುಕ್ಕಿಂಗ್‌ ಇದೆ. ರಾಜ್ಯದಲ್ಲಿ ಸುಮಾರು ₹2 ಸಾವಿರ ಕೋಟಿ ವಹಿವಾಟು ನಡೆಯುವ ನಿರೀಕ್ಷೆಯಿದೆ ಎಂದು ಚಿನ್ನಾಭರಣ ವರ್ತಕರ ಸಂಘಗಳು ತಿಳಿಸಿವೆ.

ನೆಕ್ಲೆಸ್‌, ಬಳೆಯಂತಹ ಚಿನ್ನಾಭರಣ, ಬೆಳ್ಳಿ, ವಜ್ರಾಭರಣ ಜೊತೆಗೆ ಲಕ್ಷ್ಮೀ, ಬಾಲರಾಮನ ಚಿತ್ರವಿರುವ ಕಾಯಿನ್‌, ಪೆಂಡೆಂಟ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಜತೆಗೆ ಲೈಟ್‌ವೆಯಿಟ್‌(ಹಗುರ) ಅಂದರೆ ನೋಡಲು ದೊಡ್ಡದಾಗಿದ್ದು, ತೂಕ ಕಡಿಮೆಯಿರುವ ಆಭರಣವನ್ನು ಗ್ರಾಹಕರು ಕೇಳುತ್ತಿದ್ದಾರೆ. ಗ್ರಾಹಕರನ್ನು ಸೆಳೆಯಲು ಮಾರಾಟಗಾರರು ಈ ರೀತಿಯ ಆಭರಣದ ಪ್ರದರ್ಶನದ ಮೂಲಕ ಸೆಳೆಯುತ್ತಿದ್ದಾರೆ.

ಅರ್ಧ ಗ್ರಾಂ ಚಿನ್ನ:

ಚಿನ್ನದ ಬೆಲೆ ಗಗನಕ್ಕೇರಿರುವ ಕಾರಣದಿಂದ ಅಕ್ಷಯ ತೃತೀಯದಂದು ಚಿನ್ನಕೊಳ್ಳುವವರಿಗೆ ನಿರಾಸೆ ಆಗದಿರಲೆಂದು ನಗರದ ಮಳಿಗೆಗಳು ಅರ್ಧ ಗ್ರಾಂ. ಚಿನ್ನದ ನಾಣ್ಯ ತಂದಿವೆ. ಇದರ ದರ ₹5 ಸಾವಿರ. ದುಬಾರಿ ಆಗಿರುವ ಚಿನ್ನವನ್ನು ಹೇಗೆ ಖರೀದಿ ಮಾಡುವುದು ಎಂದು ಗ್ರಾಹಕರು ಪ್ರಶ್ನಿಸುತ್ತಾರೆ. ಹಬ್ಬದ ದಿನದಂದು ಸ್ವಲ್ಪವಾದರೂ ಖರೀದಿ ಮಾಡಬೇಕು ಎಂದುಕೊಂಡಿದ್ದವರಿಗೆ ನಿರಾಸೆ ಆಗದಿರಲೆಂದು ಇದೇ ಮೊದಲ ಬಾರಿಗೆ ಅರ್ಧ ಗ್ರಾಂ ಚಿನ್ನದ ನಾಣ್ಯ ಬಿಡುಗಡೆಗೊಳಿಸಿದ್ದಾರೆ.

ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ। ಬಿ.ರಾಮಾಚಾರಿ ಮಾತನಾಡಿ, ಪ್ರತಿಸುಂಕ, ಯುದ್ಧಗಳ ಕಾರಣದಿಂದ ಷೇರು ಮಾರುಕಟ್ಟೆ ಕುಸಿದಿದೆ. ಹೀಗಾಗಿ ಹೂಡಿಕೆ ಮಾಡುವವರು ಚಿನ್ನದತ್ತ ಮುಖ ಮಾಡಿದ್ದಾರೆ. ಹೆಚ್ಚಿನವರು ಗಟ್ಟಿ ಚಿನ್ನ ಕೊಂಡುಕೊಳ್ಳುತ್ತಿದ್ದಾರೆ. ಇದೇ ಕಾರಣದಿಂದ ಬೆಲೆ ಏರಿಕೆಯಾಗಿದೆ. ಇನ್ನೂ ಏರಿಕೆಯಾಗುವ ಸಾಧ್ಯತೆಯೇ ಹೆಚ್ಚಿದೆ ಎಂದರು.

ಶಾಲಾ ಕಾಲೇಜು ಮಕ್ಕಳ ಫೀಸನ್ನು ಕಂತುಗಳಲ್ಲಿ ಕಟ್ಟುತ್ತಿದ್ದೇವೆ. ಚಿನ್ನದ ದರ ಇನ್ನೂ ಹೆಚ್ಚಾಗುವ ಕಾರಣ ಈಗಲೇ ಕೊಂಡುಕೊಳ್ಳುತ್ತೇವೆ. ಮುಂದೆ ಅದನ್ನು ಮಾರಿದರೆ ಹೆಚ್ಚು ನಗದು ಸಿಗಬಹುದು ಎಂದು ಗ್ರಾಹಕರು ಹೇಳುತ್ತಾರೆ ಎಂದು ಮಲ್ಲೇಶ್ವರದ ಚಿನ್ನದ ಮಳಿಗೆಯವರು ಹೇಳುತ್ತಾರೆ.

1ಗ್ರಾಂ ಚಿನ್ನದ ಬೆಲೆ (ಏ.26)

22 ಕ್ಯಾರೆಟ್‌ - 9005

24 ಕ್ಯಾರೆಟ್‌ - 9636

ಬೆಳ್ಳಿ (ಕೇಜಿ) - 99200

ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 10ರಷ್ಟು ಹೆಚ್ಚು ವಹಿವಾಟು ಆಗಲಿದೆ. ಜನ ಚಿನ್ನ ಖರೀದಿಸುವುದು ಹೂಡಿಕೆಯಲ್ಲಿ ಹೆಚ್ಚು ಸುರಕ್ಷಿತ ಎಂದು ಭಾವಿಸಿದ್ದಾರೆ. ಹೀಗಾಗಿ, ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆಯಾಗಿದ್ದು, ದರ ಏರಿಕೆ ಮುಂದುವರಿಯಲಿದೆ.

ಡಾ। ಬಿ.ರಾಮಾಚಾರಿ,

-ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ