ಮಂಗಳೂರು: ಗುದದ್ವಾರದಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಈಕೆ ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 20.41 ಲಕ್ಷ ರು. ಮೌಲ್ಯದ ಚಿನ್ನವನ್ನು ಮಂಗಳೂರಿನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದುಬೈನಿಂದ ಮಂಗಳೂರಿಗೆ ಬುಧವಾರ ವಿಮಾನದಲ್ಲಿ ಬಂದಿಳಿದ ಮಹಿಳೆಯ ತಪಾಸಣೆ ವೇಳೆ ಡಿಟೆಕ್ಟರ್‌ನಲ್ಲಿ ಅಕ್ರಮ ಚಿನ್ನ ಹೊಂದಿರುವುದು ದೃಢಪಟ್ಟಿತ್ತು. ಎರಡು ಗೋಳಾಕಾರದ ಕ್ಯಾಪ್ಸುಲ್ ಮಾದರಿಗಳಲ್ಲಿ ಪೇಸ್ಟ್ ರೂಪದ ಚಿನ್ನವನ್ನು ಗುದದ್ವಾರದಲ್ಲಿ ಬಚ್ಚಿಟ್ಟುಕೊಂಡು ಸಾಗಾಟ ಮಾಡುತ್ತಿದ್ದಳು. 24 ಕ್ಯಾರೆಟ್‌ನ 345 ಗ್ರಾಂ ಚಿನ್ನ ಪತ್ತೆಯಾಗಿದ್ದು, ಇದರ ಮೌಲ್ಯ 20,41,650 ರು. ಎಂದು ಅಂದಾಜಿಸಲಾಗಿದೆ.