ನರಗುಂದ: ಲಕ್ಕುಂಡಿಯಲ್ಲಿ ಇತ್ತೀಚೆಗೆ ಸಿಕ್ಕ ಬಂಗಾರದ ನಿಧಿ ರಿತ್ತಿ ಕುಟುಂಬದ ಪೂರ್ವಜರ ಸ್ವತ್ತು ಇರಬಹುದು. ಕಾನೂನು ಅಡಿಯಲ್ಲಿ ಅವಕಾಶವಿದ್ದರೆ ಬಂಗಾರದ ಸ್ವತ್ತನ್ನು ಆ ಕುಟುಂಬಕ್ಕೆ ನೀಡಿದರೆ ಅಡ್ಡಿಯಿಲ್ಲ ಎನಿಸುತ್ತಿದೆ ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲಕ್ಕುಂಡಿ ಗ್ರಾಮದಲ್ಲಿಗ ಕೋಟೆ ವೀರಭದ್ರೇಶ್ವರನ ಜಾತ್ರೆ ಇದೆ. ಸರ್ಕಾರ ಉತ್ಖನನ ನೆಪದಲ್ಲಿ ಜಾತ್ರೆಯನ್ನೇ ನಿಷೇಧ ಮಾಡಿರುವುದು ಬೇಸರ ತಂದಿದೆ. ಸರ್ಕಾರ ನಿಧಿ ಆಸೆಗಾಗಿ ಅವಸರದಲ್ಲಿ ಉತ್ಖನನ ಮಾಡಲು ಹೊರಟಿದೆ. ಜನತೆಗೆ ತೊಂದರೆ ಮಾಡುವುದು ಸರಿಯಲ್ಲ. ಆ ಕುಟುಂಬಕ್ಕೆ ಸರ್ಕಾರ ಶೀಘ್ರ ನಿವೇಶನ ನೀಡಬೇಕೆಂದು ಆಗ್ರಹಿಸಿದರು.ವಿಬಿ ಜಿ- ರಾಮ್ ಜಿ ಆ್ಯಕ್ಟ್- 2025 ಕಾಯ್ದೆ 2047ಕ್ಕೆ ಭಾರತವನ್ನು ಅಭಿವೃದ್ಧಿ ರಾಷ್ಟ್ರವನ್ನಾಗಿ ಮಾಡುವ ಗುರಿ ಹೊಂದಿದೆ. ಕೆಲವೇ ದಿನಗಳಲ್ಲಿ ಅಧಿವೇಶನ ನಡೆಯಲಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ತರಾತುರಿಯಲ್ಲಿ ವಿಧಾನಸಭೆ ಅಧಿವೇಶನ ಕರೆದು ವಿಬಿ ಜಿ-ರಾಮ್ ಜಿ ಕಾಯ್ದೆಯನ್ನು ವಿರೋಧಿಸಲು ಹೊರಟಿದೆ. ರಾಜ್ಯ ಸರ್ಕಾರ ಅಭಿವೃದ್ಧಿಯನ್ನು ವಿರೋಧ ಮಾಡಲು ಹೊರಟಿದೆ ಎಂದರು.ನರೇಗಾದಲ್ಲಿದ್ದ 100 ದಿನಗಳ ಗ್ಯಾರಂಟಿ ಕೆಲಸಗಳನ್ನು ಕೇಂದ್ರ ಸರ್ಕಾರವು 125 ದಿನಗಳಿಗೆ ಹೆಚ್ಚಿಸಿದೆ. ನಿರುದ್ಯೋಗ ಭತ್ಯೆ ತಂತ್ರಾಂಶದ ಮೂಲಕ 15 ದಿನಗಳಲ್ಲಿ ಜನರೇಟ್ ಆಗಲಿದೆ. ವೇತನ ವಿಳಂಬವಾದಲ್ಲಿ ದಿನಕ್ಕೆ ಶೇ. 0.05ರಷ್ಟು ಪರಿಹಾರಧನ ನೀಡಲಿದೆ. ಗ್ರಾಮಮಟ್ಟದಲ್ಲಿ ನೀರಿನ ಸಂರಕ್ಷಣೆ ಮತ್ತು ಭದ್ರತೆ, ಹೊಸ ಕೆರೆಗಳ ನಿರ್ಮಾಣ ಅಥವಾ ಪುನಶ್ಚೇತನ, ಹೂಳೆತ್ತುವುದು, ನೀರಾವರಿ ಕಾಲುವೆ ನಿರ್ಮಾಣ, ಮಣ್ಣಿನ ಸವಕಳಿ ತಡೆಗಟ್ಟುವ ಕಾರ್ಯ ಮತ್ತು ಮಳೆ ನೀರು ಕೊಯ್ಲು, ಗ್ರಾಮೀಣ ರಸ್ತೆ, ಗ್ರಾಮೀಣ ಮೂಲ ಸೌಕರ್ಯ, ಜೀವನೋಪಾಯಕ್ಕೆ ಸಂಬಂಧಿಸಿದ ಸೌಕರ್ಯಗಳು, ಪ್ರಕೃತಿ ವಿಕೋಪದಲ್ಲಿ ಸೌಕರ್ಯ ಇವುಗಳಿಗೆ ಸಂಬಂಧಿಸಿದಂತೆ ಕ್ರಿಯಾಯೋಜನೆಗಳನ್ನು ಗ್ರಾಮಸಭೆಯಲ್ಲಿಯೇ ರೂಪಿಸಲಾಗುತ್ತದೆ.