ಮುಂಡರಗಿ: ನೂರು ವರ್ಷಗಳ ಹಿಂದೆ ಮುಂಡರಗಿ ನಾಡಿನ ಜನತೆಗೆ ಅಕ್ಷರ ನೀಡಬೇಕೆನ್ನುವ ಮಹಾದಾಸೆಯಿಂದ ಶಾಲೆ ತೆರೆಯುವ ಮೂಲಕ ಶಿಕ್ಷಣ ಸಂಸ್ಥೆ ಕಟ್ಟಿ ಅಕ್ಷರ, ಅನ್ನ ಹಾಗೂ ಆಶ್ರಯ ನೀಡಿದ ಅನ್ನದಾನೀಶ್ವರ ಮಠ ಹಾಗೂ ಮಠದ ಅಂದಿನ ಮತ್ತು ಆ ಕಾರ್ಯವನ್ನು ಇಂದಿಗೂ ನಿರಂತರವಾಗಿ ಮುಂದುವರಿಸಿರುವ ಡಾ. ಅನ್ನದಾನೀಶ್ವರ ಸ್ವಾಮೀಜಿಯವರ ಕಾರ್ಯ ಶ್ಲಾಘನೀಯ ಎಂದು ಸಚಿವ ಡಾ. ಎಚ್.ಕೆ. ಪಾಟೀಲ ತಿಳಿಸಿದರು.
ಶ್ರೀಗಳು ಶಾಲೆ ಪ್ರಾರಂಭಿಸಿದಾಗ ಮಕ್ಕಳನ್ನು ಶಾಲೆಗೆ ಕಳಿಸಲೂ ಹಿಂದೆ ಮುಂದೆ ನೋಡುವ ಕಾಲ. ಆಗಲೂ ಶ್ರೀಮಠದ ಸ್ವಾಮೀಜಿ ಜನತೆಗೆ ಅಕ್ಷರದ ಮಹತ್ವವನ್ನು ತಿಳಿಸಿ ಶಾಲೆಗೆ ಕರೆತರುವ ಮೂಲಕ ಯಶಸ್ವಿಯಾಗಿದ್ದಾರೆ. ಸ್ವಾಮೀಜಿಯವರು ಊರಿಂದೂರಿಗೆ ಜೋಳಿಗೆ ಹಾಕಿಕೊಂಡು ತಿರುಗಾಡಿ ಬಂದ ಹಣದಿಂದ ಶಾಲೆ ನಡೆಸಬೇಕಿತ್ತು. ಈ ಮಠದ ಇಂದಿನ ಸ್ವಾಮಿಜಿಯವರೂ ಈಗಲೂ ಕಾಣಿಕೆ ಸ್ವೀಕರಿಸುವ ಪದ್ಧತಿಯನ್ನು ಬಿಟ್ಟಿಲ್ಲ. ಅದರಿಂದ ಬಂದ ಹಣವನ್ನು ವಿದ್ಯಾ ಸಂಸ್ಥೆಯ ಕೆಲಸ ಕಾರ್ಯಗಳಿಗೆ ವಿನಿಯೋಗ ಮಾಡುತ್ತಿದ್ದಾರೆ.
ಲಕ್ಷಾಂತರ ಮಕ್ಕಳಿಗೆ ವಿದ್ಯ ನೀಡಿದ ಪುಣ್ಯ ಶ್ರೀಮಠಕ್ಕೆ ದೊರೆತಿದೆ. ಶ್ರೀಗಳು ಕೇವಲ ಸ್ವಾಮೀಜಿಯಾಗದೇ ಶಿಕ್ಷಣ ಕ್ಷೇತ್ರದ ಮೇಧಾವಿಗಳಾಗಿದ್ದಾರೆ. ಶೈಕ್ಷಣಿಕವಾಗಿ ಬಹುದೊಡ್ಡ ಮಟ್ಟಕ್ಕೆ ಏರಿದ್ದಾರೆ. ಅನ್ನದಾನೀಶ್ವರ ಸ್ವಾಮೀಜಿ ತಮ್ಮ ಅನುಭವವನ್ನು ಸಾಹಿತ್ಯ ಕೃತಿಗಳ ಮೂಲಕ, ಶೈಕ್ಷಣಿಕ ಕಾರ್ಯಗಳ ಮೂಲಕ ವ್ಯಕ್ತಪಡಿಸುತ್ತಾ ಬಂದಿದ್ದಾರೆ ಎಂದರು. ಕಾರ್ಯಕ್ರಮದ ಉದ್ಘಾಟಿಸಿ ಏಷ್ಯಾನೆಟ್ ಸುವರ್ಣ ನ್ಯೂಸ್ ಚಾನಲ್ ಪ್ರಧಾನ ಸಂಪಾದಕ ಅಜಿತ್ ಹನುಮಕ್ಕನವರ್ ಮಾತನಾಡಿ, ಈ ದೇಶಕ್ಕೆ ಮಠಮಾನ್ಯಗಳು ಏನು ಕೊಡುಗೆ ನೀಡಿವೆ ಎಂದು ಪ್ರಶ್ನಿಸುವವರನ್ನು ಇಂತಹ ಮಠಗಳಿಗೆ ಕರೆತಂದು ತೋರಿಸಬೇಕು. 1924ರಲ್ಲಿ ಒಂದು ಇದ್ದ ಶಾಲೆಯನ್ನು ಇಂದು 33 ಆಗುವಂತೆ ಬೆಳೆಸಿರುವುದನ್ನು ನೋಡಿದರೆ ಅನ್ನದಾನೀಶ್ವರ ಮಠದ ಶಕ್ತಿ ಎಂತದ್ದು ಎಂದು ಎಲ್ಲರಿಗೂ ಗೊತ್ತಾಗುತ್ತದೆ. ದೇಶದ ಶಕ್ತಿ ಉಳಿದಿದ್ದು ಗ್ರಾಮೀಣ ಭಾಗದಲ್ಲಿ. ಮಠಮಾನ್ಯಗಳು ಚಾರಿತ್ರ್ಯ ಕಲಿಸುತ್ತವೆ. ಪತ್ರಿಕೋದ್ಯಮ ಎಂದರೆ ತಪ್ಪಸ್ಸು ಇದ್ದಂತೆ. ಚಾರಿತ್ರ್ಯ ನಿರ್ಮಾಣ ಮಾಡುವ ಕೆಲಸ ಮಾಡಬೇಕು. ಮಠಕ್ಕೆ ಋಣಿಯಾಗಬೇಕು. ೧೦ ವರ್ಷಕೊಮ್ಮೆ ಶಿಕ್ಷಣ ಪದ್ಧತಿ ಬದಲಾಗಬೇಕು ಎಂದರು.ಕಾರ್ಯಕ್ರಮದಲ್ಲಿ ಡಾ. ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀಮಠದ ಉತ್ತರಾಧಿಕಾರಿ ಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಕಾಲೇಜು ಮೇಲ್ವಿಚಾರಣಾ ಸಮೀತಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ, ಜಿಪಂ ಮಾಜಿ ಅಧ್ಯಕ್ಷ ಸುಜಾತಾ ದೊಡ್ಡಮನಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ, ಅಶೋಕ ಮಂದಾಲಿ, ಡಾ. ಬಿ.ಜಿ. ಜವಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.