20 ತಾಣ ಸಂರಕ್ಷಿತ ಸ್ಮಾರಕ ಪಟ್ಟಿ ಸೇರ್ಪಡೆಗೆ ಪ್ರಸ್ತಾವನೆ ಸಲ್ಲಿಕೆಗೆ ಸೂಚನೆ

KannadaprabhaNewsNetwork |  
Published : Jan 19, 2026, 03:15 AM IST
 | Kannada Prabha

ಸಾರಾಂಶ

ಲಕ್ಕುಂಡಿಯ ಆಯ್ದ 5 ದೇವಸ್ಥಾನಗಳು ಮತ್ತು 1 ಪ್ರಾಚೀನ ಬಾವಿಯ ಸಮಗ್ರ ಅಭಿವೃದ್ಧಿಗಾಗಿ ಈಗಾಗಲೇ 10 ಕೋಟಿ ಬಿಡುಗಡೆ ಮಾಡಲಾಗಿದೆ.

ಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದ 16 ತಾಣಗಳನ್ನು ಈಗಾಗಲೇ ರಾಜ್ಯ ಸಂರಕ್ಷಿತ ಸ್ಮಾರಕಗಳು ಎಂದು ಘೋಷಣೆ ಮಾಡಲಾಗಿದೆ. ಅದರ ಜತೆಗೆ ಇನ್ನು 8 ದೇವಸ್ಥಾನಗಳನ್ನು ಫೆಬ್ರವರಿ ಅಂತ್ಯದೊಳಗೆ ಸಂರಕ್ಷಿತ ಸ್ಮಾರಕಗಳಾಗಿ ಘೋಷಣೆ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಭಾನುವಾರ ರಾತ್ರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಉನ್ನತ ಮಟ್ಟದ ಸಲಹಾ ಸಮಿತಿಯ ಸಭೆಯ ಆನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಕ್ಕುಂಡಿಯ ಇನ್ನು 20 ದೇವಸ್ಥಾನ, ಬಾವಿಗಳನ್ನು ರಾಜ್ಯ ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಸಂಬಂಧ ಒಂದು ತಿಂಗಳ ಒಳಗಾಗಿ ಸಮಗ್ರ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಇದರಿಂದಾಗಿ ಲಕ್ಕುಂಡಿಯ ಒಟ್ಟು 44 ತಾಣಗಳು ಸರ್ಕಾರದ ನೇರ ಉಸ್ತುವಾರಿಗೆ ಒಳಪಡಲಿದ್ದು, ಇವುಗಳ ಅಭಿವೃದ್ಧಿ ಮತ್ತು ರಕ್ಷಣೆಗೆ ಹೆಚ್ಚಿನ ಅನುದಾನ ಲಭ್ಯವಾಗಲಿದೆ ಎಂದು ಹೇಳಿದರು.

ಲಕ್ಕುಂಡಿಯ ಆಯ್ದ 5 ದೇವಸ್ಥಾನಗಳು ಮತ್ತು 1 ಪ್ರಾಚೀನ ಬಾವಿಯ ಸಮಗ್ರ ಅಭಿವೃದ್ಧಿಗಾಗಿ ಈಗಾಗಲೇ 10 ಕೋಟಿ ಬಿಡುಗಡೆ ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಫೆಬ್ರವರಿ ತಿಂಗಳಲ್ಲಿ ಕಾಮಗಾರಿಗಳಿಗೆ ವರ್ಕ್ ಆರ್ಡರ್ ನೀಡಿ ಕೆಲಸ ಆರಂಭಿಸಲಾಗುವುದು. ಅಲ್ಲದೆ, ಮಣ್ಣಿನಡಿಯಲ್ಲಿ ಸ್ಪಷ್ಟವಾಗಿ ಕಾಣದ ದೇವಸ್ಥಾನಗಳನ್ನು ಗುರುತಿಸಿ ಮಾರ್ಚ್ ಒಳಗೆ ಮರುಜೀವ ನೀಡಲು ವಿಶೇಷ ಉತ್ಖನನ ನಡೆಸಲಾಗುವುದು. ಅದಕ್ಕೆ ಜನರ ಸಹಕಾರ ಅಗತ್ಯವಿದ್ದು, ಕೆಲವರಿಗೆ ಪರಿಹಾರ ಕೊಟ್ಟು, ಇಲ್ಲವೇ ಮನವೊಲಿಸಿ ಐತಿಹಾಸಿಕ ತಾಣಗಳನ್ನು ಸರ್ಕಾರಕ್ಕೆ ಕೊಡಬೇಕು ಎಂದು ಜನರಲ್ಲಿ ವಿನಂತಿ ಮಾಡಿಕೊಳ್ಳುವೆ. ಲಕ್ಕುಂಡಿಯ ಕಲಾ ವೈಭವವನ್ನು ಅಧ್ಯಯನ ಮಾಡಲು ಬಯಲು ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ₹165 ಲಕ್ಷ ಬಿಡುಗಡೆಯಾಗಿದೆ. ಗಣರಾಜ್ಯೋತ್ಸವದ ಒಳಗೆ ಜಮೀನು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ, ಟೆಂಡರ್ ಕರೆಯಲು ಸೂಚಿಸಲಾಗಿದೆ ಎಂದರು.

ಗಣರಾಜ್ಯೋತ್ಸವದಂದು ಸನ್ಮಾನ: ಇತ್ತೀಚೆಗೆ ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿ ಅವರಿಗೆ ಸರ್ಕಾರದಿಂದ ಉದ್ಯೋಗ ಮತ್ತು ಮನೆ ನೀಡುವ ಕುರಿತು ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತಾದ ಅಧಿಕೃತ ಆದೇಶದ ಪತ್ರಗಳನ್ನು ಗಣರಾಜ್ಯೋತ್ಸವದಂದೇ ಹಸ್ತಾಂತರಿಸಲಾಗುವುದು. ಅಲ್ಲದೇ ಕಾನೂನು ತಜ್ಞರ ಜತೆ ಚರ್ಚೆ ನಡೆಸಿ, ಇದೊಂದು ವಿಶೇಷ ಪ್ರಕರಣ ಎಂದು ಭಾವಿಸಿ, ನಿಧಿಯ ಕಾಲಘಟ್ಟವನ್ನು ನಿರ್ಣಯ ಮಾಡಲಿದ್ದಾರೆ. ಸಿಕ್ಕಿರುವ ನಿಧಿಯ ಕಾಲಘಟ್ಟವನ್ನು ನಿರ್ಧರಿಸಲು ತಾಂತ್ರಿಕ ಸಮಿತಿಯನ್ನು ರಚಿಸಲು ಸೂಚಿಸಲಾಗಿದೆ. ಅದರ ಸೂಚನೆ ಮೇರೆಗೆ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿಢೀರ್‌ ಸುರ್ಜೇವಾಲಾ ಭೇಟಿಯಾದ ಜಮೀರ್‌
ದೆಹಲಿ ಭೇಟಿ ವೇಳೆ ಉಪಮುಖ್ಯಮಂತ್ರಿ ನಿಗೂಢ ಹೇಳಿಕೆ