ಕೊಪ್ಪಳ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಡೆದ 17ನೇ ಅಂತರ್ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.ರಾಜ್ಯದ ವಿವಿಧ ಜಿಲ್ಲೆಗಳ 42 ವಿವಿಧ ಮಹಿಳಾ ಕಾಲೇಜುಗಳಿಂದ 550ಕ್ಕೂಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬಿಎ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಐಶ್ವರ್ಯಾ ಬಿ. ರಾಠೋಡ್ ಅವರು ಸರಪಳಿ ಗುಂಡು ಎಸೆತ ಸ್ಪರ್ಧೆಯಲ್ಲಿ 20.63 ಮೀಟರ್ ದೂರ ಎಸೆದು ಹೊಸ ದಾಖಲೆ ನಿರ್ಮಿಸಿದ್ದಾರೆ. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶನಾಲಯ ಅವರನ್ನು ಸನ್ಮಾನಿಸಿ ₹5000 ಪ್ರೋತ್ಸಾಹಧನ ನೀಡಿದೆ.
ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿನಿ ದೇವಮ್ಮ ಅವರು 10 ಸಾವಿರ ಮೀಟರ್ ಓಟವನ್ನು 53:39.18 ನಿಮಿಷಗಳಲ್ಲಿ ಪೂರ್ಣಗೊಳಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ. 5 ಸಾವಿರ ಮೀಟರ್ ಓಟವನ್ನು 26:46.41 ನಿಮಿಷಗಳಲ್ಲಿ ಪೂರ್ಣಗೊಳಿಸಿ ನಾಲ್ಕನೇ ಸ್ಥಾನ ತನ್ನದಾಗಿಸಿಕೊಂಡಿದ್ದಾರೆ. ಮಂಜುಳಾ ಉದ್ದ ಜಿಗಿತ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದಾರೆ.ಸನ್ಮಾನ: ಸೋಮವಾರ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿ, ಹೊಸ ಟ್ರಾಕ್ ಸೂಟ್, ಶೂ ನೀಡಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರದೀಪ್ ಕುಮಾರ್ ಯು. ಅವರು, ನಮ್ಮ ಕಾಲೇಜಿನಲ್ಲಿ ಹೆಚ್ಚಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, ಈ ವಿದ್ಯಾರ್ಥಿನಿಯರು ದೈಹಿಕವಾಗಿ ಹೆಚ್ಚು ಸದೃಢರಾಗಿರುತ್ತಾರೆ. ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ. ಇಂತಹ ವಿದ್ಯಾರ್ಥಿನಿಯರಿಗೆ ಕ್ರೀಡೆಯ ಕೌಶಲ್ಯ ಹಾಗೂ ನೈಪುಣ್ಯತೆ ಕಲಿಸಿಕೊಟ್ಟರೆ ಸಾಕು. ಅವರು ಕ್ರೀಡೆಗಳಲ್ಲಿ ಹೆಚ್ಚಿನ ಸಾಧನೆ ಮಾಡಬಹುದು ಎಂದರು.ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಕೆ. ಲಮಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದರೆ ಅವರಿಗೆ ಸರ್ಕಾರಿ ನೌಕರಿಯಲ್ಲಿ ಶೇ. 2 ಮೀಸಲಾತಿ ದೊರೆಯುತ್ತದೆ ಎಂದರು.ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಹುಲಿಗೆಮ್ಮ ಬಿ. ಮಾತನಾಡಿ, ಮಹಿಳೆಯರು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಸೋಲು-ಗೆಲುವಿನ ಅರಿವು ಅವರಿಗಾಗುತ್ತದೆ. ಇದು ಅವರ ವೈಯಕ್ತಿಕ ಜೀವನದಲ್ಲಿಯೂ ಉಪಯೋಗಕ್ಕೆ ಬರುತ್ತದೆ. ಸೋಲು-ಗೆಲುವು ಸಮನಾಗಿ ತೆಗೆದುಕೊಳ್ಳುವ ಮಾನಸಿಕತೆ ಅವರಿಗೆ ಬರುತ್ತದೆ ಎಂದರು.
ಕಾಲೇಜಿನ ಉಪನ್ಯಾಸಕರಾದ ವಿಠೋಬಾ ಎಸ್., ನಾಗರತ್ನಾ ಬಿ. ತಮ್ಮಿನಾಳ, ಶ್ರೀಕಾಂತ್ ಸಿಂಗಾಪುರ, ಉಮೇಶ್ ಕಾತರಕಿ ಇದ್ದರು, ಉಪನ್ಯಾಸಕ ಡಾ. ನರಸಿಂಹ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರದೀಪ್ ಕುಮಾರ್ ಯು. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.