ಔದ್ಯೋಗಿಕ ಹಬ್‌ ಆಗಿ ಬೆಳೆಯಲು ಬೆಳಗಾವಿಗೆ ಸುವರ್ಣವಕಾಶ: ಜೀತ್ ಗೋಯೆಲ್

KannadaprabhaNewsNetwork |  
Published : Jul 13, 2024, 01:36 AM IST
ಅಅಅಅ | Kannada Prabha

ಸಾರಾಂಶ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದಲ್ಲಿ ಸ್ಥಾಪಿಸಲಾದ ವಿಶ್ವೇಶ್ವರಯ್ಯ ರಿಸರ್ಚ್ ಮತ್ತು ಇನ್ನೊವೇಶನ್‌ ಫೌಂಡೇಶನ್ ಹಾಗೂ ಯುಎಸ್ಎ ಮೂಲದ ಎಕ್ಸೆಲ್ ಕಾರ್ಪ್ ಕಂಪನಿಯ ಸಾಫ್ಟ್ ವೇರ್ ಡೆವಲಪ್ಮೆಂಟ್ ಮತ್ತು ಪ್ರಾಡಕ್ಟ್ ಇನ್ನೊವೇಶನ್ ಕೇಂದ್ರವನ್ನು ಶುಕ್ರವಾರ ಎಕ್ಸೆಲ್ ಕಾರ್ಪ್ ಕಂಪನಿಯ ಸಂಸ್ಥಾಪಕ ಜೀತ್ ಗೋಯೆಲ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಔದ್ಯೋಗಿಕ ಹಬ್ ಆಗಿ ಬೆಳೆಯುವ ಎಲ್ಲ ಸಾಮರ್ಥ್ಯ ಹೊಂದಿದೆ. ಇಲ್ಲಿ ಯುವ ಪ್ರತಿಭೆಗಳು ಸಾಕಷ್ಟಿದ್ದು, ಮೂಲಸೌಕರ್ಯ, ಕೈಗಾರಿಕೆಗಳು ಮತ್ತು ಎಲ್ಲ ಕಾಲದಲ್ಲೂ ಅನುಕೂಲಕರ ವಾತಾವರಣ ಸೇರಿ ಕೈಗಾರಿಕೆಗಳು ಬೆಳೆಯಲು ಭೌಗೋಳಿಕವಾಗಿ ಅನೂಕೂಲತೆ ಹೊಂದಿದೆ ಎಂದು ಎಕ್ಸೆಲ್ ಕಾರ್ಪ್ ಕಂಪನಿಯ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೀತ್ ಗೋಯೆಲ್ ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಬೆಳಗಾವಿಯ ಕಂಪನಿ ಆಕ್ಟ್ ಸೆಕ್ಷನ್ 8 ಅಡಿಯಲ್ಲಿ ಸ್ಥಾಪಿಸಲಾದ ವಿಶ್ವೇಶ್ವರಯ್ಯ ರಿಸರ್ಚ್ ಮತ್ತು ಇನ್ನೊವೇಶನ್‌ ಫೌಂಡೇಶನ್ ಹಾಗೂ ಯುಎಸ್ಎ ಮೂಲದ ಎಕ್ಸೆಲ್ ಕಾರ್ಪ್ ಕಂಪನಿಯ ಸಾಫ್ಟ್ ವೇರ್ ಡೆವಲಪ್ಮೆಂಟ್ ಮತ್ತು ಪ್ರಾಡಕ್ಟ್ ಇನ್ನೊವೇಶನ್ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಇಲ್ಲಿನ ಯುವ ಪ್ರತಿಭೆಗಳು ಕೆಲಸ ಅರಿಸಿ ಬೆಂಗಳೂರು, ಪುಣೆ, ಹೈದರಾಬಾದ್‌ನಂತಹ ನಗರಕ್ಕೆ ಹೋಗುತ್ತಿದ್ದಾರೆ. ಇದನ್ನು ತಡೆದು ಉತ್ತರ ಕರ್ನಾಟಕ ಭಾಗದಲ್ಲಿ ಸಾಫ್ಟವೇರ್‌ ವಲಯದ ಜತೆಗೆ ಉತ್ಪಾನೆ ವಲಯದ ಕೈಗಾರಿಕೆ ಬೆಳೆಸಿ ವಿದ್ಯಾರ್ಥಿಗಳಿಗೆ ಔದ್ಯೋಗಿಕ ಕ್ಷೇತ್ರದ ಬೇಡಿಕೆಗೆ ತಕ್ಕಂತೆ ಕೌಶಲ್ಯಗಳನ್ನು ಮತ್ತು ಇಂಟರ್ನ್‌ಶಿಪ್‌ ನೀಡಲು ಎಕ್ಸೆಲ್ ಕಾರ್ಪ್ ತನ್ನ ಸಾಫ್ಟವೇರ್‌ ಡೆವಲಪ್ಮೆಂಟ್ ಕೇಂದ್ರ ತೆರೆದಿದ್ದು, ಇದರ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಉದ್ಯೋಗ ಸೃಷ್ಟಿಸುವ ಕಡೆಗೆ ಗಮನಹರಿಸಲಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ.ವಿದ್ಯಾಶಂಕರ ಎಸ್., ಇಂದು ವಿಟಿಯುಗೆ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಐತಿಹಾಸಿಕ ದಿನ. ರಾಜ್ಯದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸರ್ವಾಂಗೀಣ ಹಾಗೂ ಕೌಶಲ್ಯಭರಿತ ನಾಗರಿಕರನ್ನಾಗಿ ಮಾಡಿ ವಿಕಸಿತ ಭಾರತಕ್ಕೆ ದೊಡ್ಡ ಕೊಡುಗೆ ನೀಡಬೇಕೆನ್ನುವ ಉದ್ದೇಶದಿಂದ ವಿಟಿಯು ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಕೈಗಾರಿಕಾ ಕೇಂದ್ರಗಳನ್ನು ತರುವ ಉದ್ದೇಶ ಇವತ್ತು ಎಕ್ಸೆಲ್ ಕಾರ್ಪ್ ನ ಈ ಸಾಫ್ಟ್ ವೇರ್ ಡೆವಲಪ್ಮೆಂಟ್ ಹಾಗೂ ಪ್ರಾಡಕ್ಟ್ ಇನ್ನೊವೇಶನ್ ಕೇಂದ್ರದ ಉದ್ಘಾಟನೆಯೊಂದಿಗೆ ಸಾಕಾರಗೊಂಡಿದೆ ಎಂದು ಹೇಳಿದರು.

ಈ ಯೋಜನೆಗಳ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ ನಲ್ಲೇ ಔದ್ಯೋಗಿಕ ಮತ್ತು ತಾಂತ್ರಿಕ ಶಿಕ್ಷಣವನ್ನು ಒಂದೇ ವೇದಿಕೆಯಲ್ಲಿ ತಂದು ಇಂಟರ್ನ್‌ಶಿಪ್‌ ಮತ್ತು ತರಬೇತಿ ಮೂಲಕ ಇಂದಿನ ಔದ್ಯೋಗಿಕ ವಲಯಕ್ಕೆ ಅವಶ್ಯಕವಿರುವ ಕೌಶಲ್ಯ ನೀಡಲಾಗುತ್ತಿದ್ದು, ಅದಕ್ಕಾಗಿ ಸಿಎನ್ ಸಿ ವರ್ಕಶಾಪ್ ಸ್ಥಾಪಿಸಲಾಗಿದೆ. ಇದೆ ತರಹ ಕೌಶಲ್ಯ ನೀಡುವ ಪ್ರಯೋಗಾಲಯ ನಿರ್ಮಿಸಲಾಗುತ್ತಿದೆ. ಕೊಪ್ಪಳ ಮತ್ತು ದಾಂಡೇಲಿಯಲ್ಲಿರುವ ಕೌಶಲ್ಯ ಕೇಂದ್ರಗಳಲ್ಲಿ ತರಬೇತಿ ಕಾರ್ಯಕ್ರಮ ನಡೆಯುತ್ತಿವೆ. ಸುತ್ತಲಿನ ಎಂಜಿನಿಯರಿಂಗ್ ಕಾಲೇಜುಗಳ ಜತೆ ಒಡಂಬಡಿಕೆ ಮಾಡಿಕೊಂಡು ಇಂಟರ್ನ್‌ ಶಿಪ್ ನೀಡಲಾಗುತ್ತಿದೆ. ಇದೇ ಕಾರಣಕ್ಕೆ ವಿಟಿಯು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದ ಜತೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿರುವ ಸೃಜನಶೀಲ ಕೌಶಲ್ಯ ಗುರುತಿಸಿ ಹೊಸ ಸಂಶೋಧನೆಗೆ ಮೂರ್ತರೂಪ ಕೊಟ್ಟು ಹೊಸ ಉತ್ಪನ್ನ ಅಥವಾ ಸ್ಟಾರ್ಟಅಪ್ ಆರಂಭಿಸಲು ವಿಟಿಯು ಆರ್‌ಐಎಫ್‌ ಮುಖಾಂತರ ಉತ್ತೇಜನ ನೀಡಿ, ಬೆಳಗಾವಿಯನ್ನು ಸ್ಟಾರ್ಟ್ ಅಪ್ ಹಬ್ ಮಾಡುವ ಗುರಿ ಹೊಂದಿದೆ. ಇದಕ್ಕೆ ನೆರವಾಗುವ ರೀತಿಯಲ್ಲಿ ವಿಟಿಯು ನಲ್ಲಿ ಔದ್ಯೋಗಿಕ ಕ್ಷೇತ್ರದ ದಿಗ್ಗಜರೊಂದಿಗೆ ಎಲ್ಲ ಜಿಲ್ಲೆಗಳಲ್ಲಿ ಚಿಂತನ, ಮಂಥನ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಲಸಚಿವರಾದ ಪ್ರೊ.ಬಿ.ಇ.ರಂಗಸ್ವಾಮಿ, ಪ್ರೊ.ಟಿ.ಎನ್. ಶ್ರೀನಿವಾಸ ಉಪಸ್ಥಿತರಿದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ