ಕನ್ನಡಪ್ರಭ ವಾರ್ತೆ ಮಂಡ್ಯ
2021-22ನೇ ಸಾಲಿನ ಸಿಎಸ್‌ಆರ್ ಅನುದಾನದಡಿ ಜಿಲ್ಲೆಯಲ್ಲಿ ಕೈಗೊಂಡಿದ್ದ 6 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ವರ್ಕ್‌ಶಾಪ್ ಮತ್ತು ಟೆಕ್ನಾಲಜಿ ಲ್ಯಾಬ್ ಕಟ್ಟಡಗಳ ನಿರ್ಮಾಣ ಕಾಮಗಾರಿಗಳಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ವೈ.ಸಿ.ಮಧು ಆರೋಪಿಸಿದ್ದಾರೆ.ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿರುವ ಅವರು, ನಿರ್ಮಿತಿ ಕೇಂದ್ರ ಮತ್ತು ನೆಸ್ಟ್ ಇನ್ ಟಾಟಾ ಸ್ಟೀಲ್ ಲಿಮಿಟೆಡ್ ಖಾಸಗಿ ಕಂಪನಿಗಳ ನಡುವೆ ಅನ್‌ಸೈನ್ಡ್ ಡಾಕ್ಯೂಮೆಂಟ್ ಒಪ್ಪಂದ ಆಧಾರದಲ್ಲಿ ಕಳಪೆ ಕಾಮಗಾರಿ ನಡೆಸಲಾಗಿದೆ. ನಕಲಿ ಬಿಲ್ ಸೃಷ್ಟಿಸಿ ಹಣ ಡ್ರಾ ಮಾಡಲು ಮುಖ್ಯಮಂತ್ರಿ ಸಚಿವಾಲಯದ ಪ್ರಭಾವ ಬಳಸಿ ಹಣ ದುರ್ಬಳಕೆ ಮಾಡಲಾಗಿದ್ದು, ಈ ಸಂಬಂಧ ಸಮಗ್ರ ತನಿಖೆ ನಡೆಸಬೇಕು ಎಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆಗ್ರಹಪಡಿಸಿದರು.ಟಾಟಾ ಟೆಕ್ನಾಲಜೀಸ್ ಸಹಭಾಗಿತ್ವದಲ್ಲಿ ಜಿಲ್ಲೆಯ ಮಂಡ್ಯ ನಗರ, ಮಳವಳ್ಳಿ, ನಾಗಮಂಗಲ, ಕೆ.ಆರ್.ಪೇಟೆ, ಮದ್ದೂರು ತಾಲೂಕಿನ ಸೋಮನಹಳ್ಳಿ, ಪಾಂಡವಪುರ ತಾಲೂಕಿನ ಚಿನಕುರಳಿಯಲ್ಲಿ ವರ್ಕ್‌ಶಾಪ್ ಮತ್ತು ಟೆಕ್ನಾಲಜಿ ಲ್ಯಾಬ್ ಕಟ್ಟಡಗಳ ನಿರ್ಮಾಣ ಕಾಮಗಾರಿಗಳಿಗೆ ತಲಾ 83.29 ಲಕ್ಷ ರು. 20.29 ಲಕ್ಷ ರು. ಅಂದಾಜು ಮೊತ್ತ ಸಿದ್ಧವಾಗಿತ್ತು ಎಂದು ಹೇಳಿದರು.ಮಂಡ್ಯ ನಗರ ಐಟಿಐ ಕಾಲೇಜು ವರ್ಕ್‌ಶಾಪ್‌ಗೆ 83.29 ಲಕ್ಷ ರು., ಟೆಕ್ ಲ್ಯಾಬ್ ಉನ್ನತೀಕರಣಕ್ಕೆ 41.40 ಲಕ್ಷ ರು. ಮತ್ತು ಟೆಕ್ನಾಲಜಿ ಲ್ಯಾಬ್ ನಿರ್ಮಾಣಕ್ಕೆ 20.29 ಲಕ್ಷ ರು.ಗೆ ನಿರ್ಮಿತಿ ಕೇಂದ್ರದವರು ಅಂದಾಜುಪಟ್ಟಿ ಸಿದ್ಧಪಡಿಸಿದ್ದರು. ಕಾಮಗಾರಿ ನಿರ್ವಹಿಸಲು ಮುಂಗಡವಾಗಿ ಟಾಟಾ ಸ್ಟೀಲ್ ಲಿಮಿಟೆಡ್‌ನವರಿಗೆ 5,74,018 ರು.ಗಳನ್ನು ಪಾವತಿಸಲು ಅಂದಿನ ಜಿಲ್ಲಾಧಿಕಾರಿಯವರ ಮುಂದಿಟ್ಟಾಗ, ಅನ್‌ಸೈನ್ಡ್ ಡಾಕ್ಯುಮೆಂಟ್‌ನಂತೆ ಒಪ್ಪಂದವಾಗಿದ್ದು ಇದಕ್ಕೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತರ ಅನುಮತಿ ಪಡೆದು ಹಣ ಪಾವತಿಸುವಂತೆ ಸೂಚಿಸಿದ್ದಾಗಿ ತಿಳಿಸಿದರು.ಆನಂತರ ಕಾರ್ನಿಕ್ ಹಾಗೂ ಟಾಟಾ ಸ್ಟೀಲ್ ಲಿಮಿಟೆಡ್‌ನವರ ನಡುವೆ ಆಗಿರುವ ಅನ್‌ಸೈನ್ಡ್ ಒಪ್ಪಂದ ಪತ್ರದ ಕರಾರಿನಂತೆ ಐಟಿಐ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಅವಶ್ಯವಿರುವ ಸ್ಟೀಲ್ ಫ್ಯಾಬ್ರಿಕೇಷನ್ ಮೆಟೀರಿಯಲ್ ಸರಬರಾಜು ಮಾಡಿದ್ದಕ್ಕೆ 17,22,054 ರು.ಗಳನ್ನು ಪಾವತಿಸಲು ಅನುಮೋದನೆ ಕೇಳಿದ್ದು, ಇದಕ್ಕೆ ಜಿಲ್ಲಾಧಿಕಾರಿ ಹಿಂದೇಟು ಹಾಕಿದ್ದರು. ಬಳಿಕ ಇದೇ ವಿಚಾರವಾಗಿ ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಕಾರ್ಯದರ್ಶಿ ದೂರವಾಣಿ ಮೂಲಕ ಹಣ ಪಾವತಿಸಲು ಸೂಚಿಸಿದಾಗ ಅಂದಿನ ಜಿಲ್ಲಾಧಿಕಾರಿಗಳು ಅನುಮತಿಸಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ಆದೇಶ, ಸೂಚನೆಗಳ ಮಾಹಿತಿಗಳ ಕಡತದಲ್ಲಿಲ್ಲದಿದ್ದರೂ ಹಣ ಸಂದಾಯ ಮಾಡಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರವೇ ಸಿಗದಂತಾಗಿದೆ. ಇದನ್ನು ಗಮನಿಸಿದಾಗ ಹಣ ದುರ್ಬಳಕೆಯಾಗಿರುವ ಶಂಕೆ ಮೂಡುತ್ತಿದೆ ಎಂದರು.ಜಿಲ್ಲೆಯ ಆರು ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಏಕಪ್ರಕಾರವಾಗಿ 7,500 ಚದರಡಿ ವರ್ಕ್‌ಶಾಪ್ ಮತ್ತು ಟೆಕ್ನಾಲಜಿ ಲ್ಯಾಬ್ ನಿರ್ಮಾಣ ಮಾಡಬೇಕಿದ್ದರೂ ಕಾಮಗಾರಿಗೆ ಬಳಸಿರುವ ಸಿಮೆಂಟ್ ಒಂದೊಂದು ತಾಲೂಕಿನಲ್ಲಿ ಒಂದೊಂದು ರೀತಿಯಲ್ಲಿರುವುದು ಭ್ರಷ್ಟಾಚಾರ ನಡೆದಿರುವುದಕ್ಕೆ ಪುಷ್ಠಿ ನೀಡುವಂತಿದೆ ಎಂದು ಹೇಳಿದರು.ಪಾಂಡವಪುರದ ಚಿನಕುರಳಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ 23.28 ಲಕ್ಷ ರು., ನಾಗಮಂಗಲದಲ್ಲಿ 5.28 ಲಕ್ಷ ರು.., ಮಳವಳ್ಳಿಯಲ್ಲಿ 5.28 ಲಕ್ಷ ರು., ಮದ್ದೂರಿನ ಸೋಮಹಳ್ಳಿಯಲ್ಲಿ 4.78 ಲಕ್ಷ ರು., ಮಂಡ್ಯ ನಗರದಲ್ಲಿ 1.98 ಲಕ್ಷ ರು. ಹಾಗೂ ಕೆ.ಆರ್.ಪೇಟೆ ಪಟ್ಟಣದ ಕಟ್ಟಡ ಕಾಮಗಾರಿಗೆ 2.96 ಲಕ್ಷ ರು. ಸಿಮೆಂಟ್ ಬಳಸಿರುವುದನ್ನು ದಾಖಲೆಗಳ ಸಹಿತ ವಿವರಿಸಿದರು.ಈ ಐಟಿಐ ಕಾಲೇಜುಗಳ ಅಂದಾಜು ಪಟ್ಟಿಯನ್ನು ಒಂದೊಂದು ಕಡೆ ಒಂದೊಂದು ರೀತಿ ತೋರಿಸಿದ್ದಾರೆ. ಎಲೆಕ್ಟ್ರಾನಿಕ್ ಮೆಜರ್‌ಮೆಂಟ್ ಬುಕ್‌ಗೂ ಮತ್ತು ಅಂದಾಜುಪಟ್ಟಿಗೂ ತಾಳೆ ಇರುವುದಿಲ್ಲ. ಕಾಮಗಾರಿಯ ತಪಾಸಣಾ ವರದಿಯಲ್ಲಿ ಕಂಡುಬಂದ ನ್ಯೂನತೆಗಳನ್ನು ಸರಿಪಡಿಸಿ ಕಾಮಗಾರಿಯನ್ನು ಪೂಣಣೊಳಿಸಿಲ್ಲ. ಮೂರನೇ ವ್ಯಕ್ತಿಯ ತಪಾಸಣಾ ವರದಿ, ಕಾಮಗಾರಿ ಪೂರ್ಣಗೊಂಡ ಬಗ್ಗೆ ವರದಿ ಪಡೆಯದೆ ಅಂತಿಮಬಿಲ್‌ಗಳನ್ನು ಪಾವತಿಸಲಾಗಿದೆ ಎಂದು ದೂರಿದರು.ಕಚೇರಿ ಟಿಪ್ಪಣಿಯಲ್ಲಿ ಬಿಡುಗಡೆ ಮಾಡಿರುವ ಹಣಕ್ಕೂ ಮತ್ತು ಲೆಡ್ಜರ್ ಅಕೌಂಟ್‌ನ ಸ್ಕ್ರಾಲ್‌ನಲ್ಲಿ ಬಿಡುಗಡೆಯಾಗಿರುವ ಹಣಕ್ಕೂ ವ್ಯತ್ಯಾಸವಿದ್ದು ತಾಳೆಯಾಗಿರುವುದಿಲ್ಲ. ಯಾವುದೇ ಕಾಲೇಜುಗಳನ್ನು ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಇದುವರೆಗೂ ಹಸ್ತಾಂತರ ಮಾಡಿಲ್ಲ. ಹೀಗಾಗಿ ಕಳಪೆ ಕಾಮಗಾರಿ ನಡೆಸಿ ವೈಯಕ್ತಿಕ ಲಾಭಕ್ಕೆ ಹಣ ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಡ್ಡಿ ಸಹಿತ ಲೂಟಿ ಮಾಡಿರುವ ಹಣವನ್ನು ವಸೂಲಿ ಮಾಡುವಂತೆ ಒತ್ತಾಯಿಸಿದರು.ಬಾಕ್ಸ್--------15 ವರ್ಷದ ಹಗರಣ ತನಿಖೆಗೊಳಪಡಿಸಿಲ್ಲಮಂಡ್ಯ:ಜಿಲ್ಲಾ ನಿರ್ಮಿತಿ ಕೇಂದ್ರದಲ್ಲಿ 15 ವರ್ಷಗಳಿಂದ ನಡೆದಿರುವ ಹಗರಣವನ್ನು ಕರ್ನಾಟಕ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ತನಿಖಾ ಸಂಸ್ಥೆ ಅಥವಾ ಸಿಬಿಐನಿಂದ ತನಿಉಖೆ ನಡೆಸುವಂತೆ ಕರ್ನಾಟಕ ರಾಜ್ಯ ನಿರ್ಮಾಣ ಕೇಂದ್ರ ಜಿಲ್ಲಾಧಿಕಾರಿಗೆ 2.12.2024ರಲ್ಲಿ ಪತ್ರ ಬರೆದಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಭ್ರಷ್ಟಾಚಾರ ಮುಚ್ಚಿಡುವ ಪ್ರಯತ್ನವೆಂಬಂತೆ ಕಂಡುಬರುತ್ತಿದೆ ಎಂದು ವೈ.ಸಿ.ಮಧು ಶಂಕೆ ವ್ಯಕ್ತಪಡಿಸಿದರು.ನಿರ್ಮಿತಿ ಕೇಂದ್ರದ ನಿವೃತ್ತ ಯೋಜನಾ ವ್ಯವಸ್ಥಾಪಕ ನರೇಶ್ ಅವರನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡು ಕ್ರಮ ವಹಿಸುವಂತೆ ಹಾಗೂ ಸಂಸದರಾಗಿದ್ದ ಎಲ್.ಆರ್.ಶಿವರಾಮೇಗೌಡ ಸೇರಿದಂತೆ ಹಲವರು ಅವ್ಯವಹಾರಗಳ ತನಿಖೆ ನಡೆಸುವಂತೆ ಮನವಿ ಸಲ್ಲಿಸಿರುವ ಬಗ್ಗೆ ತಿಳಿಸಿದ್ದರೂ ಯಾವುದಕ್ಕೂ ಪ್ರತಿಕ್ರಿಯಿಸದೆ ಜಿಲ್ಲಾಧಿಕಾರಿ ಮೌನವಹಿಸಿದ್ದಾರೆ ಎಂದು ದೂರಿದರು.
೩ಕೆಎಂಎನ್‌ಡಿ-೧ಸಾಮಾಜಿಕ ಕಾರ್ಯಕರ್ತ ವೈ.ಸಿ.ಮಧು ನಿರ್ಮಿತಿ ಕೇಂದ್ರದ ಹಗರಣಗಳ ಕುರಿತು ದಾಖಲೆಗಳ ಸಹಿತ ಸುದ್ದಿಗೋಷ್ಠಿ ನಡೆಸಿದರು.