ಕಾರ್ಮಿಕರ ‘ವಿವಾಹ ನೆರವು ಯೋಜನೆ’ಯಲ್ಲಿ ಗೋಲ್‌ಮಾಲ್‌

KannadaprabhaNewsNetwork |  
Published : Sep 14, 2025, 01:04 AM ISTUpdated : Sep 14, 2025, 12:01 PM IST
friendship marriage rising trend urban youth india

ಸಾರಾಂಶ

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ‘ವಿವಾಹ ನೆರವು ಯೋಜನೆ’ಯಡಿ ನೋಂದಾಯಿತ ಕಾರ್ಮಿಕರ ಮಕ್ಕಳ ಮದುವೆ ವೆಚ್ಚ ಭರಿಸಲು ನೀಡುವ ಸಹಾಯಧನ ದುರ್ಬಳಕೆಯಾಗಿರುವುದು ಮಹಾಲೆಕ್ಕ ಪರಿಶೋಧಕರ ವರದಿಯಲ್ಲಿ (ಸಿಎಜಿ) ಬೆಳಕಿಗೆ ಬಂದಿದೆ.

ಮೋಹನ ಹಂಡ್ರಂಗಿ 

 ಬೆಂಗಳೂರು :  ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ‘ವಿವಾಹ ನೆರವು ಯೋಜನೆ’ಯಡಿ ನೋಂದಾಯಿತ ಕಾರ್ಮಿಕರ ಮಕ್ಕಳ ಮದುವೆ ವೆಚ್ಚ ಭರಿಸಲು ನೀಡುವ ಸಹಾಯಧನ ದುರ್ಬಳಕೆಯಾಗಿರುವುದು ಮಹಾಲೆಕ್ಕ ಪರಿಶೋಧಕರ ವರದಿಯಲ್ಲಿ (ಸಿಎಜಿ) ಬೆಳಕಿಗೆ ಬಂದಿದೆ.

ನೋಂದಾಯಿತ ಕಾರ್ಮಿಕರ ಬದಲು ಕೃಷಿ, ವ್ಯಾಪಾರ ಹಾಗೂ ಖಾಸಗಿ ವಲಯದ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವ 18 ಮಂದಿ ಫಲಾನುಭವಿಗಳ ಮಕ್ಕಳ ಮದುವೆಗೆ ತಲಾ 50 ಸಾವಿರ ರು. ಸಹಾಯಧನ ಮಂಜೂರು ಮಾಡಲಾಗಿದೆ. ಈ ಮೂಲಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ನಿಯಮ ಉಲ್ಲಂಘಿಸಿರುವುದು ಬಯಲಾಗಿದೆ.

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ವಿವಾಹ ನೆರವು ಯೋಜನೆಯಡಿ ನೋಂದಾಯಿತ ಕಟ್ಟಡ ಅಥವಾ ನಿರ್ಮಾಣ ಕಾರ್ಮಿಕನ ಇಬ್ಬರು ಮಕ್ಕಳಿಗೆ ಸೀಮಿತವಾಗಿ ಮದುವೆ ವೆಚ್ಚ ಭರಿಸಲು 50 ಸಾವಿರ ರು. ಸಹಾಯಧನ ನೀಡುತ್ತಿದೆ. ಈ ಸಂಬಂಧ ರಾಜ್ಯ ಸರ್ಕಾರದ 2018ರ ಆದೇಶದ ಅನ್ವಯ ಈ 50 ಸಾವಿರ ರು. ಪೈಕಿ ಶೇ.50ರಷ್ಟು ಹಣವನ್ನು ವಧುವಿನ ಹೆಸರಿನಲ್ಲಿ ಕನಿಷ್ಠ ಮೂರು ವರ್ಷ ಸ್ಥಿರ ಠೇವಣಿ ಅಥವಾ ಬಾಂಡ್‌(ಗೃಹ ಲಕ್ಷ್ಮೀ ಬಾಂಡ್‌) ರೂಪದಲ್ಲಿ ಇರಿಸಬೇಕು. ಉಳಿದ ಶೇ.50ರಷ್ಟು ಹಣ ಫಲಾನುಭವಿಯ ಹೆಸರಿನಲ್ಲಿ ಆರ್‌ಟಿಜಿಎಸ್‌ ಮುಖಾಂತರ ಪಾವತಿಸಬೇಕು ಎಂಬ ಷರತ್ತು ವಿಧಿಸಲಾಗಿದೆ. ಆದರೆ, 2020ರಲ್ಲಿ ಈ ಷರತ್ತನ್ನು ಪರಿಷ್ಕರಣೆಗೆ ಒಳಪಡಿಸಿ ಸಂಪೂರ್ಣ ಮೊತ್ತವನ್ನು ವಧುವಿನ ಬ್ಯಾಂಕ್‌ ಖಾತೆಗೆ ವರ್ಗಾಯಿಸಲಾಗುತ್ತಿದೆ.

624 ಬಾಂಡ್‌ಗಳು ಕಚೇರಿಯಲ್ಲೇ ಬಾಕಿ:

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ 2018-20ನೇ ಸಾಲಿನಲ್ಲಿ ವಿವಾಹ ನೆರವು ಯೋಜನೆಯಡಿ 1,013 ವಿವಾಹ ಬಾಂಡ್‌ ವಿತರಿಸಿದೆ. ಈ ಪೈಕಿ 624 ಪ್ರಕರಣಗಳಲ್ಲಿ ವಿವಾಹ ಬಾಂಡ್‌ಗಳು ಮೂರು ವರ್ಷಗಳ ಲಾಕ್‌ ಇನ್‌ ಅವಧಿಯಲ್ಲಿ ಇದ್ದರೂ ಕಾರ್ಮಿಕರ ಕಚೇರಿಯಲ್ಲೇ ಇರಿಸಿಕೊಂಡಿರುವುದು ಮಹಾಲೆಕ್ಕಪರಿಶೋಧನೆ ವೇಳೆ ಗಮನಕ್ಕೆ ಬಂದಿದೆ.

ಅಂತೆಯೇ 45 ಪ್ರಕರಣಗಳಲ್ಲಿ ಮೂರು ವರ್ಷ ಪೂರ್ಣಗೊಂಡಿರುವ ಬಾಂಡ್‌ಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸದೆ ಕಾರ್ಮಿಕ ಕಚೇರಿಗಳಲ್ಲಿ ಉಳಿಸಿಕೊಂಡಿರುವುದು ಕಂಡು ಬಂದಿದೆ. ಇದರಿಂದ ಫಲಾನುಭವಿಗಳು ಆರ್ಥಿಕ ಬೆಂಬಲದಿಂದ ವಂಚಿತರಾಗಿದ್ದಾರೆ ಎಂದು ಸಿಎಜಿ ವರದಿ ಉಲ್ಲೇಖಿಸಲಾಗಿದೆ.

ಯೋಜನೆಯ ಸಮಗ್ರತೆಗೆ ಧಕ್ಕೆ:

ಕೃಷಿ, ವ್ಯಾಪಾರ ಹಾಗೂ ಖಾಸಗಿ ವಲಯದ ಉದ್ಯೋಗಗಳಲ್ಲಿ ತೊಡಗಿರುವ ವ್ಯಕ್ತಿಗಳ ಮಕ್ಕಳ ವಿವಾಹಕ್ಕೆ ನಿಯಮಬಾಹಿರವಾಗಿ ಸಹಾಯಧನ ಮಂಜೂರು ಮಾಡಿರುವುದು ಆಡಳಿತಾತ್ಮಕ ವೈಫಲ್ಯ. ಇಂತಹ ಲೋಪಗಳು ಯೋಜನೆಯನ್ನು ದುರ್ಬಲಗೊಳಿಸುವ ಜತೆಗೆ ಯೋಜನೆಯ ಸಮಗ್ರತೆಗೆ ಧಕ್ಕೆ ಉಂಟು ಮಾಡುತ್ತವೆ ಎಂದು ಸಿಎಜಿ ವರದಿಯಲ್ಲಿ ದಾಖಲಿಸಲಾಗಿದೆ.

PREV
Read more Articles on

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು